ಪುತ್ತೂರು: ಮಳೆಯ ಸಂದರ್ಭ ಪ್ರತಿ ವರ್ಷ ಕೊಂಬೆಟ್ಟು ತಾಲೂಕು ಕ್ರೀಡಾಂಗಣದ ಬಳಿ ಪದೇ ಪದೇ ಬರೆ ಕುಸಿತ ಅಗುತ್ತಿದ್ದು, ಇದೀಗ ಜು.5ರಂದು ಮತ್ತಷ್ಟು ಬರೆ ಕುಸಿತಗೊಂಡ ಹಿನ್ನೆಲಯಲ್ಲಿ ಬರೆ ಮೇಲಿರುವ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ನೂತನ ಶೌಚಾಲಯ ಅಪಾಯದ ಅಂಚಿನಲ್ಲಿದೆ.
ತಾಲೂಕು ಕ್ರೀಡಾಂಗಣದ ಮೈದಾನದ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಬರೆ ತೆಗೆದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪದೇ ಪದೇ ಬರೆ ಕುಸಿತ ಆಗುತ್ತಿದೆ. ಬರೆ ಕುಸಿತದಿಂದಾಗಿ ಈಗಾಗಲೇ ಶಾಲೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಿರ್ಮಾಣಗೊಂಡ ಕಟ್ಟಡ ಬಿರುಕು ಬಿಟ್ಟಿದ್ದು ಅದನ್ನು ತೆರವು ಮಾಡಲು ಲೋಕೋಪಯೋಗಿ ಇಲಾಖೆ ಅದೇಶ ನೀಡಿತ್ತು. ಅದಾದ ಬಳಿಕ ಮತ್ತೆ ಮತ್ತೆ ಬರೆ ಕುಸಿತ ಕಂಡು ಬರುತ್ತಿದ್ದು, ಕಳೆದ ವಾರ ಆವರಣಗೋಡೆ ಕುಸಿತು ಬಿದ್ದಿತ್ತು.
ಇದೀಗ ಮತ್ತೆ ಬರೆ ಕುಸಿತಕ್ಕೊಳಗಾಗಿದ್ದು, ಬರೆ ಕುಸಿತದಿಂದಾಗಿ ಹಳೆಯ ಶೌಚಾಲಯದ ಅಡಿಗಲ್ಲು ಬೆಳಕಿಗೆ ಬಂದಿದ್ದು, ಅಲ್ಲೆ ಪಕ್ಕದಲ್ಲಿರುವ ಕಳೆದ ಶೈಕ್ಷಣಿಕ ವರ್ಷದಲ್ಲಿ ಆಗಿನ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಪುರುಷರ ಶೌಚಾಲಯ ಕಟ್ಟಡ ಅಪಾಯದ ಅಂಚಿನಲ್ಲಿದೆ. ಸ್ಥಳಕ್ಕೆ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಭೇಟಿ ನೀಡಿದ್ದಾರೆ.