ಪುತ್ತೂರು: ಸೆಪ್ಟೆಂಬರ್ನಲ್ಲಿ ಕೆನಡಾದ ವಿಂಡ್ಸರ್ ಒಂಟಾರಿಯೊದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್ಶಿಪ್-2023ರಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ನ ಈಜುಗಾರರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಪುತ್ತೂರು ಅಕ್ವಾಟಿಕ್ ಕ್ಲಬ್ನ ಈಜುಪಟುಗಳಾದ ಸ್ವೀಕೃತ್ ಆನಂದ್, ತ್ರಿಶೂಲ್ ಗೌಡ, ಧನ್ವಿತ್ ಮತ್ತು ನೀಲ್ ಮಸ್ಕರೇನ್ಹಸ್ ಜು.11ರಂದು ವಿಲ್ಸನ್ ಗಾರ್ಡನ್ ಬೆಂಗಳೂರಿನ ರೇ ಸೆಂಟರ್ನಲ್ಲಿ ನಡೆದ 18ನೇ ರಾಷ್ಟ್ರೀಯ ಲೈಫ್ ಸೇವಿಂಗ್ ಚಾಂಪಿಯನ್ಶಿಪ್ನಲ್ಲಿ ಪದಕ ಪಡೆದು ಆಯ್ಕೆಯಾಗಿದ್ದಾರೆ. ಭಾರತದಾದ್ಯಂತ 250ಕ್ಕೂ ಹೆಚ್ಚು ಜೀವರಕ್ಷಕ ಈಜುಪಟುಗಳು ಸ್ಪರ್ಧಿಸಿದ್ದರು. ವಿಶ್ವ ಜೀವರಕ್ಷಕ ಚಾಂಪಿಯನ್ಶಿಪ್ 2018 ಅಡಿಲೇಡ್ ಆಸ್ಟ್ರೇಲಿಯಾದಲ್ಲಿ ಭಾಗವಹಿಸಿದ್ದ ತ್ರಿಶೂಲ್ ಗೌಡ 2 ಚಿನ್ನ ಹಾಗೂ ಸ್ವೀಕೃತ್ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದರು, ಧನ್ವಿತ್ 2 ಚಿನ್ನ ಮತ್ತು 2 ಬೆಳ್ಳಿ ಮತ್ತು ನೀಲ್ ಮಸ್ಕರೇನ್ಹಸ್ 1 ಕಂಚು ಗೆದ್ದರು.
ಪುಣೆಯಲ್ಲಿ ಜುಲೈ 9 ರಿಂದ 11ರ ನಡುವೆ ತಿಲಕ್ ಟ್ಯಾಂಕ್ನಲ್ಲಿ ನಡೆದ ಆಯ್ಕೆ ಟ್ರಯಲ್ಸ್ಗಾಗಿ 20 ಈಜುಗಾರರನ್ನು ಶಾರ್ಟ್ಲಿಸ್ಟ್ ಮಾಡಲಾಗಿತ್ತು, ಅಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್ನ 4 ಈಜುಗಾರರು ಟೀಮ್ ಇಂಡಿಯಾಗೆ ಸ್ಥಾನ ಪಡೆದರು. ಒಂಟಾರಿಯೊದಲ್ಲಿ ನಾಲ್ವರು ಈಜುಗಾರರು ಓಪನ್ ಕೆಟಗರಿಯಲ್ಲಿ ಭಾಗವಹಿಸಲಿದ್ದಾರೆ. ಈ ಈಜುಗಾರರು ಕೋಚ್ ಪಾರ್ಥ ವಾರಣಾಶಿ ಮತ್ತು ಕೋಚ್ ರೋಹಿತ್ ಅವರಿಂದ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳ ಪುತ್ತೂರು ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ಈಜುಕೊಳದಲ್ಲಿ ಜೀವರಕ್ಷಕ ತರಬೇತಿ ಪಡೆದಿದ್ದಾರೆ.