ಕಚೇರಿಯಲ್ಲಿ ಬ್ಯಾನರ್ ಅಳವಡಿಸಿ ಮಾದರಿಯಾದ ವಿಜಯನಗರ ಜಿಲ್ಲಾ ಆಯುಷ್ ಇಲಾಖೆ ಮಹಿಳಾ ಅಧಿಕಾರಿ
ಪುತ್ತೂರು: ‘ನನಗೆ ಯಾರೂ ಲಂಚ ಕೊಡಬೇಡಿ, ನಾನು ಭ್ರಷ್ಟ ಅಧಿಕಾರಿ ಆಗಲಾರೆ’ ಎಂದು ವಿಜಯನಗರದ ಜಿಲ್ಲಾ ಆಯುಷ್ ಇಲಾಖೆಯ ಮಹಿಳಾ ಅಧಿಕಾರಿ ತಮ್ಮ ಕಚೇರಿಯಲ್ಲಿ ಬ್ಯಾನರ್ ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆಗೆ ಪಾತ್ರವಾಗಿದ್ದು ಎಲ್ಲೆಡೆ ವೈರಲ್ ಆಗಿದೆ. ಇದು ಮಾದರಿ ನಡೆ. ಎಲ್ಲಾ ಅಧಿಕಾರಿಗಳೂ ಈ ರೀತಿ ಬೋರ್ಡ್ ಹಾಕಿಕೊಳ್ಳಬೇಕು ಎಂಬ ಅಭಿಪ್ರಾಯಗಳನ್ನು ಜನರು ವ್ಯಕ್ತಪಡಿಸತೊಡಗಿದ್ದಾರೆ.
ಸರಕಾರಿ ಕಚೇರಿಯಲ್ಲಿ ವ್ಯಾಪಕ ಲಂಚ, ಭ್ರಷ್ಟಾಚಾರ ನಡೆಯುತ್ತದೆ. ಲಂಚ ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ, ಲಂಚ ಕೊಟ್ಟರೆ ಮಾತ್ರ ಅಧಿಕಾರಿಗಳೂ ಸ್ಪಂದನೆ ನೀಡುತ್ತಾರೆ ಎಂಬ ಭಾವನೆ ಜನ ಸಾಮಾನ್ಯರಲ್ಲಿ ಹಾಸು ಹೊಕ್ಕಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ಬೆಂಗಳೂರು ಇದರ ವಿಜಯನಗರ ಜಿಲ್ಲಾ ಆಯುಷ್ ಇಲಾಖೆಯ ಮಹಿಳಾ ಅಧಿಕಾರಿ ತಮ್ಮ ಕಚೇರಿಯಲ್ಲೀ’ ನನಗೆ ಯಾರೂ ಲಂಚ ಕೊಡಬೇಡಿ, ನಾನು ಭ್ರಷ್ಟ ಅಧಿಕಾರಿ ಆಗಲಾರೆ’ ಎಂಬ ಬ್ಯಾನರ್ ಅಳವಡಿಸುವ ಮೂಲಕ ಅಧಿಕಾರಿಗಳು ಜನರ ಸೇವೆಗಾಗಿ ಇರುವವರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಲಂಚ, ಭ್ರಷ್ಟಾಚಾರದ ವಿರುದ್ಧ ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ‘ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ದೊಡ್ಡ ಜನಸೇವೆ ಮತ್ತು ದೇಶಸೇವೆ, ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ-ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ರಾಜ್ಯ, ದೇಶ ನಮ್ಮದಾಗಲಿ ‘ ಎಂಬ ನಿಟ್ಟಿನಲ್ಲಿ ಆಂದೋಲನ ನಡೆಯುತ್ತಿದೆ. ವಿಜಯನಗರ ಜಿಲ್ಲಾ ಆಯುಷ್ ಇಲಾಖೆಯ ಮಹಿಳಾ ಅಧಿಕಾರಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳೂ ತಮ್ಮ ಕಚೇರಿಯಲ್ಲಿ ‘ನನಗೆ ಯಾರೂ ಲಂಚ ಕೊಡಬೇಡಿ, ನಾನು ಭ್ರಷ್ಟ ಅಧಿಕಾರಿ ಆಗಲಾರೆ’ ಎಂಬ ಬ್ಯಾನರ್ ಅಳವಡಿಸಿದಲ್ಲಿ ನಮ್ಮ ಊರು ಲಂಚ,ಭ್ರಷ್ಟಾಚಾರ ಮುಕ್ತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ ಎಂಬ ಮಾತು ಜನಸಾಮಾನ್ಯರಿಂದ ಕೇಳಿಬಂದಿದೆ.