ಮಣಿಪುರದ ಗಲಭೆಯಲ್ಲಿ ಪ್ರಧಾನಿ ಮೌನದ ಅರ್ಥವೇನು – ಮೌರೀಸ್ ಮಸ್ಕರೇನಸ್ ಪ್ರಶ್ನೆ

0

ಪುತ್ತೂರು: ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಅಚ್ಚೇ ದಿನ್ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಶಾನ್ಯ ರಾಜ್ಯದಲ್ಲೊಂದಾದ ಮಣಿಪುರದಲ್ಲಿ ಪ್ರಸ್ತುತ ನಡೆಯುತ್ತಿರುವ ಗಲಭೆ, ದೊಂಬಿ, ಅತ್ಯಾಚಾರಗಳ ಕುರಿತು ಒಂದೇ ಒಂದು ಮಾತನಾಡುತ್ತಿಲ್ಲ. ಅವರ ಮೌನದ ಹಿಂದಿನ ಅರ್ಥವೇನು ಎಂದು ಪುತ್ತೂರು ಕ್ರಿಶ್ಚಯನ್ ಯೂನಿಯನ್ ಅಧ್ಯಕ್ಷ ಮೌರೀಸ್ ಮಸ್ಕರೇನಸ್ ಅವರು ಪ್ರಶ್ನಿಸಿದ್ದಾರೆ.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಣಿಪುರದಲ್ಲಿ ಮೈತೇಯಿ ಮತ್ತು ಕುಕ್ಕಿ ಪಂಗಡದವರೊಳಗೆ ಗಲಭೆ ಎಂದು ಪ್ರಮುಖ ಮಾದ್ಯಮದಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಅಲ್ಲಿ ನಿಜವಾಗಿಯೂ ಮೈತೀಯಿ ಮತ್ತು ಕುಕ್ಕಿ ಪಂಗಡದಲ್ಲಿರುವ ಕ್ರಿಶ್ಚಿಯನ್ನರ ಮೇಲೆ ದಾಳಿ ನಡೆಯುತ್ತಿದೆ. ಇದಕ್ಕೆ ಮೂಲಕ ಕಾರಣ ಸಂಘಪರಿವಾರ. ಯಾಕೆಂದರೆ ಠಾಣೆಗಳಿಂದ ಬಂದೂಕು ಅಪಹರಿಸುವವರೆಗೂ ಸರಕಾರ ಏನು ಮಾಡದಿದ್ದರಿಂದ ದೇಶದಿಂದ ಕ್ರೈಸ್ತರನ್ನು ಮೂಲೆಗುಂಪು ಮಾಡುವ ಸಂಘ ಪರಿವಾರದ ಸಿದ್ಧಾಂತ ಇದರ ಹಿಂದೆ ಕೆಲಸ ಮಾಡಿರುವ ಗುಮಾನಿ ಇದೆ. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ದೇಶದ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರ ಕೈ ಕೆಳಗೆ ಸೇನೆ, ಭದ್ರತಾ ಪಡೆ, ಸಿಬಿಐ, ಗುಪ್ತಚರ ಇಲಾಖೆ ಇದ್ದರೂ ದೇಶದ ಅಲ್ಲಲ್ಲಿ ಗಲಭೆ ನಡೆಯುತ್ತಿವೆ ಎಂದು ಟೀಕೆ ಮಾಡಿದ್ದರು. ಆದರೆ ಇವತ್ತು ಮೋದಿಯವರೇ ಪ್ರಧಾನ ಮಂತ್ರಿಯಾಗಿದ್ದರೂ ಮಣಿಪುರದ ಗಲಭೆ ನಿಲ್ಲಿಸಲು ಆಗಿಲ್ಲ. ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡ ನಂತರ ಮೋದಿ ಅವರು ಅಮೇರಿಕಾ ಪ್ರವಾಸ ಕೈಗೊಂಡರು. 2002ರಲ್ಲಿ ಗೋಧ್ರಾ ಹತ್ಯಾಕಾಂಡ ನಡೆದ ಬಳಿಕ ಗುಜರಾತಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮೇಲೆ ಗುರಿಯಿಟ್ಟು ಹಿಂಸೆ ನಡೆದಿತ್ತು. ಅದೇ ರೀತಿ ಮಣಿಪುರದಲ್ಲಿ ಕ್ರಿಶ್ಚಿಯನ್ನರನ್ನ ಗುರಿಯಾಗಿಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.
ಇತರೆಲ್ಲ ವಿಚಾರದಲ್ಲಿ ಮಾತನಾಡುವ ಮೋದಿ ಅವರು ಮಣಿಪುರದ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ. ರೇಡಿಯೊದಲ್ಲಿ ಮನ್‌ಕಿ ಬಾತ್‌ನಲ್ಲಿ ಇತರೆಲ್ಲ ವಿಚಾರಗಳ ಬಗ್ಗೆ ಮಾತನಾಡುವ ಅವರು ಮಣಿಪುರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಕೇಳಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಲಭೆ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣ ಮಧ್ಯಪ್ರವೇಶಿಸಿ ಮಣಿಪುರಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.


ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಿಂಸಾಚಾರ ಹೆಚ್ಚಾಗಿದೆ:
ಒಂದು ವರ್ಷದ ಹಿಂದೆ ಮಣಿಪುರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂಸಾಚಾರ ಹೆಚ್ಚಾಗಿದೆ. ಚರ್ಚ್, ದೇವಸ್ಥಾನ ಸೇರಿದಂತೆ ಯಾವುದೇ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವುದು ತಪ್ಪು. ಅಲ್ಲಿ ಚರ್ಚ್‌ಗಳನ್ನು ಗುರಿಯಾಗಿಟ್ಟುಕೊಂಡು ಹಿಂಸಾಚಾರ ಮಾಡಲಾಗುತ್ತಿದೆ. ಮೈತೇಯಿ ಸಮುದಾಯದ ಕೆಲವು ಬಂಡುಕೋರ ಗುಂಪುಗಳು ನಡೆಸುವ ಹಿಂಸೆಯನ್ನು ನಿಲ್ಲಿಸಲು ಸರಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಕ್ರೈಸ್ತರ ಮೇಲಿನ ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡಲಾಗುತ್ತದೆಯೇ ಎಂದು ಮೌರಿಸ್ ಮಸ್ಕರೇನಸ್ ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕ್ರಿಶ್ಚಿಯನ್ ಯೂನಿಯನ್ ಗೌರವ ಸಲಹೆಗಾರರಾದ ವಲೇರಿಯನ್ ಡಯಾಸ್, ಜೊರೋಮಿಯಸ್ ಪಾಯಸ್, ಖಜಾಂಚಿ ವಾಲ್ಟರ್ ಸಿಕ್ವೇರಾ, ಉಪಾಧ್ಯಕ್ಷರಾದ ಕೆನ್ಯೂಟ್ ಮಸ್ಕರೇನಸ್, ಸದಸ್ಯರಾದ ವಿಕ್ಟರ್ ಪಾಯಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here