ಯಾದವ ಸಭಾದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ

0

ಸಮುದಾಯದ ಸಮಸ್ಯೆಗಳಿಗೆ ಸಂಘಟನೆಯ ಮೂಲಕ ಸ್ಪಂಧನೆ-ಎ.ಕೆ ಮಣಿಯಾಣಿ

ಪುತ್ತೂರು:ಯಾದವ ಸಭಾ ತಾಲೂಕು ಸಮಿತಿ, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕ ವಿತರಣೆಯು ಜು.2ರಂದು ಬೆಳಿಗ್ಗೆ ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಎ.ಕೆ ಮಣಿಯಾಣಿ ಬೆಳ್ಳಾರೆ ಮಾತನಾಡಿ, ಸಮುದಾಯವನ್ನು ಉನ್ನತ ರೀತಿಯನ್ನು ಕೊಂಡುಹೋಗುವ ಉದ್ದೇಶದಿಂದ ಕಾರ್ಯಕಾರಿ ಸಮಿತಿಯ ಮೂಲಕ ಉತ್ತಮ ಸಂಘಟನೆ ನಡೆಯುತ್ತಿದೆ. ಜನರನ್ನು ಸಂಪರ್ಕಿಸಿ ಒಗ್ಗೂಡಿಸುವ ಕಾರ್ಯವಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಪ್ರತಿ ತಾಲೂಕುಗಳಲ್ಲಿಯೂ ಸಮಾವೇಶ ಮಾಡುವ ಮೂಲಕ ಸಮುದಾಯದವರನ್ನು ಒಗ್ಗೂಡಿಸಲಾಗುತ್ತಿದೆ. ಈ ವರ್ಷದ ಜಿಲ್ಲಾ ಸಮಾವೇಶವನ್ನು ಪುತ್ತೂರಿನಲ್ಲಿ ನಡೆಸಲಾಗುವುದು ಎಂದು ಹೇಳಿದರು. ಸಂಘಟನೆಯು ಸಮುದಾಯದ ಜನರ ಪರವಾಗಿ, ಜನರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂಧನೆ ನೀಡುವ ಮೂಲಕ ನಮ್ಮ ಕಾರ್ಯವ್ಯಾಪ್ತಿಯೊಳಗೆ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ನಮ್ಮ ಸಮುದಾಯದಕ್ಕೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದುಕೊಂಡು ಶಕ್ತರಾಗಿ ಬೆಳೆಯಬೇಕು. ಪ್ರತಿ ತಾಲೂಕಿನಲ್ಲಿಯೂ ಪ್ರಾದೇಶಿಕ ಸಮಿತಿಗಳ ಮೂಲಕ ಸಮುದಾಯದ ಪ್ರತಿ ಮನೆಗಳನ್ನು ಭೇಟಿ ನೀಡಲಾಗುತ್ತಿದ್ದು ಸಮಾಜ ಬಾಂಧವರು ಸಹಕರಿಸುವಂತೆ ಮನವಿ ಮಾಡಿದರು.


ಪ್ರವರ್ಗ-1ರಿಂದ ಕೈತಪ್ಪದಂತೆ ನಮ್ಮ ಸಮುದಾಯ ಸಂಘಟಿತರಾಗಬೇಕು-ಸದಾನಂದ ನಾವೂರು:
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು ಮಾತನಾಡಿ, ಯಾದವ ಸಮುದಾಯವು ಪ್ರವರ್ಗ-1ರಲ್ಲಿದ್ದರೂ ಅದು ಶಾಶ್ವತವಲ್ಲ. ಕೈ ತಪ್ಪಿಹೋಗವ ಸಾಧ್ಯತೆಗಳಿವೆ. ನಮ್ಮ ಸಮುದಾಯವು ಪ್ರವರ್ಗ-1ರಲ್ಲಿ ಉಳಿಯಬೇಕಾದರೆ ನಾವು ಸಂಘಟಿತರಾಗಬೇಕು. ನಮ್ಮ ಧ್ವನಿ ಸರಕಾರಕ್ಕೆ ತಲುಪಬೇಕು. ಪ್ರವರ್ಗ-1ರಲ್ಲಿರುವ ಸಮುದಾಯದವರು ಶೇ.90ರಷ್ಟು ಸರಕಾರದ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ನಾವೂ ಪಡೆದುಕೊಳ್ಳಬೇಕು. ಚುನಾವಣೆಗಳಲ್ಲಿ ಯಾದವ ಸಮುದಾಯದವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಅವರಿಗೆ ನಮ್ಮ ಸಮಾಜ ಬೆಂಬಲವಿದೆ. ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಇತರ ಸಮಾಜಕ್ಕೂ ಮಾದರಿಯಾಗಬೇಕು. ಮುಂದೆ ಕೇಂದ್ರ ಸಮಿತಿ ಬೈಲಾ ತಿದ್ದುಪಡಿಯಾಗಲಿದ್ದು ಏನೆಲ್ಲಾ ಬದಲಾವಣೆ ಆಗಬೇಕು ಎನ್ನುವ ಪ್ರಸ್ತಾವಣೆಗಳ ಪ್ರತಿ ತಾಲೂಕು ಸಮಿತಿಯಿಂದ ನೀಡುವಂತೆ ತಿಳಿಸಿದ ಅವರು ಪುತ್ತೂರಿನಲ್ಲಿ ಸಂಘವು ಕಳೆದ ಒಂದು ವರ್ಷದಲ್ಲಿ ಉತ್ತಮ ಸಂಘಟನೆಯಾಗಿ ಮೂಡಿಬಂದಿದೆ ಎಂದರು.


ನಮ್ಮ ಜಾತಿ ಕೆಳಮಟ್ಟದಲ್ಲಿದೆಯೆಂಬ ಕೀಳರಿಮೆ ಬೇಡ-ಸಾವಿತ್ರಿ ರಾಮ್:
ಸಿಬ್ಬಂದಿ ಸೇವಾ ರಾಜ್ಯ ಪ್ರಶಸ್ತಿ ಪುರಸ್ಕೃತ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ರಾಮ್ ಕಣೆಮರಡ್ಕ ಮಾತನಾಡಿ, ನಮ್ಮ ಜಾತಿ ಕೆಳಮಟ್ಟದಲ್ಲಿದ್ದೇವೆ ಎಂಬ ಕೀಳರಿಮೆ ಬೇಡ. ಯಾರೂ ಗುರುತಿಸುತ್ತಿಲ್ಲ ಸಂಕುಚಿತ ಭಾವನೆ ಅಗತ್ಯವಿಲ್ಲ. ಸಮುದಾಯದ ಬಗ್ಗೆ ಹೆಮ್ಮಿಯಿಂದಿರಬೇಕು. ಪ್ರವರ್ಗ-1ರಲ್ಲಿ ಸಾಕಷ್ಟು ಸೌಲಭ್ಯಗಳಿದ್ದು ಅದನ್ನು ಪಡೆದುಕೊಳ್ಳಬೇಕು. ಇನ್ನೊಬ್ಬರಿಗೆ ನಾವು ಮಾದರಿಯಾಗಬೇಕು. ಸಾಧನೆಯ ಮೂಲಕ ನಮಗೆ ನಾವೇ ಮಾದರಿಯಾಗಬೇಕು. ಪ್ರಾಮಾಣಿಕ ಕೆಲಸ ನಮ್ಮ ಜೊತೆಗಿರುತ್ತದೆ. ನಾವು ಯಾದವೀ ಕಲಹ ಬಿಟ್ಟು ಹೊರಬರಬೇಕು ಎಂದು ಹೇಳಿದರು.


ಸಂಘಟನೆ ಭವಿಷ್ಯಕ್ಕಾಗಿ ವಿದ್ಯಾರ್ಥಿ ಸಂಘ ಬಲಿಷ್ಠಗೊಳಿಸಬೇಕು-ರಾಮಚಂದ್ರ ಯಧುಗಿರಿ:
ಕೇಂದ್ರ ಸಮಿತಿ ಕೋಶಾಧಿಕಾರಿ ರಾಮಚಂದ್ರ ಯಧುಗಿರಿ ಮಾತನಾಡಿ, ನಿಸ್ವಾರ್ಥ ಭಾವನೆಯಿಂದ ಸೇವೆಯಿಂದಾಗಿ ಇಂದು ನಮ್ಮ ಸಂಘಟನೆಯು ಶಕ್ತಿಯುತವಾಗಿ ಸಂಘಟನೆಯು ಬೆಳೆಯುತ್ತದೆ. ಅದು ಪುತ್ತೂರಿನ ಮಹಾ ಸಭೆಯ ರೂಪದಲ್ಲಿ ಸಾಕಾರಗೊಂಡಿದೆ. ಸಂಘಟನೆಯಲ್ಲಿ ಹುದ್ದೆ ಶಾಶ್ವತವಲ್ಲ. ಸದಸ್ಯರು, ಕಾರ್ಯಕರ್ತರು ಶಾಶ್ವತ. ಸಂಘಟನೆಯ ಭವಿಷ್ಯದ ದೃಷ್ಠಿಯಿಂದ ವಿದ್ಯಾರ್ಥಿ ಸಂಘಟನೆ ಬಲಿಷ್ಠ ಗೊಳಿಸಬೇಕು. ಕಲಹಗಳು ಮನೆಯೊಲಗಿರಲಿ. ಸಂಘಟನೆಯಲ್ಲಿ ಒಗ್ಗಟ್ಟು ಇರಲಿ. ಸಮಿತಿಯಲ್ಲಿ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹದಿನೈದು ಮನೆಗೊಂದು ಪ್ರಾದೇಶಿಕ ಸಮಿತಿ ರಚಿಸಿಕೊಂಡು ಎಲ್ಲರನ್ನು ಸೇರಿಸಿಕೊಳ್ಳಬೇಕು ಎಂದರು.


ಯುವ ಸಮಾಜ, ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಬೇಕು-ಕೃಷ್ಣ ಪಡೀಲು:
ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಕೃಷ್ಣ ಪಡೀಲು ಮಾತನಾಡಿ, ಪುತ್ತೂರಿನಲ್ಲಿ ಸಂಘದ ಅಧ್ಯಕ್ಷ ಶ್ರೀಪ್ರಸಾದ್ ನೇತೃತ್ವದಲ್ಲಿ ಸಂಘಟಿತವಾಗಿ ಬೆಳೆಯುತ್ತಿದೆ. ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಯುವ ಸಮಾಜ, ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಬಲಿಷ್ಠಗೊಳಿಸಬೇಕು ಎಂದರು.


ಸರಕಾರದ ಸವಲತ್ತುಗಳನ್ನು ಪಡೆದು ಬಲಿಷ್ಠರಾಗಬೇಕು-ಕರುಣಾಕರ ಹಾಸ್ಪರೆ:
ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ ಮಾತನಾಡಿ, ಶೈಕ್ಷಣಿಕ, ರಾಜಕೀಯ, ಸಾಮಾಜಿಕವಾಗಿ ಬೆಳೆಯಬೇಕಾದರೆ ಸಂಘಟನೆ ಬಹುಮುಖ್ಯವಾಗಿದೆ. ಸಂಘಟನೆಯಿಂದಾಗಿ ಇತರ ಸಮುದಾಯಗಳಿಗೆ ದೊರೆಯುಂತೆ ಸರಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಶಾಲಾ ಶುಲ್ಕದಲ್ಲಿ ರಿಯಾಯಿತಿ ಅವುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.


ಯುವಕರಿಗೆ ಪ್ರೋತ್ಸಾಹ ಅಗತ್ಯ-ಅಶೋಕ್ ಕುಮಾರ್
ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಶಿಕ್ಷಣ, ಆರೋಗ್ಯ ಇದ್ದಾಗ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬಹುದು. ಸಂಘಟನೆ ಬಲಗೊಳಿಸಲು ಯುವಕರಿಗೆ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.


ಸರಕಾರಿ ಸೌಲಭ್ಯಗಳ ಅರಿವು ಮೂಡಿಸಲು ಕಾರ್ಯಕ್ರಮ-ಶ್ರೀಪ್ರಸಾದ್ ಪಾಣಾಜೆ:
ಅಧ್ಯಕ್ಷತೆ ವಹಿಸಿದ್ದ ತಾಲೂಕು ಸಮಿತಿ ಅಧ್ಯಕ್ಷ ಶ್ರೀ ಪ್ರಸಾದ್ ಮಾತನಾಡಿ, ಕಾರ್ಯಕ್ರಮ ನಮ್ಮ ಸಾಧನೆಗಾಗಿ ಮಾಡಿಲ್ಲ. ಬದಲಾಗಿ ಸಮಾಜ ಬಾಂಧವರನ್ನು ಒಗ್ಗೂಡಿಸಲು, ನಮ್ಮ ಸಮಾಜವು ಸರಕಾರದ ಅನೇಕ ಸವಲತ್ತುಗಳಿಂದ ವಂಚಿತರಾಗಿದ್ದು ಅವುಗಳ ಅರಿವು ಮೂಡಿಸಲು ನಮ್ಮ ಕರ್ತವ್ಯವಾಗಿ ಕಾರ್ಯಕ್ರಮ ಮಾಡಿದ್ದೇವೆ. ಸಂಘಟನೆಯು ಸಂಘರ್ಷಕ್ಕಲ್ಲ. ಅದು ಸಮುದಾಯದ ಬಡವರು ಸರಕಾರದ ಸವಲತ್ತುಗಳಿಂದ ವಂಚಿತರಾಗಬಾರದು ಎನ್ನುವ ದೃಷ್ಠಿಯಿಂದ ಸಂಘಟನೆ ಅನಿವಾರ್ಯ. ಸಂಘಟನೆಯಲ್ಲಿ ಹೆಮ್ಮೆಯಿಂದ ಭಾಗವಹಿಸಬೇಕು. ಎಲ್ಲಾ ಕ್ಷೇತ್ರದಲ್ಲಿಯೂ ನಮ್ಮ ಸಮುದಾಯದವರಿದ್ದಾರೆ. ಅವರನ್ನು ಗುರುತಿಸಿಕೊಳ್ಳಬೇಕು, ಶ್ರೀಕೃಷ್ಣ ಜನ್ಮಾಷ್ಟಮಿ ಸರಕಾರಿ ಕಾರ್ಯಕ್ರಮದಲ್ಲಿ ಸಮುದಾಯವನ್ನು ಸೇರಿಸಿಕೊಳ್ಳಬೇಕು. ಪ್ರವರ್ಗ-1 ನಮ್ಮ ಕೈ ತಪ್ಪಹೋಗಬಾರದು. ಉದ್ಯೋಗ, ಶಿಕ್ಷಣದಿಂದ ಸಮುದಾಯದವರು ವಂಚಿತರಾಗಬಾರದು, ಅದಕ್ಕಾಗಿ ಮಕ್ಕಳನ್ನು ಸಂಘಟನೆಯ ತೊಡಗಿಸಿಕೊಳ್ಳಬೇಕು ಎಂದರು.


ಸನ್ಮಾನ:
ಆರ್ಲಪದವು ಶ್ರೀಕೃಷ್ಣ ಜನ್ಮಾಷ್ಠಿಯ ಸ್ಥಾಪಕ, ಉದ್ಯಮಿ ಮಹಾಲಿಂಗ ಮಣಿಯಾಣಿ ದೇವಸ್ಯ, ಸರಕಾರಿ ಸೇವೆಯಿಂದ ನಿವೃತ್ತಿಗೊಂಡು ಸಾಮಾಜಿಕವಾಗಿ ತೊಡಗಿಕೊಂಡಿರುವ ಗೋಪಾಲ್ ಮಣಿಯಾಣಿ ಕಂಪ, ನಾರಾಯಣಿ ಗೋಪಾಲ್ ಮಣಿಯಾಣಿ, ಶ್ರೀಧರ ಮಣಿಯಾಣಿ ಪರ್ಲಡ್ಕ, ನಿವೃತ್ತ ಯೋಧ ಕ್ಯಾ.ಸದಾನಂದ ಪೆರುವಾಜೆ, ಸಿಬಂದಿ ಸೇವಾ ರಾಜ್ಯ ಪ್ರಶಸ್ತಿ ಪುರಸ್ಕೃತ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ರಾಮ್ ಕಣೆಮರಡ್ಕ, ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ ಮಣಿಯಾಣಿ ಬೆಳ್ಳಾರೆಯವರನ್ನು ಸನ್ಮಾನಿಸಲಾಯಿತು. ತಾಲೂಕು ಸಮಿತಿಯ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆಯವರನ್ನು ಕೇಂದ್ರ ಸಮಿತಿಯ ವತಿಯಿಂದ ಸನ್ಮಾನಿಸಿದರು.


ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ:
ಪದವಿಯಲ್ಲಿ ಐದನೇ ರ್‍ಯಾಂಕ್ ಪಡೆದ ಹರ್ಷಿತಾ ಕೆ. ರಾಜ್ಯಪಟ್ಟದ ಅಥ್ಲೆಟಿಕ್ ರಶ್ಮಿತಾ, ದೆಹಲಿಯ ಎನ್‌ಸಿಸಿಯಲ್ಲಿ ಪ್ರತಿನಿಧಿಸಿದ ಪ್ರಥಮ ವಿದ್ಯಾರ್ಥಿನಿ ಕೃತಿಕಾ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಲಯ ರವೀಂದ್ರನ್, ಅಂಕಿತ್, ವಿಪುಲ್ ಮನೋಜ್, ಪಾರ್ಥವ್ ಎಂ., ದೀಕ್ಷಾ, ವಿಷ್ಮಯ, ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಂಕಿತ್ , ಶ್ರೀಲಿಕಾ, ರಂಜಿತ್ ಕೆ.ಎನ್, ಪದವಿ ವಾಣಿಜ್ಯ ವಿಭಾಗದಲ್ಲಿ ರಂಜಿತಾ ಜಿ.ಯವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 1ನೇತರಗತಿಯಿಂದ ಪಿಯುಸಿ ತನಕದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.


ಬೆಟ್ಟಂಪಾಡಿ-ನಿಡ್ಪಳ್ಳಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೊಗ್ಗು ಮಣಿಯಾಣಿ, ಕುರಿಂಜ ಪ್ರಾದೇಶಿಕ ಸಮಿತಿ ಅಧ್ಯಕ್ಷ ಲೋಕೇಶ ಕುಂಟಾಪು, ಪುತ್ತೂರು ಪ್ರಾದೇಶಿಕ ಸಮಿತಿ ಅಧ್ಯಕ್ಷ ದಾಮೋದರ ಮಣಿಯಾಣಿ ಸಂಪ್ಯ ಹಾಗೂ ಪಾಣಾಜೆ ಪ್ರಾದೇಶಿಕ ಸಮಿತಿ ಅಧ್ಯಕ್ಷ ಧನಂಜಯ ಯಾಧವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ದಿನೇಶ್ ಆರ್ಲಪದವು ಸ್ವಾಗತಿಸಿದರು. ಕೋಶಾಧಿಕಾರಿ ಗಿರೀಶ್, ಮಹಿಳಾ ಘಟಕದ ಅಧ್ಯಕ್ಷೆ ಯಶೋಧ, ಅಪ್ಪಯ್ಯ ಮಣಿಯಾಣಿ, ಹರಿಕೃಷ್ಣ ಸಂಟ್ಯಾರು, ರಾಮಚಂದ್ರ ಮಣಿಯಾಣಿ ಪಡ್ಯಂಬೆಟ್ಟು, ಸುಶಾಂತ್ ಆರ್ಲಪದವು, ಕಾರ್ತಿಕ್, ಗೋಪಾಲ್ ಮಣಿಯಾಣಿ, ವಿನೀತ್ ಕಲ್ಲರ್ಪೆ, ರಾಧಾಕೃಷ್ಣ ಕಂಪ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಶ್ರೀಹರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

LEAVE A REPLY

Please enter your comment!
Please enter your name here