ಕಡಬ: ಕಳೆದ 9 ವರ್ಷಗಳಿಂದ ಕಡಬದ ಐಐಸಿಟಿ ವಿದ್ಯಾಸಂಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಗತಿ, ಟುಟೋರಿಯಲ್ ಹಾಗೂ ಟ್ಯೂಷನ್ ತರಗತಿ, ನವೋದಯ ತರಬೇತಿ, ಅಬಾಕಸ್ ಶಿಕ್ಷಣವನ್ನು ನೀಡುತ್ತಿದ್ದು, ಇದೀಗ ಅತ್ಯಂತ ಬೇಡಿಕೆಯಲ್ಲಿರುವ ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ತರಬೇತಿ ಆರಂಭಗೊಂಡಿದೆ.
ತರಬೇತಿಯನ್ನು ಕೊಕ್ಕಡ ಪ.ಪೂ.ಕಾಲೇಜಿನ ಹಿರಿಯ ಉಪನ್ಯಾಸಕ ವಿಶ್ವನಾಥ ರೈಯವರು ಉದ್ಘಾಟಿಸಿ ಮಾತನಾಡಿ, ಒಂದು ದೇಶದ ಭವಿಷ್ಯವು ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುತ್ತದೆ. ದೇಶ ಉತ್ತಮವಾಗಬೇಕಾದರೆ ಶಿಕ್ಷಣವೆಂಬುದು ಬಹಳ ಅಗತ್ಯ, ಯಾವುದಾದರೂ ದೇಶವನ್ನು ಹಾಳು ಮಾಡಬೇಕಾದರೂ ಅಲ್ಲಿಗೆ ಯಾವುದೇ ಬಾಂಬುಗಳು ಬೇಕಾಗಿಲ್ಲ, ಅಣು ಅಸ್ತ್ರಗಳು ಬೇಕಾಗಿಲ್ಲ. ಶಿಕ್ಷಣ ವ್ಯವಸ್ಥೆಯನ್ನು ಕುಲಗೇಡಿಸಿದರಾಯಿತು. ಆ ದೇಶ ನಿಧಾನವಾಗಿ ಅಧ:ಪತನದತ್ತ ಹೋಗುತ್ತದೆ, ಹಾಗಾಗಿ ಶಿಕ್ಷಣಕ್ಕಾಗಿ ಎಲ್ಲಾ ರಾಷ್ಟ್ರಗಳು ಹೆಚ್ಚಿನ ಒತ್ತು ನೀಡುತ್ತಿದೆ. ಶಿಕ್ಷಣ ಕೊಡುವ ದೃಷ್ಟಿಯಲ್ಲಿ ಸರಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಅದೇ ರೀತಿ ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿ ತರಬೇತಿಯು ಅತ್ಯಂತ ಬೇಡಿಕೆಯಲ್ಲಿರುವ ತರಬೇತಿಯಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅಂತಹ ತರಬೇತಿಯನ್ನು ಈ ಶಿಕ್ಷಣ ಸಂಸ್ಥೆಯಲ್ಲಿ ನೀಡುತ್ತಿರುವುದು ಹೆಮ್ಮೆಯಾಗಿದೆ, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.
ಅತಿಥಿಯಾಗಿದ್ದ ವಿಜಯ ಕರ್ನಾಟಕ ಪತ್ರಿಕೆಯ ಕಡಬ ತಾಲೂಕು ವರದಿಗಾರ ಕೆ.ಎಸ್. ಬಾಲಕೃಷ್ಣ ಕೊಯಿಲರವರು ಮಾತನಾಡಿ, ಕಡಬ ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿಯಾಗುತ್ತಿದೆ. ಬಹಳಷ್ಟು ಶಿಕ್ಷಣ ಸಂಸ್ಥೆಗಳು ಇಲ್ಲಿ ಬೆಳೆಯುತ್ತಿದೆ, ಅಭಿವೃದ್ಧಿಯನ್ನು ಹೊಂದುತ್ತಿವೆ. ಇದಕ್ಕೊಂದು ದೊಡ್ಡ ಕೊಡುಗೆಯನ್ನು ಐಐಸಿಟಿ ವಿದ್ಯಾಸಂಸ್ಥೆ ನೀಡಿದೆ. ಜಗತ್ತಿನಲ್ಲಿಡೆ ಈಗ ಸ್ಪರ್ಧಾತ್ಮಕ ಯುಗ ಈ ನಡುವೆ ನಾವು ಹೇಗೆ ಹೊಂದಿಕೊಳ್ಳುತ್ತೇವೆ, ಯಾವ ರೀತಿ ಎದುರಿಸುತ್ತೇವೆ ಎಂಬುದಕ್ಕೆ ಈ ರೀತಿ ಸಂಸ್ಥೆಗಳು ಆರಂಭವಾಗುತ್ತಿರುವುದು ಸಂತಸದಾಯಕವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ, ಸಂಸ್ಥೆಯು ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ನೀಡುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಇನ್ನೋರ್ವ ಅತಿಥಿ ನೆಲ್ಯಾಡಿ ಸಂತಚಾರ್ಜ್ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ವಿಶ್ವನಾಥ ಶೆಟ್ಟಿ ಕೆ., ರವರು ಶುಭ ಹಾರೈಸಿದರು.
ಗಂಗಾ ಪ್ರಾರ್ಥಿಸಿದರು, ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಸಿ.ಎಚ್ ಸ್ವಾಗತಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಕಡಬ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ., ಸುದ್ದಿಬಿಡುಗಡೆಯ ವರದಿಗಾರ ವಿಜಯ್ ಕುಮಾರ್, ವಿ೪ ಚಾನಲ್ ವರದಿಗಾರ ದಿವಾಕರ, ವಾರ್ತಾ ಭಾರತಿ ಪತ್ರಿಕೆಯ ವರದಿಗಾರದ ತಸ್ಲೀಮ್, ಕಟ್ಟಡದ ಮಾಲಕ ಜೋಯಲ್, ಜೈ ಭಗವಾನ್ ಸ್ಟೋರ್ ಮಾಲಕ ರಾಜ್ಕುಮಾರ್, ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಶಿಕ್ಷಕಿಯರು ಉಪಸ್ಥಿತರಿದ್ದರು. ನರ್ಸರಿ(ಮೊಂಟೆಸ್ಸರಿ)ಶಿಕ್ಷಕಿ ತರಬೇತಿ ಪಡೆಯಲು ಬಯಸುವ ವಿದ್ಯಾರ್ಥಿನಿಯರು ದೂರವಾಣಿ ಸಂಖ್ಯೆ 9448409912, 8496085912 ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.