ಬಂಟ್ವಾಳ:ನಂದಾವರ ಗುಂಪುಮನೆ ಬಳಿ ಗುಡ್ಡ ಕುಸಿತದಿಂದಾಗಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಹಾಗೂ ಮನೆ ದುರಸ್ತಿ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವತಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ.ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಿಲ್ಲಾಧಿಕಾರಿಯವರು ವರದಿ ನೀಡಿದ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಂದಾವರ-ಗುಂಪುಮನೆ ಎಂಬಲ್ಲಿ ಗುಡ್ಡ ಕುಸಿತ ಉಂಟಾದ ಸ್ಥಳಕ್ಕೆ ಜು.೮ರಂದು ಸಂಜೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಮಾತನಾಡಿದ ಸಚಿವರು, ಗುಡ್ಡ ಕುಸಿತ ಉಂಟಾಗಿ ಮಹಿಳೆ ಮೃತಪಟ್ಟ ಘಟನೆ ಅತ್ಯಂತ ವಿಷಾದನೀಯವಾಗಿದ್ದು, ಮುಂದಕ್ಕೆ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸಬಾರದು.ಈ ಬಗ್ಗೆ ಸ್ಥಳೀಯ ಮಟ್ಟದ ಅಧಿಕಾರಿಗಳೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮಳೆ ಹಾಗೂ ಪ್ರಾಕೃತಿಕ ವಿಕೋಪದಂತಹ ಸಂದರ್ಭದಲ್ಲಿ ಜನರ ಬೇಡಿಕೆ, ಕರೆಗಳನ್ನು ನಿರ್ಲಕ್ಷಿಸದೆ ಅಧಿಕಾರಿಗಳು ತಕ್ಷಣ ಸ್ಪಂದಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದೇ ವೇಳೆ ಸ್ಥಳೀಯ ನಿವಾಸಿ ಜಲಜಾ ನಾಯಕ್ ಅವರು ತನ್ನ ಮನೆ ತೀರಾ ಶಿಥಿಲಗೊಂಡು ವಾಸಿಸಲು ಅಸಾಧ್ಯ ಎಂದು ಸಚಿವರಲ್ಲಿ ಮನವಿ ಮಾಡಿದರು.ಮನೆ ಪರಿಶೀಲನೆ ನಡೆಸಿದ ಸಚಿವರು ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಅಶ್ವನಿ ಕುಮಾರ್ ರೈ, ಸುದೀಪ್ ಕುಮಾರ್ ಶೆಟ್ಟಿ, ಬೇಬಿಕುಂದರ್, ಮಹಮ್ಮದ್ ನಂದಾವರ, ಯೂಸುಫ್ ಕರಂದಾಡಿ, ಸಮದ್ ಕೈಕಂಬ, ಇಬ್ರಾಹಿಂ ನವಾಜ್ ಬಡಕಬೈಲು, ಆರಿಫ್ ನಂದಾವರ, ಶಾಫಿ ನಂದಾವರ, ಮುಸ್ತಾಕ್, ರಮ್ಸಾದ್ ಮೋನು, ಶರೀಫ್ ನಂದಾವರ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ತಹಶಿಲ್ದಾರ್ ಎಸ್.ವಿ.ಕೂಡಲಗಿ, ಡಿವೈಎಸ್‌ಪಿ. ಪ್ರತಾಪ್ ಥೋರಾಟ್, ಇನ್‌ಸ್ಪ್ಪೆಕ್ಟರ್ ವಿವೇಕಾನಂದ, ಪಿ.ಡಿ.ಒ. ಲಕ್ಷಣ್, ಮತ್ತಿತರರು ಉಪಸ್ಥಿತರಿದ್ದರು.