ಶ್ರೀಕೃಷ್ಣ ನಟ್ಟೋಜ, ಸತ್ಯಪ್ರಸಾದ್ ನಾಯಕ್, ಅನಿಕೇತ್ ಎನ್ ಹಾಗೂ ಅಕ್ಷಯ ಕೃಷ್ಣ ಆಯ್ಕೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ನಾಲ್ಕು ಮಂದಿ ವಿದ್ಯಾರ್ಥಿಗಳು ಆಗಸ್ಟ್ 1ರಿಂದ 12ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ 25ನೇ ವಿಶ್ವ ಸ್ಕೌಟ್ ಜಾಂಬೂರಿಗೆ ಆಯ್ಕೆಯಾಗಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ದಂಪತಿ ಪುತ್ರ, ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ತರಗತಿ ವಿದ್ಯಾರ್ಥಿಯಾಗಿರುವ ಶ್ರೀಕೃಷ್ಣ ಎಸ್. ನಟ್ಟೋಜ ಆಯ್ಕೆಯಾಗಿದ್ದಾರೆ. ಇವರು ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಸ್ಕೌಟ್ ಮತ್ತು ಗೈಡ್ ತರಬೇತುದಾರರಾದ ಸತೀಶ್ ಇರ್ದೆ ಹಾಗೂ ಚಂದ್ರಕಲಾ ಅವರಿಂದ ತರಬೇತಿ ಪಡೆದಿರುತ್ತಾರೆ.
ಜತೆಗೆ, ಪುತ್ತೂರಿನ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿಗಳಾದ, ಪುತ್ತೂರಿನ ರಾಘವೇಂದ್ರ ನಾಯಕ್ ಹಾಗೂ ಲಕ್ಷೀ ನಾಯಕ್ ದಂಪತಿಯ ಪುತ್ರ ಸತ್ಯಪ್ರಸಾದ್ ನಾಯಕ್, ದರ್ಬೆಯ ನಳಿನಾಕ್ಷ ಎನ್-ಗಾಯತ್ರಿ ಪಿ ದಂಪತಿಯ ಪುತ್ರ ಅನಿಕೇತ್ ಎನ್ ಹಾಗೂ ಬೆಳ್ತಂಗಡಿಯ ನಾಗೇಶ್ ಎ – ರಾಜೀವಿ ಬಿ ದಂಪತಿಯ ಪುತ್ರ ಅಕ್ಷಯ ಕೃಷ್ಣ ಅವರು ಕೂಡ ವಿಶ್ವಜಾಂಬೂರಿಗೆ ಆಯ್ಕೆಯಾಗಿದ್ದು, ದಕ್ಷಿಣ ಕೊರಿಯಾದ ಉತ್ತರ ಜಿಯೋಲ್ಲಾದ ಸೇಮಂಜಿಯಂನಲ್ಲಿ ಜರುಗಲಿರುವ 25ನೇ ವಿಶ್ವ ಸ್ಕೌಟ್ ಜಾಂಬೂರಿಯಲ್ಲಿ ಭಾಗವಹಿಸಲು ಜೂನ್ 31ರಂದು ತೆರಳಲಿದ್ದಾರೆ. ಅಂತರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ ಅಂಬಿಕಾ ಆಡಳಿತ ಮಂಡಳಿ, ಶಿಕ್ಷಕ – ಶಿಕ್ಷಕೇತರ ವೃಂದ ಶುಭ ಹಾರೈಸಿದೆ.
ವಿಶ್ವಜಾಂಬೂರಿಯಲ್ಲಿ ಭಾಗವಹಿಸುವುದಕ್ಕೆ ದಕ್ಷಿಣ ಕನ್ನಡದಿಂದ ಒಟ್ಟು 46 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು 5 ಶಿಕ್ಷಕರೊಂದಿಗೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯಿಂದ ಭಾಗಿಯಾಗುತ್ತಿದ್ದಾರೆ.