ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವಾರ್ಷಿಕೋತ್ಸವ, ಸನ್ಮಾನ ಸಮಾರಂಭ ಮತ್ತು ಯಕ್ಷಗಾನ ಬಯಲಾಟ ಜು. 29 ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ಬಿಲ್ವಶ್ರೀ ಸಭಾಂಗಣದಲ್ಲಿ ಜರಗಿತು.
ಜು. 29 ರಂದು ಸಂಜೆ 4.30 ಕ್ಕೆ ಹವ್ಯಾಸಿ ಯಕ್ಷಗಾನ ಕಲಾವಿದೆ, ಲಯನೆಸ್ ಮಾಜಿ ಜಿಲ್ಲಾಧ್ಯಕ್ಷೆ ಅರುಣಾ ಸೋಮಶೇಖರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮ – ಸನ್ಮಾನ
ಸಂಜೆ ನಡೆದ ಸಭಾ ಕಾರ್ಯಕ್ರಮ – ಸನ್ಮಾನ ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಸುಂದರ್ ಶೆಟ್ಟಿ ಬೆಟ್ಟಂಪಾಡಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಹಲವು ವರ್ಷಗಳ ಇತಿಹಾಸ ಹೊಂದಿರುವ ಯಕ್ಷಗಾನ ಸಂಘವು ಅನೇಕ ಕಲಾವಿದರನ್ನು ನಾಡಿಗೆ ಸಮರ್ಪಿಸಿದೆ. ಬೇರೆ ಬೇರೆ ಊರಿನಲ್ಲಿ ವೃತ್ತಿ ಜೀವನದಲ್ಲಿ ತೊಡಗಿಸಿಕೊಂಡಿರುವ ನಮ್ಮೂರಿನ ಎಲ್ಲಾ ಮಹನೀಯರು ಊರಿನಲ್ಲಿ ನಡೆಯುವ ಈ ರೀತಿಯ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕೆಂದರು.
ಮುಖ್ಯ ಅತಿಥಿಗಳಾಗಿ ನೋಟರಿ ನ್ಯಾಯವಾದಿ ಚಿದಾನಂದ ಬೈಲಾಡಿಯವರು ಮಾತನಾಡಿ ತನ್ನ ಬಾಲ್ಯದ ನೆನಪುಗಳನ್ನು ನೆನಪಿಸಿಕೊಂಡರು. ಪುತ್ತೂರು ಮಹಾಲಿಂಗೇಶ್ವರ ಕ್ಷೇತ್ರ ಹೊರತು ಪಡಿಸಿದರೆ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ ಮಹಾಲಿಂಗೇಶ್ವರ ಕ್ಷೇತ್ರ ಇದಾಗಿದೆ. ನಾನು ಕೂಡ ಬಾಲ್ಯದ ದಿನಗಳಲ್ಲಿ ಇಲ್ಲಿ ಯಕ್ಷಗಾನದ ವೇಷ ಹಾಕಿದ್ದೇನೆ ಎಂದು ಹೇಳುತ್ತಾ ಸಂಘದ ಹಿರಿಯ ಕಲಾವಿದರನ್ನು ನೆನಪಿಸು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸನ್ಮಾನ
ಸಂಘದ ಮಾಜಿ ಕಾರ್ಯದರ್ಶಿ ಮತ್ತು ಹಿರಿಯ ಅರ್ಥಧಾರಿ ಬಿ. ವಿಷ್ಣುರಾವ್ ಮತ್ತು ಹಿರಿಯ ಅರ್ಥಧಾರಿ ನಿವೃತ್ತ ಅಧ್ಯಾಪಕ ಭಾಸ್ಕರ ಶೆಟ್ಟಿಯವರಿಗೆ ಸಂಘದ ವತಿಯಿಂದ ಸನ್ಮಾನ ನಡೆಯಿತು.
ಸಂಜೀವ ರೈ ಎನ್ , ಐ ಗೋಪಾಲಕೃಷ್ಣ ರಾವ್ , ಬಿ ವೆಂಕಟ್ರಾವ್ ಸನ್ಮಾನ ಪತ್ರ ವಾಚಿಸಿದರು. ಕಳೆದ ಸಾಲಿನ ವಾರ್ಷಿಕೋತ್ಸವದ ಮಹಾ ಪೋಷಕರನ್ನು ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್ ಸ್ವಾಗತಿಸಿದರು ಕಾರ್ಯದರ್ಶಿ ಪ್ರದೀಪ್ ರೈ ವರದಿ ವಾಚಿಸಿದರು. ಕೋಶಾಧಿಕಾರಿ ಶ್ಯಾಂ ಪ್ರಸಾದ್ ಮಜಲುಗುಡ್ಡೆ ಮತ್ತು ಬಳಗದವರು ಯಕ್ಷಗಾನ ಹಾಡಿನ ಮೂಲಕ ಪ್ರಾರ್ಥಿಸಿದರು. ಸುಬ್ಬಣ್ಣ ಗೌಡ ಪಾರ, ಜಗನಾಥ ರೈ ಕಡಮಾಜೆ, ಕಿಶೋರ್ ಶೆಟ್ಟಿ ಕೋರ್ಮಂಡ, ಸಂತೋಷ್ ರೈ ಗುತ್ತು, ದಿವ್ಯ ಸತೀಶ್ ರಾವ್, ಲಕ್ಷ್ಮಣ ಮಣಿಯಾಣಿ ತಲೆಪ್ಪಾಡಿ ಇವರು ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಗೋಪಾಲಕೃಷ್ಣ ಮಿತ್ತಡ್ಕ ವಂದಿಸಿದರು, ಶಿವಪ್ರಸಾದ್ ತಲೆಪ್ಪಾಡಿ ನಿರೂಪಿಸಿದರು.
ಯಕ್ಷಗಾನ ಬಯಲಾಟ
ಸಂಜೆ ಚಂದ್ರಶೇಖರ ಮಣಿಯಾಣಿಯವರ ನಿರ್ದೇಶನದಲ್ಲಿ ಯುವ ಕಲಾವಿದರಿಂದ ಮುರಾಸುರ ವಧೆ’ ಯಕ್ಷಗಾನ ಬಯಲಾಟ ನಡೆಯಿತು.
ರಾತ್ರಿ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ‘ಮಹಾಕಲಿ ಮಗಧೇಂದ್ರ’ ಯಕ್ಷಗಾನ ಬಯಲಾಟ ನಡೆಯಿತು.