ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಪದಗ್ರಹಣ ಸಮಾರಂಭ, ಸ್ಥಾಪಕರ ದಿನಾಚರಣೆ-ಸಾಧಕರಿಗೆ ಸನ್ಮಾನ, ಪ್ರೇರಣಾ ತರಬೇತಿ ಶಿಬಿರ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸ್ಥಾಪಕರ ದಿನಾಚರಣೆ ಕಾರ್ಯಕ್ರಮ ಜು.23ರಂದು ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


317ಡಿ ಜಿಲ್ಲೆ ದ್ವಿತೀಯ ಉಪ ಜಿಲ್ಲಾ ರಾಜ್ಯಪಾಲರಾದ ಲ|ಕುಡ್ಪಿ ಅರವಿಂದ ಶೆಣೈ ಪಿಎಂಜೆಎಫ್ ಅವರು ಪದಗ್ರಹಣ ನಡೆಸಿಕೊಟ್ಟು ಮಾತನಾಡಿ ಲಯನ್ಸ್ ಕ್ಲಬ್ ನೂರು ವರ್ಷ ದಾಟಿದ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು ಇದು ಸೇವಾ ಮನೋಭಾವ ಹೊಂದಿದವರ ಸಂಸ್ಥೆಯಾಗಿದೆ, ದುಡ್ಡು ಕೊಟ್ಟು ಇದಕ್ಕೆ ಬರಬೇಕೇ ವಿನಃ ದುಡ್ಡ ಮಾಡಲು ಇದಕ್ಕೆ ಬರಲು ಅವಕಾಶವಿಲ್ಲ ಎಂದು ಹೇಳಿದರು.

ಸ್ಥಾಪಕರ ದಿನಾಚರಣೆ ಬಗ್ಗೆ ಮಾಜಿ ಪ್ರಾಂತೀಯ ಅಧ್ಯಕ್ಷ ಲ|ಹೇಮನಾಥ ಶೆಟ್ಟಿ ಕಾವು ಮಾತನಾಡಿ ಸ್ಥಾಪಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಲಯನ್ಸ್ ಕ್ಲಬ್ ನಮ್ಮ ಲಾಭಕ್ಕಾಗಿ ಇರುವ ಸಂಸ್ಥೆಯಲ್ಲ, ಇದರಲ್ಲಿ ವ್ಯವಹಾರಿಕವಾಗಿ ಲಾಭ ಇಲ್ಲದಿದ್ದರೂ ಸೇವೆ, ಸಮರ್ಪಣಾ ಭಾವ, ಶಿಸ್ತು ಮೊದಲಾದವುಗಳು ಇದರಿಂದ ಲಭಿಸುತ್ತದೆ ಎಂದು ಹೇಳಿದರು. ಲಯನ್ಸ್ ಕ್ಲಬ್‌ನಲ್ಲಿ ಸದಸ್ಯರಾದವರಿಗೆ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆಯಿದೆ ಎಂದ ಅವರು ಕುಕ್ಕುವಳ್ಳಿ ಮಹಮ್ಮದ್ ಹಾಜಿಯವರು ತನ್ನ ಸಂಪಾದನೆಯಲ್ಲಿ ಒಂದಂಶವನ್ನು ಸಮಾಜಕ್ಕೆ ನೀಡಿ ಅದರಿಂದ ಖುಷಿ ಪಡುತ್ತಾರೆ, ಇದು ಎಲ್ಲರಿಗೆ ಮಾದರಿಯಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿ ಶಿಬಿರ ನಡೆಸಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಲ|ಇಕ್ಬಾಲ್ ಬಾಳಿಲ ಮಾತನಾಡಿ ಮಕ್ಕಳು ನಿರ್ಧಿಷ್ಟ ಗುರಿ ಇಟ್ಟುಕೊಂಡು ಛಲ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿದಾಗ ಯಶಸ್ಸು ಸಿಗುತ್ತದೆ. ಜೀವನದಲ್ಲಿ ನಾವು ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನಗಳು ಅತ್ಯಗತ್ಯ, ಅನೇಕ ಸಾಧಕರ ಸಾಧನೆಯ ಬಗ್ಗೆ ನೋಡಿದರೆ ಅವರೆಲ್ಲಾ ರಾತ್ರಿ ಬೆಳಗಾಗುವಾಗ ಸಾಧಕರಾಗಿಲ್ಲ, ಬದಲಾಗಿ ಕಠಿಣ ಪರಿಶ್ರಮ ಮತ್ತು ನಿರ್ಧಿಷ್ಟ ಗುರಿಯ ಮೂಲಕ ಸಾಧಕರಾಗಿದ್ದಾರೆ, ನೀವೂ ಭವಿಷ್ಯದಲ್ಲಿ ದೊಡ್ಡ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹೇಮನಾಥ ಶೆಟ್ಟಿ ದಂಪತಿಗೆ ಸನ್ಮಾನ:
ಮಾಜಿ ಪ್ರಾಂತೀಯ ಅಧ್ಯಕ್ಷ ಲ|ಹೇಮನಾಥ ಶೆಟ್ಟಿ ಕಾವು ಹಾಗೂ ಅವರ ಪತ್ನಿ ಅನಿತಾ ಹೇಮನಾಥ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಅಧ್ಯಕ್ಷ ಲ| ಮಹಮ್ಮದ್ ಕುಕ್ಕುವಳ್ಳಿ ಮಾತನಾಡಿ ಲಯನ್ಸ್ ಕ್ಲಬ್ ಸಂಸ್ಥೆಯು ಸಮಾಜ ಸೇವೆಗೆ ಪ್ರೇರಣೆ ಕೊಡುವ ಸಂಸ್ಥೆಯಾಗಿದ್ದು ಲಯನ್ಸ್‌ನ ಕಾರ್ಯಚಟುವಟಿಕೆ ನೋಡಿ ನಾನು ಲಯನ್ಸ್ ಕ್ಲಬ್‌ಗೆ ಸೇರಿದ್ದೇನೆ ಎಂದು ಹೇಳಿದರು. ಸಾಮಾಜಿಕ ಬದ್ದತೆ, ನಿಷ್ಠೆ ಮತ್ತು ಜವಾಬ್ದಾರಿ ಲಯನ್ಸ್ ಮೂಲಕ ನಮಗೆ ಸಿಗುತ್ತಿದ್ದು ನಾವು ಬೆಳೆಯಬೇಕು ಇನ್ನೊಬ್ಬರನ್ನು ಬೆಳೆಸಬೇಕೆನ್ನುವ ಮನಸ್ಸು ನಮ್ಮಲ್ಲಿದ್ದಾಗ ನಾವು ಎತ್ತರಕ್ಕೆ ಬೆಳೆಯಲು ಸಾಧ್ಯ. ನಾವು ಯಾವುದೇ ಸಂಸ್ಥೆಯಲ್ಲಿ ತೊಡಗಿಸಿಕೊಂಡರೂ ಸಮಾಜ ಸೇವೆಯ ತುಡಿತ ನಮ್ಮಲ್ಲಿರಬೇಕು, ಆಗ ಸಮಾಜವೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.


ಪುತ್ತೂರಿನ ಜನಪ್ರಿಯ ಪತ್ರಿಕೆಯಾಗಿರುವ ಸುದ್ದಿ ಬಿಡುಗಡೆ ಪತ್ರಿಕೆಯು ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು ಅಂತಹ ಮಾದ್ಯಮಗಳು ಸಮಾಜಕ್ಕೆ ಅತ್ಯಗತ್ಯವಾಗಿದೆ. ಡಾ.ಯು.ಪಿ ಶಿವಾನದರವರು ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಪ್ರಯತ್ನ ಪಡುತ್ತಿದ್ದು ಅದಕ್ಕೆ ನಮ್ಮ ಬೆಂಬಲ ಇದೆ ಎಂದು ಮಹಮ್ಮದ್ ಕುಕ್ಕುವಳ್ಳಿ ಹೇಳಿದರು.

ವಿದ್ಯಾಕಿರಣ ಪ್ರಶಸ್ತಿ ಪ್ರದಾನ:
ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿ, ಪಾಣಾಜೆ ಗ್ರಾಮದ 5 ಶಾಲೆಗಳ 15 ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಡಿದ ಸಾಧನೆಗಾಗಿ ವಿದ್ಯಾಕಿರಣ ಪ್ರಶಸ್ತಿ ನೀಡಲಾಯಿತು.

ಮನಮೋಹನ್ ಅರಂಬ್ಯಗೆ ಸನ್ಮಾನ:
ಜೇನು ಕೃಷಿಯಲ್ಲಿ ಸಾಧನೆ ಮಾಡಿರುವ ಮನಮೋಹನ್ ಅರಂಬ್ಯ ಅವರನ್ನು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಕಾರ್ಯಕ್ರಮ:
ಲಯನ್ಸ್ ಕ್ಲಬ್‌ನ ಕುಡ್ಪಿ ಅರವಿಂದ ಶೆಣೈ, ಸುದರ್ಶನ್ ಪಡಿಯಾರ್, ಲ್ಯಾನ್ಸಿ ಮಸ್ಕರೇನ್ಹಸ್, ಪಾವನರಾಮ, ಶ್ರೀಪ್ರಸಾದ್ ಪಾಣಾಜೆ ಹಾಗೂ ಇಕ್ಬಾಲ್ ಬಾಳಿಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಿವ್ಯನಾಥ ಶೆಟ್ಟಿ ಕಾವು ಅವರನ್ನು ಗೌರವಿಸಲಾಯಿತು.

ಲ|ಸೀತರಾಮ ಗೌಡ ಪ್ರಾರ್ಥಿಸಿದರು. ಲ|ಪುಷ್ಪರಾಜ ಶೆಟ್ಟಿ ಧ್ವಜವಂದನೆ ಮಾಡಿದರು. ಲ|ಶ್ಯಾಂಜೀತ್ ರೈ ಲಯನ್ ನೀತಿ ಸಂಹಿತೆ ನಿರ್ವಹಿಸಿದರು. ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಇದರ ಪ್ರ.ಕಾರ್ಯದರ್ಶಿ ಲ|ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಲ|ಶ್ರೀಪ್ರಸಾದ್ ಪಾಣಾಜೆ ವಂದಿಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಲಯನ್ಸ್ ಕ್ಲಬ್ ಪುತ್ತೂರು-ಪಾಣಾಜೆ ಕೋಶಾಧಿಕಾರಿ ಪ್ರಕಾಶ್ ಬೈಲಾಡಿ, ಕಾರ್ಯದರ್ಶಿ ಶ್ರೀಪ್ರಸಾದ್ ಪಾಣಾಜೆ ಉಪಸ್ಥಿತರಿದ್ದರು.ಲಯನ್ಸ್ ಕ್ಲಬ್ ಪುತ್ತೂರು ಪಾಣಾಜೆ ಇದರ ಸದಸ್ಯರಾದ ಲ|ಶಶಿಕುಮಾರ್ ರೈ ಬಾಲ್ಯೊಟ್ಟು, ಲ|ಗಂಗಾಧರ ಆಳ್ವ, ಲ|ಯೂಸುಫ್ ಗೌಸಿಯಾ ಸಾಜ, ಲ|ಜಲೀಲ್ ಬೈತಡ್ಕ, ಲ|ಧನಂಜಯ ಯು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here