ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಪ್ರಕರಣ – ಬಂಧಿತ ತಹಸಿಲ್ದಾರ್ ಅಜಿತ್ ಕುಮಾರ್ ರೈ – 7 ದಿನ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ

0

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧಿತರಾಗಿರುವ ಕೆ.ಆರ್.ಪುರಂನ ಹಿಂದಿನ ತಹಶೀಲ್ದಾರ್, ಪುತ್ತೂರು ಮೂಲದ ಅಜಿತ್ ಕುಮಾರ್ ರೈ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಅವಧಿಗೆ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ಜೂ.28 ರಂದು ವಶಕ್ಕೆ ಪಡೆದು ಜೂ.29 ರಂದು ಬೆಳಿಗ್ಗೆ ಬಂಧಿಸಿದ್ದರು. ಜೂ.30 ರಂದು ಅಜಿತ್ ಕುಮಾರ್ ರೈಯವರನ್ನು ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಲೋಕಾಯುಕ್ತ ಪೊಲೀಸರು, ಈ ಪ್ರಕರಣದಲ್ಲಿ ಇನ್ನಷ್ಟು ತನಿಖೆ ನಡೆಸಬೇಕಾದ ಅಗತ್ಯವಿರುವುದರಿಂದ ಆರೋಪಿ ತಹಸಿಲ್ದಾರ್ ಅಜಿತ್ ರೈಯವರನ್ನು 10 ದಿನಗಳ ಅವಧಿಗೆ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅಜಿತ್ ಕುಮಾರ್ ರೈಯವರನ್ನು 10 ದಿನಗಳ ಬದಲು 7 ದಿನ ಲೋಕಾಯುಕ್ತ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಭ್ರಷ್ಟಾಚಾರ, ಆದಾಯಕ್ಕಿಂತ ಅಧಿಕ ಆದಾಯ ಗಳಿಕೆ ದೂರುಗಳ ಹಿನ್ನೆಲೆಯಲ್ಲಿ ಜೂ.28 ರಂದು ಬೆಳ್ಳಂಬೆಳಗ್ಗೆ ಅಜಿತ್ ಕುಮಾರ್ ರೈ ಸೇರಿ ರಾಜ್ಯದಲ್ಲಿ 15 ಅಧಿಕಾರಿಗಳ ಮನೆ, ಕಚೇರಿ, ಆಪ್ತರ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಅಜಿತ್ ಕುಮಾರ್ ರೈ ಪ್ರಕರಣದಲ್ಲಿ, ಬೆಂಗಳೂರುನಲ್ಲಿರುವ ಅವರ ಮನೆ, ಅವರ ಅಣ್ಣ ಅಶಿತ್ ರೈಯವರ ಮನೆ, ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ತಾಯಿ ಮನೆ, ಬೆಂಗಳೂರುನಲ್ಲಿರುವ ಸ್ನೇಹಿತ ಗೌರವ್ ಶೆಟ್ಟಿಯವರ ಮನೆ ಸೇರಿದಂತೆ ಸುಮಾರು 11 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ದಾಳಿ ಸಂದರ್ಭ 40 ಲಕ್ಷ ರೂ.ನಗದು, 700 ಗ್ರಾಮ್ ಚಿನ್ನ, 1.9 ಕೋಟಿ ರೂ.ಮೌಲ್ಯದ ನೂರಾರು ಎಕ್ರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ ಪತ್ರ, ಬೇರೆ ಬೇರೆಯವರ ಹೆಸರಲ್ಲಿರುವ ಹಲವು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಪತ್ರಗಳು ಪತ್ತೆಯಾಗಿದ್ದವು. ಇವುಗಳು ಬೇನಾಮಿ ಆಸ್ತಿಗಳು ಎಂದು ಶಂಕಿಸಿದ್ದ ಲೋಕಾಯುಕ್ತ ಪೊಲೀಸರು ಹೆಚ್ಚಿನ ತನಿಖೆಗಾಗಿ ಅಜಿತ್ ಕುಮಾರ್ ರೈಯವರನ್ನು ಬಂಧಿಸಿದ್ದರು. ಇದೀಗ ಇನ್ನೂ ಹೆಚ್ಚಿನ ತನಿಖೆಗಾಗಿ 7 ದಿನಗಳ ಅವಧಿಗೆ ಅಜಿತ್ ಕುಮಾರ್ ರೈಯವರನ್ನು ಲೋಕಾಯುಕ್ತ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಸಾಗುವಿನಲ್ಲಿ ಮಹಜರು: ಬಂಧಿತ ಅಜಿತ್ ಕುಮಾರ್ ರೈಯವರನ್ನು ಸಾಗುವಿನಲ್ಲಿರುವ ಅವರ ತಾಯಿ ಮನೆ ಸೇರಿದಂತೆ ವಿವಿಧ ಕಡೆಗಳಿಗೆ ಕರೆದೊಯ್ದು ಪೊಲೀಸರು ಮಹಜರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here