




ಪುತ್ತೂರು: ಕೃಷಿಯಲ್ಲಿ ಹೊಸ ವಿಚಾರ ಬಂದಾಗ ರೈತರು ಅದನ್ನು ಏಕಾಏಕಿ ಪ್ರಯೋಗ ಮಾಡುವುದು ಸರಿಯಲ್ಲ. ತಜ್ಞರೊಂದಿಗೆ ಚಿಂತಿಸಿ ಮುಂದುವರಿಯಬೇಕು. ಕೃಷಿಯಲ್ಲಿ ಒಂದು ಸೀಸನ್ನಲ್ಲಿ ದೊರೆಯುವ ಫಲಿತಾಂಶವಲ್ಲ. ಫಲಿತಾಂಶ ದೊರೆಯುವಾಗ ಎಂಟು ವರ್ಷಗಳ ಹೋಗುತ್ತದೆ. ಆಗ ರೈತರ ಅಷ್ಟು ಆಯುಷ್ಯವು ಮುಗಿದಿರುತ್ತದೆ ಎಂದು ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಹೇಳಿದರು.




ಮುಕ್ರಂಪಾಡಿ ಸುಭದ್ರ ಸಭಾ ಮಂದಿರದಲ್ಲಿ ಡಿ.14ರಂದು ನಡೆದ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಕೆ ಹಾಗೂ ಕಾಫಿ ಬೆಳೆಗಾರರ ಮಾಹಿತಿ ಶಿಬಿರ ಮತ್ತು ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕೃಷಿಯಲ್ಲಿ ರೈತರು ಎದುರಿಸುವ ಸಮಸ್ಯೆಗಳಿಗೆಗೆ ಪರಿಹಾರ ದೊರೆತಿಲ್ಲ. ರೈತರು ತಮ್ಮ ಅನುಭವದಲ್ಲಿ ಕಂಡುಕೊಳ್ಳಬೇಕು. ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು. ಸರಿಯಾದ ಮಾಹಿತಿ ಪಡೆದು ಮುಂದುವರಿದಾಗ ಕೃಷಿಯಲ್ಲಿ ಅಭಿವೃದ್ಧಿ ಸಾಧ್ಯ ಎಂದರು.






ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಕೃಷಿಗೆ ಬಾಧಿಸುವ ವಿವಿಧ ರೋಗಗಳು, ಪ್ರಾಕೃತಿಕ ಅಸಮತೋಲನದಿಂದಾಗಿ ಕೃಷಿತೋ ನಾ ದುರ್ಭಿಕ್ಷಂ ಎಂಬ ಗಾದೆ ಮಾತು ಸುಳ್ಳಾಗುವ ಭಯ ಕೃಷಿಕರನ್ನು ಕಾಡುತ್ತಿದೆ. ಸರಕಾರದಿಂದ ಶೂನ್ಯ ಬಡ್ಡಿಯ ಸಾಲವೂ ಇಲ್ಲ. ಬೆಳೆ ವಿಮೆಯೂ ಬಾರದೇ ಇದ್ದು ಕೃಷಿಕರಿಗೆ ಸರಕಾರದಿಂದಲೂ ಅನ್ಯಾಯುಂಟಾಗುತ್ತಿದೆ. ಕೃಷಿಕ ಜೀವನ ಕಷ್ಟದಾಯಕ. ಅವರು ಆಶಾದಾಯಕವಾಗಿರುತ್ತಾರೆಯೇ ಹೊರತು ಅವರ ಆಶೆ ಈಡೇರುವುದಿಲ್ಲ. ರೈತರನ್ನು ಶಕುನಿಯಂತೆ ಸೋಲಿಸುವ ವ್ಯಾಪಾರಿಗಳಿದ್ದಾರೆ. ಉತ್ತಮ ಬೆಲೆ ನೀಡುವುದಾಗಿ ತಿಳಿಸಿ ಕುತಂತ್ರದಿಂದಲೇ ರೈತರನ್ನು ಸೋಲಿಸುವವರು ಹೆಚ್ಚಿದ್ದು ರೈತರು ಸದಾ ಜಾಗರೂಕರಾಗಿರಬೇಕು ಎಂದರು.
ಕ್ಯಾಂಪ್ಕೋ ಮಾಜಿ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ಮಾತನಾಡಿ, ರೈತರು ಮಾರುಕಟ್ಟೆ ತಜ್ಞರಾಗಬೇಕು. ಹೊಸನವಿದಾನಗಳನ್ನು ಅಳವಡಿಸಬೇಕು. ಸಾಂಪ್ರದಾಯಿಕವಾಗಿ ಮಾತ್ರ ಮಾರುಕಟ್ಟೆ ತಜ್ಣರಾಗಿ ಪರಿಷಿತರಾಗಬೇಕು. ಹೊಸ ಬಂದಾಗ ಅದರ ಹಿಂದೆ ಬೀಳುವುದು ಸಾಮಾನ್ಯ ಇದು ಕೃಷಿಕರಿಗೆ ಸೂಕ್ತವಲ್ಲ. ಅದು ಕೃಷಿಗೆ ಮಾರಕವಾಗಬಹದು. ಕಡಿಮೆ ಖರ್ಚಿನಲ್ಲಿ ಸುಲಭ ವಿಧಾನದಿಂದ ಅಧಿಕ ಲಾಭ ಪಡೆಯಬೇಕು ಎಂದರು. ಪ್ರಗತಿಪರ ಕೃಷಿಕರಾದ ಪಡಾರು ತಿರುಮಲೇಶ್ವರ ಭಟ್ ದೇಲಂಪಾಡಿ, ಸುಜಾತಾ ರಮೇಶ್, ಅಜಿತ್ ಪ್ರಸಾದ್ ರೈ ಉಪಸ್ಥಿತರಿದ್ದರು.

ಸನ್ಮಾನ:
ಕಾರ್ಯಕ್ರಮದ ಉದ್ಘಾಟಕರಾದ ಹರ್ಷೇಂದ್ರ ಕುಮಾರ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೈ.ಎನ್. ಕೃಷ್ಣೇಗೌಡ, ಡಾ. ವೇಣುಗೋಪಾಲ್, ಅನಂತರಾಮಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಸಂಯೋಜನ ಸಮಿತಿಯ ಶಶಿಕುಮಾರ್ ಭಟ್ ಪಡಾರು ಸ್ವಾಗತಿಸಿದರು. ಮೇಘಶ್ಯಾಮ್ ಅಂಗ್ರಿ, ಶ್ರೀಕೃಷ್ಣಪ್ರಸಾದ್, ಗೋವಿಂದ ಭಟ್ ಸನ್ಮಾನ ಪತ್ರ ವಾಚಿಸಿದರು. ಶ್ರೀಕೃಷ್ಣಪ್ರಸಾದ್ ಕೊಪ್ಪರತೊಟ್ಟು ವಂದಿಸಿದರು. ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿದರು.
ಮಾಹಿತಿ ಕಾರ್ಯಾಗಾರ:
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ. ವೇಣುಗೋಪಾಲ್ ಸಮಗ್ರ ಕಾಳುಮೆಣಸು ಕೊಯ್ಲು, ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನ, ಸಕಲೇಶಪುರದ ಡಾ. ಎಚ್. ಎಸ್. ಧರ್ಮರಾಜ್ ಕಾಫಿ ಕೊಯ್ಲು, ಸಂಸ್ಕರಣೆ, ಶೇಖರಣೆಗೊಳಿಸುವ ವಿಧಾನ, ಕೃಷಿಕ ಅನಂತರಾಮಕೃಷ್ಣ ಪಳ್ಳತ್ತಡ್ಕ ಧೂಪದ ಗಿಡ ನಾಟಿ ಹಾಗೂ ಕಾಳುಮೆಣಸು ಗಿಡಗಳನ್ನು ಬೆಳೆಸುವುದು ಹಾಗೂ ನಿರ್ವಹಣೆ, ಕಾಸರಗೋಡು ಸಿಪಿಸಿಆರ್ ಐ ವಿಜ್ಞಾನಿ ಡಾ. ರವಿ ಭಟ್ ಅಡಕೆ ಎಲೆಚುಕ್ಕಿ ರೋಗ ಹತೋಟಿ ಮತ್ತು ನಿರ್ಮೂಲನೆ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಗಿಡಗಳ ಮಾರಾಟ, ಯಂತ್ರೋಪಕರಣಗಳ ಪ್ರದರ್ಶನ ಮಳಿಗೆಗಳಿದ್ದವು.






