ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಭಾಭವನದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಕಾಲೇಜಿನ ಎನ್ ಸಿ ಸಿ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪ್ಲ್ಯಾಸ್ಟಿಕ್ ಚೀಲ ಮುಕ್ತ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಆಂಟೊನಿ ಪ್ರಕಾಶ್ ಮೊಂತೆರೋ ಪ್ಲ್ಯಾಸ್ಟಿಕ್ ಪರಿಸರಕ್ಕೆ ಅಪಾಯ ತರುವಂತಹ ವಸ್ತುವಾಗಿದೆ. ವಿದ್ಯಾವಂತರಾದ ನಾವೆಲ್ಲರೂ ಪ್ಲ್ಯಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿದೆವೆಂದಾದಲ್ಲಿ ಅದು ಪರಿಸರ ಸಂರಕ್ಷಣೆಗೆ ನಮ್ಮ ಪುಟ್ಟ ಕೊಡುಗೆಯಾಗಿದೆ. ಏಕ ಬಳಕೆಯ ಪ್ಲ್ಯಾಸ್ಟಿಕ್ ಚೀಲಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ಅವ್ಯಾಹತವಾಗಿ ಬಳಸುತ್ತಿದ್ದು ಈ ಚೀಲಗಳನ್ನು ಎಲ್ಲೆಂದರಲ್ಲಿ ಎಸೆದ ದುಷ್ಟಪರಿಣಾಮ ಮಾನವನ ಮೇಲೆ ಮಾತ್ರವಲ್ಲದೆ ಜಲಮೂಲಗಳ ಮೇಲೆ ಹಾಗೂ ವನ್ಯಜೀವಿಗಳ ಮೇಲೂ ಉಂಟಾಗಿದೆ. ಪ್ಲ್ಯಾಸ್ಟಿಕ್ಮೇಲೆ ಅತಿಯಾದ ಅವಲಂಬನೆ ಪರಿಸರಕ್ಕೆ ವಿನಾಶಕಾರಿಯಾಗಿದೆ. ಇಂದು ಬಳಸಿದ ಪ್ಲ್ಯಾಸ್ಟಿಕ್ ಚೀಲವು ಮಣ್ಣಲ್ಲಿ ಬೆರೆಯಲು ಸುಮಾರು ಐದುನೂರು ವರ್ಷಗಳು ಬೇಕಾಗುತ್ತವೆ ಎಂದು ಹೇಳಿದರು.
ಪ್ಲ್ಯಾಸ್ಟಿಕ್ ಚೀಲ ಮುಕ್ತದಿನದ ಅಂಗವಾಗಿ ತಯಾರಿಸಿದ ಪೇಪರ್ ಚೀಲಗಳನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು. ಕೆಡೆಟ್ ಗಳು ಹಾಗೂ ನೆರೆದಿದ್ದ ಅತಿಥಿಗಳು ಪ್ಲ್ಯಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವಂತೆ ಈ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. 125 ಕೆಡೆಟ್ ಗಳು ಪೇಪರ್ ಚೀಲಗಳನ್ನು ತಯಾರಿಸಿ ಸಮೀಪದ ಅಂಗಡಿಗಳಿಗೆ ವಿತರಿಸಿದರು. ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಯಾನ್ ಕ್ರಾಸ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೌಕಾದಳದ ಅಧಿಕಾರಿ ತೇಜಸ್ವಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಎನ್ ಸಿ ಸಿ ಆಫೀಸರ್ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೆರಾ, ಸಂತ ಫಿಲೋಮಿನಾ ಪ್ರೌಢಶಾಲೆಯ ಎನ್ ಸಿ ಸಿ ಅಧಿಕಾರಿಗಳಾದ ನರೇಶ್ ಲೋಬೋ,ಕ್ಲೆಮೆಂಟ್ ಪಿಂಟೋ, ಹಾಗೂ ರೋಶನ್ ಸಿಕ್ವೆರಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.