ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರ ಅಗತ್ಯ- ಗಿರಿಶಂಕರ ಸುಲಾಯ
ಕಾಣಿಯೂರು: ರೈತರಿಗಾಗಿ ರೈತರಿಂದಲೇ ಸ್ಥಾಪನೆಗೊಂಡ ಸಂಸ್ಥೆಯು ಲಾಭದಾಯಕವಾಗಿ ಮುನ್ನಡೆಯುತ್ತಿದೆ. ರೈತ ಉತ್ಪಾದಕರ ಸಂಸ್ಥೆಯಲ್ಲಿ ಸದಸ್ಯರಾಗುವ ಮೂಲಕ ಪ್ರತಿಯೊಬ್ಬ ಸದಸ್ಯ ನಮ್ಮ ಸಂಸ್ಥೆಯೆಂದು ಭಾವಿಸಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಬೇಕು ಎಂದು ಕಾಣಿಯೂರು ಸವಣೂರು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಗಿರಿಶಂಕರ ಸುಲಾಯ ಹೇಳಿದರು. ಅವರು ದ.ಕ ತೋಟಗಾರಿಕೆ ಇಲಾಖೆ, ಕಾಣಿಯೂರು ಸವಣೂರು ರೈತ ಉತ್ಪಾದಕರ ಸಂಸ್ಥೆ ಕುದ್ಮಾರು ವತಿಯಿಂದ ಕಾಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜು 26ರಂದು ನಡೆದ ಸಮಗ್ರ ಕೃಷಿಯ ನಿರ್ವಹಣೆಯ ಬಗ್ಗೆ ಮಾಹಿತಿ ಮತ್ತು ಕಾಣಿಯೂರು ಮತ್ತು ಕಾಮಣ ಗ್ರಾಮದ ಸದಸ್ಯರಿಗೆ ಷೇರು ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಫಿ ಬೋರ್ಡ್ ನಿವೃತ್ತ ಅಧಿಕಾರಿ, ಕಡಬ ಕೃಷಿ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೆಂಕಟರಾಜ್ ಕಡಬರವರು ಅಡಿಕೆ ಕೃಷಿಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಕಟ್ಟತ್ತಾರು, ಕಾಣಿಯೂರು ಸವಣೂರು ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕ ಸುಬ್ರಾಯ ಗೌಡ, ಇಕೋವ ಸಂಸ್ಥೆಯ ಸಹ ಸಂಯೋಜಕರಾಗಿರುವ ಧರ್ಮೇಂದ್ರ ಗೌಡ ಕಟ್ಟತ್ತಾರು ಉಪಸ್ಥಿತರಿದ್ದರು. ಕಾಣಿಯೂರು ಸವಣೂರು ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಓಡಬಾಯಿ ಸ್ವಾಗತಿಸಿ, ಯಶವಂತ್ ಕಳುವಾಜೆ ವಂದಿಸಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿಕೇಶ್ ಗೌಡ ಎಡಮಂಗಳ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಅಶೋಕ್ ಚಾರ್ವಾಕ ಸಹಕರಿಸಿದರು.
ಕಾಣಿಯೂರು ಸವಣೂರು ರೈತ ಉತ್ಪಾದಕರ ಸಂಸ್ಥೆಯ ಕಾಣಿಯೂರು ಮತ್ತು ಕಾಮಣ ಗ್ರಾಮದ ಒಟ್ಟು 150ಕ್ಕೂ ಮಿಕ್ಕಿ ಸದಸ್ಯರಿಗೆ ಷೇರು ಪತ್ರ ವಿತರಿಸಲಾಯಿತು.