ನಗರದ ಹೃದಯ ಭಾಗದಲ್ಲಿದ್ದ ಶಿವರಾಮ ಭಟ್ ಕ್ಲಿನಿಕ್ ಬಂದ್

0

ಪುತ್ತೂರು : ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ , ಕೆಮ್ಮು ಮಾಮೂಲಿ. ಇದಕ್ಕೆ ಡಾ. ಶಿವರಾಂ ಭಟ್ ಅವರ ಕಾಂಪೌಂಡರ್ ನೀಡುತ್ತಿದ್ದ ಮೂರು ಹೊತ್ತಿನ ಮದ್ದಿನಲ್ಲಿ ಎಲ್ಲವೂ ಗುಣ. ಕೈಗೆಟಕುವ ಕಡಿಮೆ ಮೊತ್ತ , ಸುಲಭವಾಗಿ ದೊರೆಯಬಲ್ಲರು ಎಂಬೆಲ್ಲ ಕಾರಣಕ್ಕೆ ಇವರಲ್ಲಿಗೆ ಬರುತ್ತಿದ್ದ ಜನರಿಗೆ ಈಗ ನಿರಾಶೆಯಾಗಿದೆ. ಶಿವರಾಮ ಭಟ್ ಕ್ಲಿನಿಕ್ ಬಂದ್ ಮಾಡಲಾಗಿದ್ದು, ಕಾಂಪೌಂಡರ್ ನರಸಿಂಹ ಭಟ್ ವೃತ್ತಿಗೆ ವಿದಾಯ ಹೇಳಿ ವಿಶ್ರಾಂತ ಜೀವನಕ್ಕೆ ಮುಂದಡಿಯಿಟ್ಟಿರುವುದೇ ಇದಕ್ಕೆ ಕಾರಣ.

ತನ್ನ 16ನೇ ವಯಸ್ಸಿಗೆ ಪುತ್ತೂರಿನ ಡಾ. ಶಿವರಾಂ ಭಟ್ ಅವರಲ್ಲಿ ಕಾಂಪೌಂಡರ್ ಆಗಿ ಕೆಲಸಕ್ಕೆ ಸೇರಿಕೊಂಡ ನರಸಿಂಹ ಭಟ್ ಅವರಿಗೆ ಈಗ 82 ವರ್ಷ. ಕಾಂಪೌಂಡರ್ ಆಗಿ ಸುಮಾರು 68 ವರ್ಷಗಳ ಸೇವೆಯ ನಂತರ ಕೆಲಸಕ್ಕೆ ವಿದಾಯ ಹೇಳಿ ವಿಶ್ರಾಂತ ಜೀವನಕ್ಕೆ ಮುನ್ನಡಿಯಿಟ್ಟಿರುವ ನರಸಿಂಹ ಭಟ್ ಅವರ ಅನುಪಸ್ಥಿತಿ ಪ್ರತಿದಿನ ಔಷಧಿಗಾಗಿ ಅವರಲ್ಲಿಗೆ ಭೇಟಿ ನೀಡುತ್ತಿದ್ದ ನೂರಾರು ಮಂದಿಗೆ ನಿರಾಶೆ ತಂದಿದೆ.
ಶಿವರಾಮ ಭಟ್ರೆನ ಕಂಪೌಂಡರ್ನಾಡೆ ಪೋದು ಮರ್ದ್ ದೆತ್ತೋನ್ಲೆ….. ಒರಟ್ಟೆ ಗುಣ ಆಪುಂಡು. ಇದು ಪುತ್ತೂರಿನಲ್ಲಿ ಅದೆಷ್ಟು ನುರಿತ ವೈದ್ಯರಿದ್ದರೂ ಜನ ಸಾಮಾನ್ಯರ ನಡುವೆ ಪ್ರಚಲಿತದಲ್ಲಿರುವ ಒಂದು ಮಾತು. ಹಾಗಂತ ಇದು ಮಾತಿಗಷ್ಟೇ ಸೀಮಿತವಲ್ಲ. ಕಂಪೌಂಡರ್ ನರಸಿಂಹ ಭಟ್ ಮದ್ದು ನೀಡಿದರೆಂದರೆ ರೋಗ ವಾಸಿಯಾಗಲೇಬೇಕು. ಕಾಯುವ, ದುಬಾರಿ ಖರ್ಚಿನ ಜಂಜಾಟವಿಲ್ಲದೆ ನಗುವಿನೊಂದಿಗೆ ಅವರು ನೀಡುವ ಮದ್ದು ಎಲ್ಲಾ ರೋಗಗಳಿಗೂ ಸಂಜೀವಿನಿಯಾಗಿತ್ತು. ಡಾ. ಶಿವರಾಮ ಭಟ್ ಅವರಲ್ಲಿ ಕಂಪೌಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದ ನರಸಿಂಹ ಭಟ್, ಶಿವರಾಮ ಭಟ್ ಅವರ ನಿಧನದ ಬಳಿಕವೂ ಅವರ ಹೆಸರಿನಲ್ಲಿ ಕ್ಲಿನಿಕ್ ಅನ್ನು ಮುಂದುವರಿಸಿಕೊಂಡು ಹೋಗಿದ್ದರು. ಈಗ ಕ್ಲಿನಿಕ್ಕಿಗೆ ಬೀಗ ಜಡಿದಿದ್ದು ಶಿವರಾಮ ಭಟ್ ಕ್ಲಿನಿಕ್ ಬಂದ್ ಮಾಡಲಾಗಿದೆ
ಎಂಬ ಬೋರ್ಡ್ ಹೋದವರನ್ನು ಸ್ವಾಗತಿಸುತ್ತಿದೆ.

ಹಾರಾಡಿಯಲ್ಲಿ ತಮ್ಮ ಪತ್ನಿ ಸರಸ್ವತಿ ಅವರೊಂದಿಗೆ ವಿಶ್ರಾಂತ ಜೀವನ ನಡೆಸುತ್ತಿರುವ ನರಸಿಂಹ ಭಟ್, ಅವರ ಪುತ್ರ ಕಾರ್ತಿಕ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು ಪತ್ನಿ ಮಗನೊಂದಿಗೆ ಲಂಡನ್ ನಲ್ಲಿ ನೆಲೆಸಿದ್ದಾರೆ. ನರಸಿಂಹ ಭಟ್ ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ ಎಂಬುದೇ ಸುದ್ದಿ ಆಶಯ.

LEAVE A REPLY

Please enter your comment!
Please enter your name here