ರಾಮಕುಂಜ: ಸಮಾಜದ ಆರೋಗ್ಯಕರ ಬದಲಾವಣೆಗೆ ಸಂಘಟನೆಗಳ ಪಾತ್ರ ಮುಖ್ಯವಾಗುತ್ತದೆ. ಜನರು ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸಂಘಟನೆಗಳ ಕ್ರಮಬದ್ದ ಯೋಜನೆ ಹಾಗೂ ಯೋಚನೆಯ ಕಾರ್ಯನುಷ್ಠಾನದಿಂದ ಸಾಧ್ಯ ಎಂದು ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಹೇಳಿದರು.
ಅವರು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವಠಾರದಲ್ಲಿ ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ಕುಂಡಾಜೆ ಘಟ ಸಮಿತಿ ವತಿಯಿಂದ ಒಡಿಯೂರು ಶ್ರೀಗಳ 62ನೇ ಜನ್ಮದಿನ(ಗ್ರಾಮೋತ್ಸವ)ದ ಪ್ರಯುಕ್ತ ವಿವಿಧ ಸಂಘಗಳ ಸಹಯೋಗದೊಂದಿಗೆ ನಡೆದ ಸ್ವಚ್ಛತಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಆತ್ಮವಿಶ್ವಾಸ, ಆರ್ಥಿಕ ಸ್ವಾವಲಂಬನೆಯೊಂದಿಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಸಮಾಜದ ಮುಖ್ಯವಾಹಿನಿಗೆ ಬಂದು ನೆಮ್ಮದಿಯ, ಗೌರವಯುತ ಜೀವನ ನಡೆಸುವಲ್ಲಿ ಒಡಿಯೂರು ಸಂಘದ ಪಾತ್ರ ಅಪಾರವಾಗಿದೆ. ಒಡಿಯೂರು ಶ್ರೀಗಳ ದೂರ ದೃಷ್ಟಿ ಯೋಜನೆ ಸಮಾಜದ ಏಳಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.
ಆತೂರು ಶ್ರೀ ಸದಾಶಿವ ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ ಉದ್ಘಾಟಿಸಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕುಂಡಾಜೆ ಘಟ ಸಮಿತಿ ಘಟಕದ ಅಧ್ಯಕ್ಷ ದಿನೇಶ್ ಗಾಣಂತಿ ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಕುಮಾರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಯೋಜನೆಯ ನಿರ್ದೇಶಕ ಕಿರಣ್ ಊರ್ವ , ಮೇಲ್ವಿಚಾರಕಿ ಸವಿತಾ ರೈ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗೋಳಿತೊಟ್ಟು ವಲಯ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಮೊಗೇರ ಸಂಘ ಆಲಂಕಾರು ಮಂಡಲದ ಅಧ್ಯಕ್ಷ ಬಾಲಕೃಷ್ಣ ಕೇಪುಳು ಸಂದರ್ಭೋಚಿತವಾಗಿ ಮಾತನಾಡಿದರು.
ಘಟಕ ಸಮಿತಿ ವ್ಯಾಪ್ತಿಯ ಹಿರಿಯರಿಗೆ, ಎನ್‌ಎನ್‌ಎಮ್‌ಎಸ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಚೆಸ್ ಪಂದ್ಯಾಟದಲ್ಲಿ ರಾಜ್ಯ ಹಾಗೂ ತಾಲೂಕು ಮಟ್ಟದಲ್ಲಿ ಸಾಧನೆಗೈದವರಿಗೆ ಸನ್ಮಾನ, ಅನಾರೋಗ್ಯ ಪೀಡಿತರಿಗೆ ಧನಸಹಾಯ, ಆಯ್ದ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹ ಧನ ವಿತರಣೆ ನಡೆಯಿತು. ಶಾಸಕಿ ಭಾಗಿರಥಿ ಮುರುಳ್ಯ ಅವರಿಗೆ ಶ್ರೀ ಸದಾಶಿವ ದೇವಸ್ಥಾನ ಹಾಗೂ ಒಡಿಯೂರು ಶ್ರೀ ಸಂಘಟನೆಯ ವತಿಯಿಂದ ಸನ್ಮಾನ ನಡೆಯಿತು. ದೀಪಿಕಾ ಗಾಣಂತಿ, ದೀಕ್ಷಿತಾ ಗಾಣಂತಿ, ಸುದೀಶ್ ಪಟ್ಟೆ ಸನ್ಮಾನಿತರನ್ನು ಪರಿಚಯಿಸಿದರು. ಸುಮಿತ್ರಾ ಕೆ ಸ್ವಾಗತಿಸಿದರು. ಜಯಂತಿ ಜಿ ನಿರೂಪಿಸಿ, ವಂದಿಸಿದರು.