ಕಾಣಿಯೂರು: ಕೇಂದ್ರ ಸರಕಾರದಿಂದ ಜಾರಿಗೊಳಿಸುವ ೪ಜಿ ಸ್ಯಾಚುರೇಷನ್ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ನೆಟ್ ವರ್ಕ್ ಇಲ್ಲದ ಜಿಲ್ಲೆಯ 66 ಸ್ಥಳಗಳಲ್ಲಿ ಬಿ.ಎಸ್ ಎನ್.ಎಲ್ ಹೊಸ ಟವರ್ ಗಳನ್ನು ನಿರ್ಮಿಸಲು ಮುಂದಾಗಿದೆ. ಜಿಲ್ಲೆಯ ಹಲವಾರು ಪ್ರದೇಶದಲ್ಲಿ ನೆಟ್ ವರ್ಕ್ ಇಲ್ಲದೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಇದಕ್ಕೆ ಪರಿಹಾರ ರೂಪವಾಗಿ ಬಿ.ಎಸ್ ಎನ್.ಎಲ್ ಅಂತಹ ಸ್ಥಳಗಳನ್ನು ಗುರುತಿಸಿ ಟವರ್ ಗಳನ್ನು ನಿರ್ಮಿಸಲಿದ್ದು, ಅಂತಹ ಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ನಡೆಯುತ್ತಾ ಇದ್ದು,ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೋಳ್ಪಾಡಿ ಗ್ರಾಮದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನು ನಡೆಸಿದ್ದಾರೆ.
ಬಹುದಿನಗಳ ಬೇಡಿಕೆಯಾದ ಬಿ.ಎಸ್ ಎನ್.ಎಲ್ ಟವರ್ ಸ್ಥಾಪನೆಗೆ ದೋಳ್ಪಾಡಿ ಪ್ರೌಡ ಶಾಲಾ ಬಳಿ ಬಿ.ಎಸ್.ಎನ್ ಎಲ್ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಶೀಘ್ರದಲ್ಲಿ ಟವರ್ ಸ್ಥಾಪನೆ ಆಗಲಿದೆ ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಬಿ ಎಸ್ ಎನ್ ಎಲ್ ಅಧಿಕಾರಿಗಳ ಜೊತೆ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯ ಲೋಕಯ್ಯ ಪರವ ದೋಳ್ಪಾಡಿ ಹಾಗೂ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ವಿಶ್ವನಾಥ ದೇವಿನಗರ ಅವರು ಉಪಸ್ಥಿತರಿದ್ದರು.
ದೋಳ್ಪಾಡಿಗೆ ಬಿಎನ್ಎಸ್ಎಲ್ ಟವರ್ ಮಂಜೂರಾಗಿದ್ದು ಸಂತೋಷವಾಗಿದೆ. ಕೆಲ ದಿನಗಳ ಹಿಂದೆ ಸಂಸದರನ್ನು ಭೇಟಿ ಮಾಡಿ ಮನವಿ ಮಾಡಿದಾಗ ಕೂಡಲೇ ಅಧಿಕಾರಿಗಳನ್ನು ಕಳುಹಿಸಿ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಅದೇ ರೀತಿ ಅಧಿಕಾರಿಗಳು ಬಂದು ಸ್ಥಳ ಪರಿಶೀಲಿಸಿದ್ದಾರೆ. ಬಹುದಿನಗಳ ಬೇಡಿಕೆಯಾದ ಟವರ್ ಮಂಜೂರು ಆದಾಗ ಗ್ರಾಮಸ್ಥರು ಸೇರಿ ಜಾಗದ ಸಮತಟ್ಟು ಇತ್ಯಾದಿಗಳ ಬಗ್ಗೆ ಸಹಕಾರದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಎಲ್ಲಾ ಕೆಲಸಗಳು ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರ ಸಹಕಾರದಿಂದ ನಡೆಯುತ್ತಿರುವುದು ಬಹಳ ಗಮನಾರ್ಹ ಸಂಗತಿ.
ಲೋಕಯ್ಯ ಪರವ ದೋಳ್ಪಾಡಿ, ಸದಸ್ಯರು, ಗ್ರಾ.ಪಂ, ಕಾಣಿಯೂರು