ಪುತ್ತೂರು: ಸರಕಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ದೊರೆಯುತ್ತಿದ್ದು ಸರಕಾರಿ ಶಾಲೆಗಳ ಬಗ್ಗೆ ಯಾರೂ ನಿರ್ಲಕ್ಷ್ಯ ಭಾವನೆ ಹೊಂದಬಾರದು ಎಂದು ಆರ್ಯಾಪು ಗ್ರಾ.ಪಂ ಸದಸ್ಯ, ಉದ್ಯಮಿ ಬೂಡಿಯಾರು ಪುರುಷೋತ್ತಮ ರೈ ಹೇಳಿದರು.
ಇಡ್ಯೊಟ್ಟು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಜು.3ರಂದು ತಮ್ಮ ವತಿಯಿಂದ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ನಾನು ಶ್ರೀಮಂತನೇನಲ್ಲ. ಇಲ್ಲಿ ಕಲಿಯುವ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಸಹಾಯವಾಗಲಿ ಎನ್ನುವ ನಿಟ್ಟಿನಲ್ಲಿ ಪುಸ್ತಕ ವಿತರಣೆ ಮಾಡಿದ್ದೇನೆ. ನಾನು ದುಡಿದ ಒಂದಂಶವನ್ನು ಸಮಾಜಕ್ಕೆ ನೀಡುತ್ತಿದ್ದೇನೆ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದ ಆಗಬೇಕಾಗಿದೆ ಎಂದು ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.
ಸ್ಪೋಕನ್ ಇಂಗ್ಲೀಷ್ ಉದ್ಘಾಟನೆ:
ಶಾಲೆಯಲ್ಲಿ ಸ್ಪೋಕನ್ ಇಂಗ್ಲೀಷ್ ತರಗತಿಯನ್ನು ಕೋಡಿಂಬಾಡಿ ಶಾಲೆಯ ನಿವೃತ್ತ ಮುಖ್ಯಗುರು ಯಶೋಧ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕನ್ನಡದ ಜೊತೆಗೆ ಮಕ್ಕಳಿಗೆ ಇಂಗ್ಲೀಷ್ ಕಲಿಕೆ ಕೂಡಾ ಅಗತ್ಯ. ಇಲ್ಲಿ ಸ್ಪೋಕನ್ ಇಂಗ್ಲೀಷ್ ಪ್ರಾರಂಭಗೊಂಡಿರುವದು ಗ್ರಾಮೀಣ ಮಕ್ಕಳಿಗೆ ವರದಾನವಾಗಿದೆ ಎಂದು ಹೇಳಿದರು.
ಉಪ್ಪಿನಂಗಡಿ ಸ.ಹಿ.ಪ್ರಾಶಾಲೆಯ ನಿವೃತ್ತ ಮುಖ್ಯಗುರು ದೇವಕಿ ಮಾತನಾಡಿ ಸರಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕಬಾರದು ಎಂದು ಹೇಳಿದರು. ಬೂಡಿಯಾರ್ ಪುರುಷೋತ್ತಮ ರೈಯವರು ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯಾದ ಕಾರಣ ಅವರಿಗೆ ಪುಸ್ತಕ ವಿತರಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅದ್ರಾಮ ಮಾತನಾಡಿ ಬೂಡಿಯಾರ್ ಪುರುಷೋತ್ತಮ ರೈ ಅವರು ನಮ್ಮ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾದರಿಯಾಗಿದ್ದು ಅವರಿಗೆ ನಮ್ಮೆಲ್ಲರ ಪ್ರಾರ್ಥನೆ ಸದಾ ಇರಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಗೋಪಾಲಕೃಷ್ಣ, ಶಾಲಾ ಜಾಗದ ದಾನಿ ಮಂಜಪ್ಪ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಸದಸ್ಯರಾದ ಐತ್ತಪ್ಪ, ಲಕ್ಷ್ಮಣ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯಗುರು ಪ್ರೇಮಾ ಸ್ವಾಗತಿಸಿದರು. ಶಿಕ್ಷಕ ಸುರರಾಜ್ ವಂದಿಸಿದರು. ಶಿಕ್ಷಕ ದೇವಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಂಸೀನಾ ಸಹಕರಿಸಿದರು.