ನೂತನ ನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್‌ರವರಿಗೆ ಸ್ವಾಗತ, ಕಲಾನಿಧಿ ಪ್ರಶಸ್ತಿ ಪುರಸ್ಕೃತ ಪಿ ಕೆ ಗಣೇಶ್‌ರವರಿಗೆ ಅಭಿನಂದನೆ
ಸರಿಯಾದ ಮಾಹಿತಿಯೊಂದಿಗೆ ಹೀಗೆಯೇ ಕೆಲಸ ಆಗಬೇಕೆಂಬ ಗುರಿ – ಕೇಶವಪ್ರಸಾದ್ ಮುಳಿಯ
ಪುತ್ತೂರು: ತಾ.ಪಂ ಕಾರ್ಯನಿರ್ವಹಣಾಧಿಕಾರಿಯಾಗಿದ್ದುಕೊಂಡು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 45 ತಿಂಗಳ ಕಾಲ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ನವೀನ್ ಕುಮಾರ್ ಭಂಡಾರಿ ಹೆಚ್ ಅವರ ವಿದಾಯಕೂಟ ಕಾರ್ಯಕ್ರಮ ಮತ್ತು ದೇವಳಕ್ಕೆ ಖಾಯಂ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಕೆ.ವಿ.ಶ್ರೀನಿವಾಸ್ ಅವರನ್ನು ಸ್ವಾಗತಿಸುವ ಹಾಗೂ ಕಲಾನಿಧಿ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೊಪೋನ್ ವಾದಕ ಡಾ.ಪಿ ಕೆ ಗಣೇಶ್ ಅವರಿಗೆ ಅಭಿನಂದನೆ ಕಾರ್ಯಕ್ರಮ ಜು.15ರಂದು ದೇವಳದ ಕಛೇರಿ ಸಭಾಂಗಣದಲ್ಲಿ ನಡೆಯಿತು.
ಸರಿಯಾದ ಮಾಹಿತಿಯೊಂದಿಗೆ ಹೀಗೆಯೇ ಕೆಲಸ ಆಗಬೇಕೆಂಬ ಗುರಿ:
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿ ಹೀಗೆಯೇ ಕೆಲಸ ಆಗಬೇಕೆಂದು ಸರಿಯಾದ ಮಾಹಿತಿ ಇದ್ದು ಕೊಂಡು ಕೆಲಸ ಮಾಡಿಸುವ ಮತ್ತು ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡುವವರು ನಮ್ಮ ದೇವಸ್ಥಾನಕ್ಕೆ ಸಿಕ್ಕಿದ್ದು ನಮ್ಮ ಭಾಗ್ಯ. ನಾವು ಪ್ರಥಮವಾಗಿ ಆಡಳಿತಕ್ಕೆ ಬಂದಾಗ ಎಲ್ಲಾ ರೀತಿಯ ಸಹಕಾರ ಕೊಟ್ಟ ಅವರು ನಾವು ಯೋಜನೆ ಹಾಕಿಕೊಂಡ ಮಾಸ್ಟರ್ ಪ್ಲಾನ್ ವಿಚಾರದಲ್ಲಿ ತುಂಬಾ ಸಹಕಾರ ನೀಡಿದ್ದಾರೆ. ಈಗಾಗಲೇ ಅದು ಒಂದು ಹಂತ ತಲುಪಿದ್ದು, ಕಮಿಷನರ್ ಟೇಬಲ್ ಮೇಲಿದೆ. ಈ ಫೈಲ್ ಅಲ್ಲಿ ತನಕ ಹೋಗಲು ಬಹಳಷ್ಟು ಸಲ ಬೆಂಗಳೂರಿಗೆ ಹೋಗಬೇಕಾಗಿತ್ತು. ಹೀಗೆ ಅನೇಕ ರೀತಿಯಲ್ಲಿ ದೇವಸ್ಥಾನಕ್ಕಾಗಿ ಉತ್ತಮ ಸೇವೆ ನೀಡಿದ್ದಾರೆ. ಅವರು ಮುಂದೆ ಈ ಭಾಗದಲ್ಲಿ ಇನ್ನು ಹೆಚ್ಚಿನ ಸೇವೆಯನ್ನು ನೀಡುವಂತೆ ಮಹಾಲಿಂಗೇಶ್ವರ ಅನುಗ್ರಹ ನೀಡಲಿ ಎಂದು ಹೇಳಿದರು.
ಎಲ್ಲಾ ಭಕ್ತರಿಗೂ ನವೀನ್ ಭಂಡಾರಿ ಹೆಸರು ಚಿರಪರಿಚಿತ:
ದೇವಳದ ಪೂರ್ಣಕಾಲಿಕ ನೂತನ ಕಾರ್ಯ ನಿರ್ವಹಣಾಧಿಕಾರಿ ಕೆ ವಿ ಶ್ರೀನಿವಾಸ್ ಅವರು ಮಾತನಾಡಿ ನಮ್ಮ ಇಲಾಖಾ ಆಡಳಿತ ವರ್ಗದಲ್ಲಿ ಎಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಹೆಸರು ದೇವಸ್ಥಾನ ಮತ್ತು ಕೆಲವು ಅಧಿಕಾರಿಗಳ ವರ್ಗಗಳಿಗೆ ಮಾತ್ರ ಗೊತ್ತಿರುತ್ತದೆ. ಆದರೆ ನವೀನ್ ಕುಮಾರ್ ಭಂಡಾರಿ ಅವರ ಹೆಸರು ಎಲ್ಲಾ ಭಕ್ತರಿಗೂ ಚಿರಪರಿಚಿತವಾಗಿರುವುದು ಅವರ ಸೇವೆಗೆ ಸಿಕ್ಕಿದ ಫಲವಾಗಿದೆ. ಅವರು ದೇವಳದ ಎಲ್ಲಾ ನೌಕರರ ವೃಂದದ ಹೃದಯದಲ್ಲಿ ಉಳಿದು ಕೊಂಡಿದ್ದಾರೆ ಎಂದರು.
ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳು:
ಸನ್ಮಾನ ಸ್ವೀಕರಿಸಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ನಾನು ದೇವಸ್ಥಾನಕ್ಕೆ ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಬಂದ ಪ್ರಥಮ ವರ್ಷ ದೇವಳದ ಸಮಿತಿ ರಚನೆಯಾಗಿರಲಿಲ್ಲ. ಆಗ ದೇವಳದ ಆಡಳಿತಾಧಿಕಾರಿ ನೇಮಕ ಆಗಿತ್ತು. ಇದೇ ಸಂದರ್ಭ ಕೋವಿಡ್ ಬಂದಾಗ ತುಂಬಾ ಸಮಸ್ಯೆ ಆಗಿತ್ತು. ಆ ಸಂದರ್ಭ ಜಾತ್ರೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ತೊಡಕಾಗದಂತೆ ಮಾಡಿದ್ದೇವೆ. ಮುಂದಿನ ವರ್ಷ ಸಮಿತಿ ರಚನೆಯಾದಾಗ ಜಾತ್ರೆ ಮಾಡಿದ್ದೇವೆ. ದೇವಳದ ಸಮಿತಿ, ಕರಸೇವಕರು, ಅರ್ಚಕರು, ಸಿಬ್ಬಂದಿಗಳು ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಅದೇ ರೀತಿ ಪಿ.ಕೆ ಗಣೇಶ್ ಅವರಿಗೆ ಪ್ರಶಸ್ತಿ ಬರುವ ಮೂಲಕ ದೇವಸ್ಥಾನಕ್ಕೂ ಇನ್ನಷ್ಟು ಕೀರ್ತಿ ಬಂದಿದೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳು ಅದೇ ರೀತಿ ನಾನು ಮುಂದೆಯೂ ದೇವಸ್ಥಾನಕ್ಕೆ ಬರುತ್ತಾ ಇರುತ್ತೇನೆ. ನನ್ನಿಂದಾಗುವ ಕೊಡುಗೆ ನೀಡಲು ಸಿದ್ದನಿದ್ದೇನೆ ಎಂದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ಪ್ರಧಾನ ಅರ್ಚಕ ವಸಂತ ಕೆದಿಲಾಯ, ಸಿಬ್ಬಂದಿ ರವೀಂದ್ರ, ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್ ಅಭಿನಂದನಾ ನುಡಿಗಳನ್ನಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಬಿ ಐತ್ತಪ್ಪ ನಾಯ್ಕ್, ಬಿ ಕೆ ವೀಣಾ, ಡಾ.ಸುಧಾ ಎಸ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಳದ ಅರ್ಚಕರಾದ ಹರೀಶ್ ಭಟ್, ಉದಯ ಭಟ್ ಪ್ರಾರ್ಥಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ ಸ್ವಾಗತಿಸಿದರು. ರವೀಂದ್ರನಾಥ ರೈ ಬಳ್ಳಮಜಲು ವಂದಿಸಿದರು. ತಾ.ಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯಾ ರೈ, ಯೋಜನಾಧಿಕಾರಿ ಸುಕನ್ಯ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ದೇವಳದ ಸಿಬ್ಬಂದಿಗಳು, ಅರ್ಚಕ ವೃಂದವರು ಉಪಸ್ಥಿತರಿದ್ದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.