*ಅಲ್ಲಾಹನ ಇಷ್ಟದಾಸರನ್ನು ಗೌರವಿಸುವುದು ನಮ್ಮೆಲ್ಲರ ಬಾಧ್ಯತೆಯಾಗಿದೆ-ಜಿಫ್ರಿ ತಂಙಳ್
*ದರ್ಸ್ ಪ್ರಾರಂಭಿಸುವ ಉದ್ದೇಶ ಇದೆ-ಸಯ್ಯದಲವಿ ತಂಙಳ್
*ಓಲೆಮುಂಡೋವು ದರ್ಗಾಗೆ ಇತಿಹಾಸ ಇದೆ-ಮಹಮೂದುಲ್ ಫೈಝಿ
*ರಾಜಕೀಯ ಲಾಭಕ್ಕೆ ಧರ್ಮ ಬಳಕೆಯಾಗಬಾರದು-ಅಶೋಕ್ ರೈ
ಪುತ್ತೂರು: ಅಲ್ಲಾಹನ ಇಷ್ಟದಾಸರನ್ನು ಗೌರವಿಸಬೇಕಾಗಿರುವುದು ನಮ್ಮ ಬಾಧ್ಯತೆಯಾಗಿದ್ದು ಮಖಾಂ ಸಂದರ್ಶಿಸುವುದು, ಝಿಯಾರತ್ ನೆರವೇರಿಸುವುದು ಪುಣ್ಯವೇರಿದ ಕಾರ್ಯವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಅಸ್ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು. ಅ.4ರಂದು ಓಲೆಮುಂಡೋವು ದರ್ಗಾದ ನೂತನ ಕಟ್ಟಡವನ್ನು ಉದ್ಘಾಟಿಸಿ, ಮಖಾಂ ಝಿಯಾರತ್(ಪ್ರಾರ್ಥನೆ) ನಡೆಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೆಲವು ವಿಶೇಷ ಪ್ರಾಧಾನ್ಯತೆ ಹೊಂದಿರುವ ಗೌರವಿಸಬೇಕಾದ ಸ್ಥಳಗಳನ್ನು ಗೌರವಿಸಬೇಕು, ವಿಶೇಷ ಪ್ರಾಮುಖ್ಯತೆ ಇರುವ ಸ್ಥಳವಾಗಲೀ, ವ್ಯಕ್ತಿಗಳನ್ನಾಗಲೀ, ದಿನವನ್ನಾಗಲೀ ನಾವೂ ಗೌರವಿಸಬೇಕು. ಅಲ್ಲಾಹನ ಔಲಿಯಾಗಳನ್ನು ಕೇವಲ ಪವಾಡಗಳಿಂದ ಮಾತ್ರ ಗುರುತಿಸದೆ ಅವರ ಮಾದರಿಯೋಗ್ಯವಾದ ಜೀವನ ವಿಧಾನಗಳಿಂದಲೂ ಗೌರವಿಸಬೇಕಾಗಿದೆ ಎಂದು ಅವರು ಹೇಳಿದರು.
ಮನುಷ್ಯನಾದವನಲ್ಲಿ ಮಾನವೀಯತೆ, ಅನುಕಂಪ, ಕರುಣೆ ಇವೆಲ್ಲವೂ ಇರಬೇಕು, ಪ್ರವಾದಿ(ಸ.ಅ) ಅವರೂ ಇದನ್ನೇ ನಮಗೆ ಕಲಿಸಿಕೊಟ್ಟಿದ್ದಾರೆ, ಎಲ್ಲರನ್ನು ಗೌರವಿಸುವ, ಸೌಹಾರ್ದತೆಯಿಂದ ಕಾಣುವ ಉದಾತ್ತ ಮನೋಭಾವ ಎಲ್ಲರಲ್ಲೂ ಇರಬೇಕು, ಪ್ರಾಣಿ, ಪಕ್ಷಿಗಳ ಮೇಲೆಯೂ ಕರುಣೆ ತೋರಬೇಕು ಎಂದ ಅವರು ನಾವು ಯಾವತ್ತೂ ಸತ್ಯದ ಪರವಾಗಿ ನಿಲ್ಲಬೇಕು, ಸುಳ್ಳು ಮತ್ತು ಅಪಪ್ರಚಾರಗಳ ವಿರುದ್ಧ ಜಾಗೃತರಾಗಿರಬೇಕು ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಎರಬೈಲು ಅಧ್ಯಕ್ಷತೆ ವಹಿಸಿದ್ದರು.

ದರ್ಸ್ ಪ್ರಾರಂಭಿಸುವ ಗುರಿ:
ಓಲೆಮುಂಡೋವಿನಲ್ಲಿ ದರ್ಸ್ ಪ್ರಾರಂಭಿಸುವ ಉದ್ದೇಶವನ್ನು ಸಯ್ಯದಲವಿ ತಂಙಳ್ ಹೊಂದಿದ್ದು ಅದು ಸಂತೋಷದ ವಿಚಾರ. ದರ್ಸ್ ಪ್ರಾರಂಭ ಮಾಡಲು ಪ್ರತಿಯೋರ್ವರೂ ಸಹಕಾರ ನೀಡುವ ಮೂಲಕ ತಂಙಳ್ ಅವರ ಉದ್ದೇಶವನ್ನು ಈಡೇರಿಸಲು ಕೈಜೋಡಿಸಬೇಕೆಂದು ಸಯ್ಯದ್ ಮುಹಮ್ಮದ್ ಜಿಫ್ರಿ ತಂಙಳ್ ಹೇಳಿದರು.

ದುವಾ ನೆರವೇರಿಸಿದ ಓಲೆಮುಂಡೋವು ಜುಮಾ ಮಸೀದಿಯ ಖತೀಬ್ ಅಸ್ಸಯ್ಯಿದ್ ಸಯ್ಯದಲವಿ ತಂಙಳ್ ಓಲೆಮುಂಡೋವು ಮಾತನಾಡಿ ಅಲ್ಲಾಹನ ಅನುಗ್ರಹದಿಂದ ದರ್ಗಾ ಕಟ್ಟಡ ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿದ್ದು ಇದಕ್ಕೆ ಹಲವರು ಸಹಕಾರ ನೀಡಿದ್ದಾರೆ, ಎಲ್ಲರ ಸಹಕಾರ ಫಲವಾಗಿ ದರ್ಗಾ ಕಟ್ಟಡ ಇಂದು ಉದ್ಘಾಟನೆಗೊಂಡಿದೆ ಎಂದು ಹೇಳಿದರು. ಹಲವು ಪವಾಡಗಳಿಂದ ಪ್ರಸಿದ್ಧಿ ಪಡೆದಿರುವ ಓಲೆಮುಂಡೋವು ದರ್ಗಾಗೆ ನಾನಾ ಊರುಗಳಿಂದ ಜನರು ಆಗಮಿಸಿ ಝಿಯಾರತ್ ನೆರವೇರಿಸುತ್ತಿದ್ದು ಇದು ಎಲ್ಲರ ಅಭಯ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ, ಓಲೆಮುಂಡೋವಿನಲ್ಲಿ ಭವಿಷ್ಯದಲ್ಲಿ ದರ್ಸ್ ಪ್ರಾರಂಭಿಸುವ ಉದ್ದೇಶವಿದ್ದು ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಓಲೆಮುಂಡೋವು ಜುಮಾ ಮಸೀದಿಯ ಮಾಜಿ ಖತೀಬ್ ಮಹಮೂದುಲ್ ಫೈಝಿ ಮಾತನಾಡಿ, ಅನೇಕ ಪವಾಡಗಳಿಂದ ಪ್ರಸಿದ್ಧಿ ಪಡೆದಿರುವ ಓಲೆಮುಂಡೋವು ದರ್ಗಾ ಶರೀಫ್‌ಗೆ ತನ್ನದೇ ಆದ ಇತಿಹಾಸವಿದ್ದು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಹಿಂದಿನಿಂದಲೂ ಬರುತ್ತಿದ್ದಾರೆ ಎಂದು ಹೇಳಿದರು. ಹಲವು ಮಹಾನುಭಾವರು ಇಲ್ಲಿಗೆ ಸೇವೆ ಸಲ್ಲಿಸಿದ್ದು ಅವರೆಲ್ಲರ ನಿಸ್ವಾರ್ಥ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಇಲ್ಲಿನ ದರ್ಗಾ ನೂತನ ಕಟ್ಟಡ ನಿರ್ಮಾಣ ವಿಚಾರದಲ್ಲಿ ಸಹಕಾರ ನೀಡಿದವರಿಗೆ ಅಲ್ಲಾಹು ಪ್ರತಿಫಲ ನೀಡಲಿದ್ದಾನೆ ಎಂದು ಹೇಳಿದರು.

ಸಯ್ಯದ್ ಇಸ್ಮಾಯಿಲ್ ತಂಙಳ್ ಮಾಡಾವು ಮಾತನಾಡಿ, ಅಲ್ಲಾಹನ ಔಲಿಯಾಗಳ ಮಖಾಂ ಝಿಯಾರತ್ ನೆರವೇರಿಸುವುದು ಶ್ರೇಷ್ಠತೆ ಹೊಂದಿದ ಕಾರ್ಯವಾಗಿದೆ, ದರ್ಗಾ ಕಟ್ಟಡ ನಿರ್ಮಾಣಕ್ಕೆ ಸಹಕರಸಿದವರು ಭಾಗ್ಯವಂತರು ಎಂದು ಅವರು ಹೇಳಿದರು.
ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ಓಲೆಮುಂಡೋವು ಸೌಹಾರ್ದತೆಗೆ ಹೆಸರು ಪಡೆದ ಊರಾಗಿದ್ದು ಅನ್ಯೋನ್ಯತೆಗೆ ಹೆಸರು ಪಡೆದಿದೆ ಎಂದು ಹೇಳಿದರು. ಉಳ್ಳಾಲ ಬಳಿಕ ಈ ಭಾಗದ ಇತಿಹಾಸ ಪ್ರಸಿದ್ಧ ದರ್ಗಾ ಎಂದರೆ ಅದು ಓಲೆಮುಂಡೋವು ದರ್ಗಾ ಆಗಿದೆ ಎಂದು ಅವರು ಹೇಳಿದರು.
ರೆಂಜಲಾಡಿ ಇಸ್ಲಾಮಿಕ್ ಸೆಂಟರ್‌ನ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ, ಓಲೆಮುಂಡೋವು ದರ್ಗಾ ಎಲ್ಲಾ ಜಾತಿ, ಧರ್ಮದವರು ಗೌರವಿಸುವ ಕೇಂದ್ರವಾಗಿದ್ದು ಈ ದರ್ಗಾ ನಾಡಿನ ಬೆಳಕಾಗಿದೆ ಎಂದು ಹೇಳಿದರು. ಈ ದರ್ಗಾ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ಪವಾಡ ಕೇಂದ್ರವಾಗಿದೆ ಎಂದು ಅವರು ಹೇಳಿದರು.
ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ.ಎಸ್ ಮುಹಮ್ಮದ್ ಮಾತನಾಡಿ ದರ್ಗಾ ಕೇಂದ್ರಗಳು ಶಾಂತಿ ಮತ್ತು ಸೌಹಾರ್ದತೆಯ ಸ್ಥಳವಾಗಿದ್ದು ನೊಂದವರ ಆಶಾ ಕೇಂದ್ರವೂ ಆಗಿದೆ. ಓಲೆಮುಂಡೋವು ದರ್ಗಾ ಶರೀಫ್ ಹಿಂದಿನಿಂದಲೂ ಸೌಹಾರ್ದತೆಯ ಕೇಂದ್ರವಾಗಿ ಗುರುತಿಸಿಕೊಂಡಿದ್ದು ಇತರ ಧರ್ಮಗಳ ಸಹೋದರರು ಕೂಡಾ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ, ಇದು ನಿಜವಾದ ಭಾರತ ಆಗಿದೆ ಎಂದು ಅವರು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ, ಧರ್ಮಗಳೆಲ್ಲವೂ ಶಾಂತಿ ಸೌಹಾರ್ದತೆಯನ್ನು ಬೋಧಿಸಿದ್ದು ಅಂತಹ ಸೌಹಾರ್ದತೆ ಮತ್ತು ಶಾಂತಿಯ ವಾತಾವರಣ ಓಲೆಮುಂಡೋವಿನಲ್ಲಿ ಇದೆ, ಇಲ್ಲಿನ ದರ್ಗಾ ಶರೀಫ್ ನಮ್ಮೆಲ್ಲರ ಅಭಯ ಕೇಂದ್ರವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಮಹಾಬಲ ಶೆಟ್ಟಿ ಮಾತನಾಡಿ ಸೌಹಾರ್ದತೆ ಇರುವಲ್ಲಿ ಶಾಂತಿ ಇರುತ್ತದೆ, ಓಲೆಮುಂಡೋವು ದರ್ಗಾ ಕಟ್ಟಡದ ಉದ್ಘಾಟನೆಯಲ್ಲಿ ಎಲ್ಲ ಧರ್ಮದವರು ಸೇರಿರುವುದು ನಿಜಕ್ಕೂ ಮಾದರಿಯಾಗಿದೆ ಎಂದು ಹೇಳಿದರು.

ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಮಾತನಾಡಿ ಎಲ್ಲರನ್ನು ಸೇರಿಸಿಕೊಂಡು ಮಾಡಿರುವ ಇಂದಿನ ದರ್ಗಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಮಾದರಿಯಾಗಿದೆ. ಓಲೆಮುಂಡೋವು ಮೋಹನ್ ರೈ ಅವರು ಮಸೀದಿಗೆ ಜಾಗವನ್ನು ಬಿಟ್ಟು ಕೊಡುವ ಮೂಲಕ ಸೌಹಾರ್ದತೆಯ ರಾಯಭಾರಿಯಾಗಿ ಹೊರಹೊಮ್ಮಿದ್ದಾರೆ, ಅಂತಹ ಮನಸ್ಸುಗಳು ಈ ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಾಗಿದೆ ಎಂದು ಹೇಳಿದರು. ಓಲೆಮುಂಡೋವು ಮಖಾಂ ಹಲವು ಪವಾಡಗಳಿಗೆ ಹೆಸರು ಪಡೆದಿದ್ದು ಅದೆಷ್ಟೋ ಮಂದಿ ಇಲ್ಲಿಂದ ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರವನ್ನು ಕಂಡುಕೊಂಡ ಉದಾಹರಣೆಯಿದೆ ಎಂದು ಅವರು ಹೇಳಿದರು.
ಗೌರವಾರ್ಪಣೆ:
ಸಯ್ಯದ್ ಜಿಫ್ರಿ ತಂಙಳ್ ಹಾಗೂ ಸಯ್ಯದ್ ಸಯ್ಯದಲವಿ ತಂಙಳ್ ಅವರಿಗೆ ಗೌರವಾರ್ಪಣೆ ನಡೆಯಿತು. ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ರಾಜಕೀಯ ಲಾಭಕ್ಕೆ ಧರ್ಮ ಬಳಕೆಯಾಗಬಾರದು-ಅಶೋಕ್ ರೈ
ಸಂಜೆ ವೇಳೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಓಲೆಮುಂಡೋವು ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಧಾರ್ಮಿಕ ಕೇಂದ್ರಗಳೆಲ್ಲವೂ ಶಾಂತಿ ಮತ್ತು ಸೌಹಾರ್ದತೆಯನ್ನು ಬೋಧಿಸುತ್ತಿದ್ದು ರಾಜಕೀಯ ಲಾಭಕ್ಕಾಗಿ ಇಂದು ಧರ್ಮಗಳ ಮಧ್ಯೆ ಒಡಕು ಮೂಡುತ್ತಿದೆ, ಎಲ್ಲ ಧರ್ಮಗಳ ಧರ್ಮಗುರುಗಳು ಸೌಹಾರ್ದತೆಯ ರಾಯಭಾರಿಗಳಾಗುವ ಮೂಲಕ ಸಮಾಜದಲ್ಲಿ ಸಹೋದರತೆ, ಸಹಭಾಳ್ವೆ ನೆಲೆ ನಿಲ್ಲುವಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದರು. ನಾನು ಅಭಿವೃದ್ಧಿ ವಿಚಾರದಲ್ಲಿ ಇದುವರೆಗೂ ರಾಜಕೀಯ ಮಾಡಿಲ್ಲ, ಮುಂದಕ್ಕೆ ಮಾಡುವುದೂ ಇಲ್ಲ, ಮಸೀದಿ, ದೇವಸ್ಥಾನ ಎಂದು ನೋಡದೇ ಅನುದಾನ ಕೊಟ್ಟಿದ್ದೇನೆ, ಅಭಿವೃದ್ಧಿ ಮಾಡುವುದು ಮತ್ತು ಸೌಹಾರ್ದ ಸಮಾಜ ನಿರ್ಮಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಈ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಕೆಯ್ಯೂರು ಗ್ರಾ.ಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲ ಹಾಗೂ ಜಮಾಅತ್ ಪದಾಧಿಕಾರಿಗಳು, ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಉದ್ಘಾಟನಾ ಸಮಾರಂಭದ ಸಭಾ ವೇದಿಕೆಯಲ್ಲಿ ಉದ್ಯಮಿಗಳಾದ ಯೂಸುಫ್ ಹಾಜಿ ಕೈಕಾರ, ಮಮ್ಮಾಲಿ ಹಾಜಿ ಬೆಳಾರೆ, ಮಂಗಳ ಅಬೂಬಕ್ಕರ್ ಹಾಜಿ, ಹಿದಾಯತ್ ಕಣ್ಣೂರು, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಹುಸೈನಾರ್ ಸಂತೋಷ್, ಓಲೆಮುಂಡೋವು ಮಸೀದಿಯ ಸಹಖತೀಬ್ ಹಸನ್ ಬಾಖವಿ, ಸಂಪ್ಯ ಖತೀಬ್ ಹಮೀದ್ ದಾರಿಮಿ ಸಂಪ್ಯ, ಇಬ್ರಾಹಿಂ ಮುಲಾರ್, ಓಲೆಮುಂಡೋವು ಮಸೀದಿಯ ಅಧ್ಯಕ್ಷ ಮಹಮ್ಮದ್ ಕುಂಞಿ ಅಂಙತ್ತಡ್ಕ, ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಎರಬೈಲ್, ಕೋಶಾಧಿಕಾರಿ ಇಸ್ಮಾಯಿಲ್ ಹಾಜಿ ಎರಬೈಲ್, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮುಸ್ಲಿಯಾರ್, ಸದರ್ ಉಸ್ತಾದ್ ಶಿಹಾಬುದ್ದೀನ್ ಇರ್ಫಾನಿ, ಮುಕ್ವೆ ಖತೀಬ್ ಇರ್ಷಾದ್ ಫೈಝಿ ಮುಕ್ವೆ, ಯಾಕೂಬ್ ದಾರಿಮಿ ಮಾಂತೂರು, ಉಮ್ಮರ್ ಮುಸ್ಲಿಯಾರ್, ಪ್ರಸಾದ್ ರೈ, ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಶಾಹುಲ್ ಹಮೀದ್ ಉಸ್ತಾದ್, ಸವಣೂರು ಗ್ರಾ.ಪಂ ಸದಸ್ಯ ಎಂ.ಎ ರಫೀಕ್, ರೆಂಜಲಾಡಿ ಮಸೀದಿ ಪ್ರ.ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್, ಆದಂ ದಾರಿಮಿ ಗಾಳಿಮುಖ, ಅಬ್ಬಾಸ್ ದಾರಿಮಿ ಕೆಲಿಂಜ, ರಶೀದ್ ಹಾಜಿ ನೈತ್ತಾಡಿ, , ಅಬೂಬಕ್ಕರ್ ದಾರಿಮಿ ಕಟ್ಟತ್ತಾರ್ ಉಪಸ್ಥಿತರಿದ್ದರು. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ಬಾಸ್ ಮದನಿ ಸ್ವಾಗತಿಸಿದರು. ನೌಫಲ್ ಕಾರ್ಯಕ್ರಮ ನಿರೂಪಿಸಿದರು.