ಪುತ್ತೂರು: ಕೊಯಿಲ ಜಾನುವಾರು ತಳಿ ಸಂವರ್ಧನ ಮತ್ತು ತರಬೇತಿ ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದು ಪುತ್ತೂರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ಡಾ.ಧರ್ಮಪಾಲ ಗೌಡರವರಿಗೆ ಸ್ವಾಗತ ಹಾಗೂ ಪಶು ಸಂಗೋಪನಾ ಇಲಾಖೆಯ ಪಾಣಾಜೆ ಪಶು ಆಸ್ಪತ್ರೆಯಲ್ಲಿ ಜಾನುವಾರು ಅಧಿಕಾರಿಯಾಗಿದ್ದು ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಮುಂಭಡ್ತಿ ಪಡೆದು ಸುಳ್ಯಕ್ಕೆ ವರ್ಗಾವಣೆಗೊಂಡಿರುವ ಪುಷ್ಪರಾಜ್, ಬಲ್ನಾಡಿನಲ್ಲಿ ಹಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿದ್ದು ಜಾನುವಾರು ಅಧಿಕಾರಿಯಾಗಿ ಮುಂಭಡ್ತಿ ಪಡೆದು ಬಂಟ್ವಾಳದ ಮಾಣಿಗೆ ವರ್ಗಾವಣೆ ಮೋಹನದಾಸ್ರವರಿಗೆ ಬೀಳ್ಕೊಡುಗೆಯು ಜು.26ರಂದು ನಿವೃತ್ತ ಸೈನಿಕರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ ಮಾತನಾಡಿ, ಸರಕಾರಿ ಸೇವೆಯಲ್ಲಿ ವರ್ಗಾವಣೆ, ಮುಂಭಡ್ತಿ ಸಾಮಾನ್ಯ. ಇಲಾಖೆಯಲ್ಲಿ ವ್ಯಕ್ತಿಗತವಾಗಿ ಹೋದಾಗ ಗೊಂದಲ, ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಹೀಗಾಗಿ ವೈಯಕ್ತಿಕ ವಿಚಾರಗಳು ಕಚೇರಿ ಒಳಗಡೆಯಿರಬಾರದು. ಇಲಾಖೆಯಲ್ಲಿ ನಿಗದಿಪಡಿಸಿರುವ ಗುರಿ ತಲುಪಿಸಲು ಪ್ರತಿಯೊಬ್ಬರು ಪ್ರಯತ್ನಿಸುವ ಮೂಲಕ ತಾಲೂಕನ್ನು ಮಾದರಿಯನ್ನಾಗಿ ಮಾಡಬೇಕು. ಪುಷ್ಪರಾಜ ಶೆಟ್ಟಿ ಹಾಗೂ ಮೋಹನದಾಸ್ರವರು ಜೋಡೆತ್ತುಗಳ ರೀತಿಯಲ್ಲಿ ಕೆಲಸ ಮಾಡಿದ್ದರು. ಅವರ ವರ್ಗವಣೆ ಪುತ್ತೂರಿಗೆ ನಷ್ಟವಾಗಿದ್ದು ಅವರು ಮತ್ತೆ ವರ್ಗಾವಣೆಯಾಗಿ ಪುತ್ತೂರಿಗೆ ಬರಬೇಕು ಎಂದು ಹೇಳಿದರು.
ಕೊಯಿಲ ಹಂದಿ ತಳಿ ಸಂವರ್ದನಾ ಕೇಂದ್ರದ ಹಿರಿಯ ಪಶುವೈದ್ಯಾಧಿಕಾರಿ ಡಾ.ಪುನೀತ್ ಎಸ್.ಕೆ. ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸನ್ಮಾನ ಸ್ವೀಕರಿಸಿದ ಪುಷ್ಪರಾಜ ಶೆಟ್ಟಿ ಹಾಗೂ ಮೋಹನದಾಸ ಮಾತನಾಡಿ, ಕೃತಜ್ಷತೆ ಸಲ್ಲಿಸಿದರು. ಹಿರಿಯ ಪಶುವೈದ್ಯಕೀಯ ಪರೀಕ್ಷಕರಾದ ಪ್ರಶಾಂತ್, ಬಸವರಾಜ್, ವೀರಪ್ಪ, ಕುಮಾರ್, ಪುಂಡರಿಕಾಕ್ಷ, ಪ್ರತಿಮಾ ಸಿಬಂದಿಗಳಾದ ಪುಷ್ಪಲತಾ, ಸರೋಜ, ಕುಸುಮಾ, ಶೃತಿ ಹಾಗೂ ರವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಾನುವಾರು ಅಭಿವೃದ್ಧಿ ಅಧಿಕಾರಿ ಹೊನ್ನಪ್ಪ ಗೌಡ ಸ್ವಾಗತಿಸಿದರು. ಪಾಣಾಜೆ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಂ.ಪಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪಶುವೈದ್ಯಕೀಯ ಪರೀಕ್ಷಕ ವೀರಪ್ಪ ವಂದಿಸಿದರು.