ಭಗವದ್ಗೀತೆಯು ಬದುಕಿಗೊಂದು ಸುಂದರ ಮಾರ್ಗದರ್ಶಿ- ಶ್ರೀ ವೆಂಕಟರಮಣ ಭಟ್ ಮಂಜುಲಗಿರಿ
ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ಬೆಟ್ಟಂಪಾಡಿ ಇಲ್ಲಿ ಗೀತಾ ಸಾರಾಂಶ, ಭಗವದ್ಗೀತಾ ಶ್ಲೋಕಗಳ ಪಾರಾಯಣ ಇದರ ವಾರ್ಷಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಜು.13ರಂದು ನಡೆಯಿತು. ನವೋದಯ ಪ್ರೌಢ ಶಾಲೆ ಬೆಟ್ಟಂಪಾಡಿ ಇಲ್ಲಿಯ ನಿವೃತ್ತ ಮುಖ್ಯಗುರು, ಸಂಸ್ಕೃತ ಪಂಡಿತರೂ ಆದ ಶ್ರೀ ವೆಂಕಟರಮಣ ಭಟ್ ಮಂಜಲ ಗಿರಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಭಗವದ್ಗೀತೆಯು ನಮ್ಮ ಬದುಕಿಗೊಂದು ಮಾರ್ಗದರ್ಶಿ ಇದ್ದಂತೆ. ಜೊತೆಗೆ ಸ್ಫೂರ್ತಿದಾಯಕವೂ ಹೌದು. ಮನಸ್ಸಿಟ್ಟು ಇದನ್ನು ಮನನ ಮಾಡಿದಲ್ಲಿ ಜೀವನದಲ್ಲಿ ನಾವು ಯಶಸ್ಸು ಕಾಣಲು ಸಾಧ್ಯ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬಂತೆ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಮುಖ್ಯ ಅತಿಥಿಗಳಾಗಿ ಸಂಸ್ಕೃತ ಭಾಷಾ ಶಿಕ್ಷಕ ಶಿವರಾಮ್ ಭಟ್ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತಡ್ಕ ಇವರು ಮಾತನಾಡುತ್ತಾ ನಿಷ್ಠೆಯಿಂದ ಗೀತಾಪಾರಾಯಣ ಮಾಡುವುದೇ ಪವಿತ್ರವಾದ ಹಿಂದೂ ಧರ್ಮಕ್ಕೆ ನಾವು ನೀಡುವ ಕಾಣಿಕೆ ಎಂದು ಮಕ್ಕಳಿಗೆ ಶುಭ ಹಾರೈಸಿದರು. ಸಹ ಶಿಕ್ಷಕಿ ಭವ್ಯ ಸ್ವಾಗತಿಸಿದರು. ಶರ್ಮಿಳಾ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ರಕ್ಷಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ತದನಂತರದಲ್ಲಿ ಸುದೀರ್ಘ ಎರಡು ಗಂಟೆಗಳ ಕಾಲ ಭಗವದ್ಗೀತಾ ಪಾರಾಯಣ ನಡೆಯಿತು ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.