ಪ್ರಕೃತಿಯನ್ನು ದೇವರೆಂದು ಪೂಜಿಸುವ ಸಂಸ್ಕೃತಿ ನಮ್ಮದು: ಡಾ| ಪ್ರಭಾಕರ ಭಟ್
ಕಡಬ: ಪ್ರಕೃತಿಯನ್ನು ಸಂರಕ್ಷಣೆ ಮಾಡದಿದ್ದರೆ ನಮಗೆ ಉಳಿಗಾಲವಿಲ್ಲ. ನಮ್ಮ ಬದುಕಿಗೆ ಅನಿವಾರ್ಯವಾಗಿ ಬೇಕಾದ ಪ್ರಕೃತಿಯನ್ನು ಜೋಪಾನವಾಗಿರಿಸಿಕೊಳ್ಳುವ ಉದ್ದೇಶದಿಂದಲೇ ನಮ್ಮ ಪೂರ್ವಿಕರು ಪ್ರಕೃತಿಯನ್ನು ದೇವರೆಂದು ಪೂಜಿಸುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಅಭಿಪ್ರಾಯಪಟ್ಟರು.
ಕಡಬದ ಸರಸ್ವತೀ ವಿದ್ಯಾಲಯದ ಸಭಾಂಗಣದಲ್ಲಿ ಕಡಬ ಪಟ್ಟಣ ಪಂಚಾಯತ್, ಸರಸ್ವತೀ ವಿದ್ಯಾಲಯ ಕಡಬ, ಶ್ರೀ ಸರಸ್ವತೀ ಚಾರಿಟೇಬಲ್ ಟ್ರಸ್ಟ್ ಪುತ್ತೂರು, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಕಡಬ, ಗ್ರಾಮವಿಕಾಸ ಸಮಿತಿ ಕಡಬ ಕೋಡಿಂಬಾಳ ಹಾಗೂ ಅರಣ್ಯ ಇಲಾಖೆಯ ಪಂಜ ವಲಯದ ಸಹಭಾಗಿತ್ವದಲ್ಲಿ ಔಷಧಿಯ ಗಿಡಗಳ ಸಂರಕ್ಷಣೆ, ಸಂವರ್ಧನೆ, ಬಳಕೆ ಹಾಗೂ ಜನಜಾಗೃತಿ ಆಂದೋಲನದ ಪ್ರಯುಕ್ತ ನಡೆಯುತ್ತಿರುವ ವಿವೇಕ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ನಕ್ಷತ್ರ ವನ ನಿರ್ಮಾಣ ಹಾಗೂ ನಾಟಿ ವೈದ್ಯರನ್ನು ಸಮ್ಮಾನಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಕೃತಿಯನ್ನು ಸಂರಕ್ಷಣೆ ಮಾಡುವುದರೊಂದಿಗೆ ನೀರಿನ ಮಿತ ಬಳಕೆಯ ಕುರಿತು ನಾವೆಲ್ಲರೂ ಜಾಗೃತರಾಗಬೇಕು ಎಂದು ಅವರು ಸಲಹೆ ನೀಡಿದರು. ಕಡಬ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ಮಾತನಾಡಿ ಪರಿಪೂರ್ಣ ಸಮಾಜ ನಿರ್ಮಾಣವಾಗಬೇಕಾದರೆ ಮಕ್ಕಳ ಹೆತ್ತವರು ಮತ್ತು ಶಿಕ್ಷಕರು ಸಮಾನ ಜವಾಬ್ದಾರಿಯಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿಯ ಗುಣಗಳನ್ನು ಬೆಳೆಸಬೇಕು. ಸರಸ್ವತೀ ವಿದ್ಯಾಲಯವು ಈ ಎಲ್ಲಾ ಕೆಲಸಗಳನ್ನು ಮುತುವರ್ಜಿಯಿಂದ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಡಬ ಉಪ ವಲಯ ಅರಣ್ಯಾಧಿಕಾರಿ ಅಜಿತ್ಕುಮಾರ್ ಕೆ. ಅವರು ಮಾತನಾಡಿ ಮನುಷ್ಯನ ಸ್ವಾರ್ಥದಿಂದಾಗಿ ಇಂದು ಪರಿಸರ ನಾಶವಾಗುತ್ತಿದೆ. ಅರಣ್ಯ ಇಲಾಖೆಯ ಸಿಬಂದಿ ಇಂದು ಕಾಡನ್ನು ಕಾಯುವ ಬದಲು ಮನುಷ್ಯನನ್ನು ಕಾಯುವಂತಾಗಿರುವುದು ವಿಪರ್ಯಾಸ ಎಂದರು.
ಪುತ್ತೂರಿನ ಶ್ರೀ ಸರಸ್ವತೀ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಬಾಲಕೃಷ್ಣ ನಾಯಕ್ ಅವರು ಸರಸ್ವತೀ ವಿದ್ಯಾಲಯದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿ ಪ್ರಕೃತಿಯನ್ನು ಕೆಡಿಸದೆ ಜೋಪಾನವಾಗಿರಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕೆನ್ನುವ ಪ್ರಜ್ಞೆ ಎಲ್ಲರಲ್ಲಿಯೂ ಮೂಡಬೇಕು ಎಂದರು. ಗ್ರಾಮವಿಕಾಸ ಯೋಜನೆಯ ಸಂಯೋಜಕ ಪ್ರಶಾಂತ್ ಶುಭ ಹಾರೈಸಿದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಕೃಷ್ಣ ಶೆಟ್ಟಿ ಕಡಬ, ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಕಡಬ ಸರಸ್ವತೀ ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ರವಿರಾಜ್ ಶೆಟ್ಟಿ ಕಡಬ, ಸರಸ್ವತೀ ವಿದ್ಯಾಲಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಾಧವ ಕೋಲ್ಪೆ ಉಪಸ್ಥಿತರಿದ್ದರು. ನಾಟಿ ವೈದ್ಯರಾದ ದೊಡ್ಡಕೊಪ್ಪ ಕಜ್ಜೋಡಿ ಮನೆ ಮುಂಡಪ್ಪ ಕುಂಬಾರ ಹಾಗೂ ಸುಮಿತ್ರಾ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ಸತ್ಯನಾರಾಯಣ ಹೆಗ್ಡೆ ನಡುಮಜಲು ಸ್ವಾಗತಿಸಿ, ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಪ್ರಸ್ತಾವನೆಗೈದರು. ಶಿಕ್ಷಕಿ ಪ್ರೇಮಲತಾ ನಿರೂಪಿಸಿ, ಸವಿತಾ ಶಿವಸುಬ್ರಹ್ಮಣ್ಯ ಭಟ್ ವಂದಿಸಿದರು. ಶಿಕ್ಷಕ ಶಿವಪ್ರಸಾದ್ ಹಾಗೂ ಶಿಕ್ಷಕಿ ಸುಮಿತ್ರ ಸಮ್ಮಾನ ಪತ್ರ ವಾಚಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಲ್ಲಂತಡ್ಕ ಹಿಂದೂ ರುದ್ರಭೂಮಿಯಲ್ಲಿ 27 ನಕ್ಷತ್ರ ಹಾಗೂ 12 ರಾಶಿಗಳ ಗಿಡ ನೆಡುವ ಕಾರ್ಯಕ್ರಮ ಜರಗಿತು