ಉಪ್ಪಿನಂಗಡಿ: ಮಳೆಗೆ ಧರೆ ಕುಸಿತ-ನೆರೆ ನೀರು ಪಾಲಾಗುವ ಭೀತಿಯಲ್ಲಿ ಕಾಲೇಜು ಮೈದಾನ

0

ಉಪ್ಪಿನಂಗಡಿ: ಈ ಭಾಗದಲ್ಲಿ ನಿನ್ನೆಯಿಂದಲೇ ಬಿಡುವಿಲ್ಲದ ಮಳೆ ಸುರಿಯುತ್ತಿದ್ದು, ಮಳೆಗೆ 34 ನೆಕ್ಕಿಲಾಡಿಯ ಸುಭಾಶ್‌ನಗರದಲ್ಲಿ ಧರೆ ಕುಸಿದು ಮನೆಯೊಂದಕ್ಕೆ ಹಾನಿಯಾದ ಘಟನೆ ಜು.6ರಂದು ವರದಿಯಾಗಿದೆ.

ಸುಭಾಶ್‌ನಗರದ ಸೀತಾರಾಮ ಪೂಜಾರಿ ಎಂಬವರ ಮನೆಯ ಹಿಂಬದಿಯಿರುವ ಧರೆ ಜರಿದಿದ್ದು, ಮನೆಯ ಎರಡು ಶೀಟ್‌ಗಳಿಗೆ ಹಾನಿಯಾಗಿದೆ. ಮೇಲ್ಗಡೆಯಲ್ಲಿ ಧರೆ ಬಾಯ್ಬಿಟ್ಟು ನಿಂತಿದ್ದು, ಇನ್ನಷ್ಟು ಧರೆ ಕುಸಿಯುವ ಆತಂಕ ಎದುರಾಗಿದೆ. ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್ ಶಿವಶಂಕರ್ ಭೇಟಿ ನೀಡಿ ಪರಿಶೀಲಿಸಿದ್ದು ಬಾಯ್ಬಿಟ್ಟು ನಿಂತಿರುವ ಧರೆಯ ಮಣ್ಣನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈ ಸಂದರ್ಭ 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್, ಪುತ್ತೂರು ತಾ.ಪಂ.ನ ಸುಕನ್ಯಾ, ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಸತೀಶ್ ಬಂಗೇರ, ವಿಎ ನರಿಯಪ್ಪ ಉಪಸ್ಥಿತರಿದ್ದರು.

ಮನೆಗೆ ನುಗ್ಗಿದ ನೀರು:
ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭ ಚರಂಡಿಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, 34 ನೆಕ್ಕಿಲಾಡಿಯ ಬಾಲಕೃಷ್ಣ ಚೌಟ ಎಂಬವರ ಮನೆಗೆ ಮಳೆನೀರು ನುಗ್ಗಿದೆ. ಅಲ್ಲೇ ಪಕ್ಕದಲ್ಲಿರುವ ಹಂಝ ಎಂಬವರ ಜಾಗಕ್ಕೂ ಮಳೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆಯಲ್ಲದೆ, ಅವರ ಜಾಗದ ಆವರಣಗೋಡೆ ಕುಸಿದು ಬಿದ್ದಿದೆ.

ಲಕ್ಷಾಂತರ ರೂ.ನ ಮೈದಾನ ನೀರುಪಾಲು:
ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ವರ್ಷ ಆಯೋಜಿಸಲಾದ ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಂದರ್ಭದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಮಾಡಲಾದ ಕ್ರೀಡಾಂಗಣವು ಈ ಬಾರಿಯ ಮಳೆಗಾಲದಲ್ಲಿ ನೀರು ಪಾಲಾಗುತ್ತಿದೆ. ಈ ಮೈದಾನದ ಬದಿಯಲ್ಲಿರುವ ಕೃಷಿ ತೋಟಕ್ಕೆ ಮೈದಾನದ ಮಣ್ಣು ಸಹಿತ ನೀರು ಹರಿದುಹೋಗಿದ್ದು, ಇದರಿಂದ ಅಲ್ಲಿದ್ದ ಮೋರಿಯಲ್ಲಿ ಮಣ್ಣು ತುಂಬಿ ಯಶೋಧರ ಅವರ ತೋಟದಲ್ಲಿ ನೀರು ತುಂಬುವಂತಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಕಾರ್ಯಕರ್ತ ಕೈಲಾರು ರಾಜಗೋಪಾಲ ಭಟ್, ಮೊದಲ ಮಳೆಗೆ ಈ ಮೈದಾನದ ಮಣ್ಣು ಸ್ವಲ್ಪ ಪ್ರಮಾಣದಲ್ಲಿ ನೀರು ಪಾಲಾಗಿತ್ತು. ಈ ಬಗ್ಗೆ ಆಗಲೇ ನಾನು ಮುನ್ನೆಚ್ಚರಿಕೆ ಕೊಟ್ಟಿದ್ದೆ. ಆದರೆ ಇದನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ. ಈ ಮೈದಾನದ ಸುತ್ತ ಉಜಿರ್ ಕಣಿಯಂತಹ ಕಣಿಯನ್ನು ಕೊಟ್ಟು ನೀರನ್ನು ನದಿಗೆ ಹರಿಸಿದರೆ ಮಾತ್ರ ಮೈದಾನ ಉಳಿಯಲು ಸಾಧ್ಯ. ಇಲ್ಲದಿದ್ದಲ್ಲಿ ಮೈದಾನದ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿ, ಲಕ್ಷಾಂತರ ರೂಪಾಯಿ ನೀರುಪಾಲಾಗಲಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here