ಪುತ್ತೂರು: ಫಸಲುವಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಬಗ್ಗೆ ಪುತ್ತೂರು ಶಾಸಕರಿಗೆ ತಿಳುವಳಿಕೆ ಇಲ್ಲ, ಅವರು ಕೃಷಿಕರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ರವರು ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಶೋಕ್ ರೈ ವಿರುದ್ದ ಆರೋಪ ಮಾಡಿದ್ದು ಈ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನರಿಮೊಗರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಡಗನ್ನೂರುರವರು ವಿಮಾ ಯೋಜನೆಯ ಬಗ್ಗೆ ಶಾಸಕರಾದ ಅಶೋಕ್ ರೈಗೆ ತಿಳುವಳಿಕೆ ಇಲ್ಲ ಎಂದು ಆರೋಪ ಮಾಡಿದ ಮಾಜಿ ಶಾಸಕರಿಗೆ ವಿಮಾ ಯೋಜನೆಯ ಬಗ್ಗೆ ತಿಳುವಳಿಕೆ ಇದ್ದಿದ್ದರೆ ಅದನ್ನು ರದ್ದು ಮಾಡುವಾಗ ಯಾಕೆ ಮಾತನಾಡದೆ ಮೌನವಾಗಿದ್ದರು, ಮಾಜಿ ಶಾಸಕರಿಗೆ ಮಾತನಾಡುವ ತಾಕತ್ತಿರಲಿಲ್ಲವೇ? ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿದ್ದ ಅಡಿಕೆ ಮತ್ತು ಕಾಳುಮೆಣಸನ್ನು ಬಿಜೆಪಿ ಸರಕಾರ ರದ್ದು ಮಾಡಿತ್ತು ಆವಾಗ ಮಠಂದೂರು ಅವರು ಯಾಕೆ ಮಾತನಾಡಲಿಲ್ಲ. ಬಿಜೆಪಿ ಸರಕಾರ ಅಡಿಕೆ ಮತ್ತು ಕಾಳುಮೆಣಸನ್ನು ಯೋಜನೆಯಿಂದ ಕೈ ಬಿಟ್ಟಿದ್ದು ಇಲ್ಲಿನ ಕೃಷಿಕರಿಗೆ ತೊಂದರೆಯಾಗಿದೆ ಎಂದು ಸರಕಾರದ ಗಮನಕ್ಕೆ ತಂದು ಅದನ್ನು ಮತ್ತೆ ಯೋಜನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯೋಜನೆಯ ಬಗ್ಗೆ ಮಾತನಾಡುವಾಗ ಶಬ್ದಗಳು ಎಡವಿರಬಹುದು ಅದನ್ನೇ ದೊಡ್ಡದು ಮಾಡುವ ಅಗತ್ಯವಾದರೂ ಏನಿತ್ತು ಎಂದು ಬಡಗನ್ನೂರು ಪ್ರಶ್ನಿಸಿದ್ದಾರೆ. ಅಭಿವೃದ್ದಿ ವಿಚಾರದ ಬಗ್ಗೆ ಮಾತನಾಡಲಿ ನಮ್ಮದು ಆಕ್ಷೇಪವಿಲ್ಲ ಅದನ್ನು ಬಿಟ್ಟು ಶಾಸಕರಾಗಿದ್ದಾಗ ಏನೂ ಮಾಡದೆ ಈಗ ಅದು ಹಾಗೆ ಇದು ಹೀಗೆ ಎಂದು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಜಿ ಶಾಸಕರು ಮಾಡುವುದು ಬೇಡ ಅದು ಅವರ ಘನತೆಗೆ ಯೋಗ್ಯವಾದುದಲ್ಲ ಎಂದು ಹೇಳಿದರು.