ಭ್ರಷ್ಟಾಚಾರವನ್ನು ಸಹಿಸುವುದೇ ಇಲ್ಲ-ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಎಚ್ಚರಿಕೆ

0

ದ.ಕ,ಉಡುಪಿಯಲ್ಲಿ ಇತರ ಜಿಲ್ಲೆಗಳಿಗಿಂತ ಭ್ರಷ್ಟಾಚಾರ ಕಡಿಮೆ
ಅಧಿಕಾರಿಗಳು ಜನರನ್ನು ಸತಾಯಿಸಬಾರದು, ಕಿರುಕುಳ ನೀಡಬಾರದು.
ಭ್ರಷ್ಟಾಚಾರದ ಕುರಿತು ದಾಖಲೆ ಸಮೇತ ದೂರು ಬಂದರೆ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ
ಅಧಿಕಾರಿಗಳು ಜನಸೇವಕರು ಕಚೇರಿಯಲ್ಲಿ ಕೂರದೆ ಫೀಲ್ಡ್‌ಗೆ ಹೋಗಬೇಕು
ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ನಡೆಸಬೇಕು
ಜನರ ಪ್ರತಿನಿಧಿಗಳು ಯಾವುದೇ ಪಕ್ಷದವರಾದರೂ ಗೌರವ ಕೊಡಲೇಬೇಕು
ಜಿಲ್ಲೆಯಲ್ಲಿ ಶಿಕ್ಷಣ ಸೂಚ್ಯಂಕ ಕುಸಿತ ಯಾಕೆ?
ಅಡಕೆಗೆ ರೋಗ-ತಜ್ಞರ ಸಭೆ ಕರೆದು ಪರಿಹಾರ:
ಮಾದಕ ವಸ್ತು ಹಾವಳಿ ಗೂಂಡಾ ಕಾಯ್ದೆ ಹಾಕಿ:
ಮಲಗಿದಲ್ಲೇ ಇರುವವರಿಗೆ ಮಾಸಾಶನ ನೀಡಿ-ಅಶೋಕ್ ರೈ
ಅನೈತಿಕ ಪೊಲೀಸ್‌ಗಿರಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ

ಮಂಗಳೂರು:ಯಾವುದೇ ಕಾರಣಕ್ಕೂ ತಮ್ಮ ಸರಕಾರ ಭ್ರಷ್ಟಾಚಾರವನ್ನು ಸಹಿಸುವುದೇ ಇಲ್ಲ.ಯಾವುದೇ ಅಧಿಕಾರಿ ಭ್ರಷ್ಟಾಚಾರ ಮಾಡಿರುವ ಕುರಿತು ದಾಖಲೆಗಳ ಸಮೇತವಾಗಿ ದೂರು ನೀಡಿದರೆ ಎಷ್ಟೇ ದೊಡ್ಡ ಅಧಿಕಾರಿಯಾದರೂ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಗೆ ಒಂದು ದಿನದ ಭೇಟಿ ನೀಡಿದ ಅವರು ಆ.1ರಂದು ಸಂಜೆ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಪ್ರಗತಿ ಪರಿಶೀಲನೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಅಧಿಕಾರಿಗಳು ಜನರಿಗೆ ಕಿರುಕುಳ ನೀಡಬಾರದು.ಜನರನ್ನು ಸತಾಯಿಸುವ ಮೂಲಕ ಲಂಚಕ್ಕೆ ಅವಕಾಶ ಮಾಡಿಕೊಡಬಾರದು.ನಾನು ಆ ಕೆಲಸ ಮಾಡುವುದಿಲ್ಲ.ಈ ಕೆಲಸ ಮಾಡುವುದಿಲ್ಲ ಎಂದು ಕೆಲಸದಿಂದ ಹಿಂದೆ ಸರಿಯಬಾರದು.ಸರ್ಕಾರದ ಸವಲತ್ತುಗಳು ಜನಸಾಮಾನ್ಯರಿಗೆ ತಲುಪುವಲ್ಲಿ ಅಧಿಕಾರಿಗಳು ಶ್ರಮ ವಹಿಸಬೇಕು, ಇದರಲ್ಲಿ ಯಾವುದೇ ನಿರ್ಲಕ್ಷ್ಯ,ಬೇಜವಾಬ್ದಾರಿ,ಭ್ರಷ್ಟಾಚಾರ ಕಂಡುಬಂದರೆ ಮುಲಾಜಿಲ್ಲದೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.


ದ.ಕ.ಉಡುಪಿಯಲ್ಲಿ ಭ್ರಷ್ಟಾಚಾರ ಕಡಿಮೆ:
ಇತರ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆ.ಇಲ್ಲಿನ ಜನ ಸುಶಿಕ್ಷಿತರಾಗಿದ್ದು ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡದೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸಿಎಂ ಸೂಚಿಸಿದರು.


ಅಧಿಕಾರಿಗಳು ಜನಸೇವಕರು: ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಜನರ ಸೇವಕರು.ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂರದೆ ಫೀಲ್ಡ್‌ಗೆ ಇಳಿಯಬೇಕು.ಹಾಗಾದಾಗ ಮಾತ್ರ ಸ್ಥಳೀಯ ಸಮಸ್ಯೆಗಳು ಅಧಿಕಾರಿಗಳ ಅರಿವಿಗೆ ಬರುತ್ತವೆ.ಸುಮ್ಮನೆ ಜನಸಾಮಾನ್ಯರಿಗೆ ಕಿರುಕುಳ ಕೊಟ್ಟರೆ ಸಹಿಸಲಾಗದು ಎಂದು ಸಿದ್ಧರಾಮಯ್ಯ ಹೇಳಿದರು.


ಜನರ ಪ್ರತಿನಿಧಿಗಳಿಗೆ ಗೌರವ ಕೊಡಬೇಕು:
ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಜನರ ಪ್ರತಿನಿಧಿಗಳು.ಅವರು ಆಡಳಿತ ಪಕ್ಷದವರೇ ಇರಲಿ ವಿಪಕ್ಷದವರೇ ಆಗಿರಲಿ.ಜನರ ಪ್ರತಿನಿಧಿಗಳೇ ಆಗಿರುವುದರಿಂದ ಅವರಿಗೆ ಕೊಡುವ ಗೌರವವನ್ನು ಎಲ್ಲ ಅಧಿಕಾರಿಗಳೂ ಕೊಡಲೇಬೇಕು.ಇದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಜಿಲ್ಲೆಯ ಕೆಲವೊಂದು ಅಧಿಕಾರಿಗಳು ತಮಗೆ ಗೌರವ ನೀಡುತ್ತಿಲ್ಲ ಎಂದು ಕೆಲ ಶಾಸಕರು ಸಿಎಂ ಗಮನಕ್ಕೆ ತಂದರು.ಈ ಹಿಂದೆ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು.ಪುನಃ ಮತ್ತೊಮ್ಮೆ ಆ ಸ್ಥಾನದಲ್ಲಿ ಬರಲು ಸಂಬಂಧಿಸಿದ ಅಧಿಕಾರಿಗಳೆಲ್ಲರೂ ಶ್ರಮವಹಿಸಬೇಕು.ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಎಲ್ಲಾ ಅಧಿಕಾರಿಗಳ ಸಭೆ ನೀಡಿ ಸೂಕ್ತ ನಿರ್ದೇಶನ ನೀಡಬೇಕು.ತಿಂಗಳಲ್ಲಿ ಕನಿಷ್ಟ ಒಂದು ಬಾರಿ ಜಿಲ್ಲಾಧಿಕಾರಿಗಳು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚಿಸಿದರು.


ಮಲಗಿದಲ್ಲೇ ಇರುವವರಿಗೆ ಮಾಸಾಶನ ನೀಡಿ-ಅಶೋಕ್ ರೈ:
ಕೃಷಿ ಕಾರ್ಯ ಮಾಡುವಾಗ ಅಡಿಕೆ, ತೆಂಗು ಇಲ್ಲವೇ ಇತರ ಮರಗಳಿಂದ ಬಿದ್ದು ಗಾಯಗೊಂಡು ಏಳಲಾದರೆ ಮಲಗಿದ್ದಲ್ಲಿಯೇ ಇರುವಂತಹ ಅಶಕ್ತರಿಗೆ 5 ಸಾವಿರ ರೂ.ಮಾಸಾಶನ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದರು.ಈ ಕುರಿತು ಪರಿಶೀಲನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಿಎಂ ನಿರ್ದೇಶನ ನೀಡಿದರು.ಮಾಸಾಶನ ಕೊಡಲು ಅವಕಾಶವಿದ್ದರೆ ಶೀಘ್ರ ಈ ಕುರಿತು ವ್ಯವಸ್ಥೆ ಮಾಡುವುದಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದರು.


ಮನೆಯಂಗಳಕ್ಕೆ ಧರೆ ಕುಸಿತ ಸಂತ್ರಸ್ತರಿಗೆ ಪರಿಹಾರ ನೀಡಿ:
ಗಾಳಿ, ಮಳೆಗೆ ಮನೆ ಪಕ್ಕದ ಧರೆ ಕುಸಿದು ಮನೆಯಂಗಳಕ್ಕೆ ಬಿದ್ದ ಸಂದರ್ಭ ಮಣ್ಣು ತೆರವಿಗೆ ಪರಿಹಾರ ಒದಗಿಸಿಕೊಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದರು.
ಪುತ್ತೂರು ಕ್ಷೇತ್ರದಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಈ ರೀತಿ 70 ಮನೆಗಳಿಗೆ ಹಾನಿಯಾಗಿರುವುದಾಗಿ ಶಾಸಕರು ಗಮನ ಸೆಳೆದರು.ಪ್ರಾಕೃತಿಕ ವಿಕೋಪದಿಂದ ಮನೆ ಸಂಪೂರ್ಣ ಹಾನಿಯಾದರೆ 5 ಲಕ್ಷ ರೂ.,ಭಾಗಶ: ಹಾನಿಯಾದರೆ ರೂ.1 ಲಕ್ಷ, ರೂ.10 ಸಾವಿರ ಹೀಗೆ ಬೇರೆ ಬೇರೆ ಹಂತದಲ್ಲಿ ಪರಿಹಾರ ಕೊಡಲಾಗುತ್ತಿದೆ.ಆದರೆ ಮನೆಯಂಗಳಕ್ಕೆ ಧರೆ ಕುಸಿದು ಬಿದ್ದಲ್ಲಿ ಮಣ್ಣು ತೆರವಿಗೆ ಪ್ರತ್ಯೇಕ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಸಿಎಂ ಹೇಳಿದರು.ಕನಿಷ್ಟ 50 ಸಾವಿರ ರೂ.ಆದರೂ ಪರಿಹಾರ ಒದಗಿಸಿಕೊಡಬೇಕು ಎಂದು ಅಶೋಕ್ ಕುಮಾರ್ ರೈ ಮನವಿ ಮಾಡಿದರು.ಈ ಕುರಿತು ಪರಿಶೀಲನೆ ನಡೆಸುವುದಾಗಿ ಸಿಎಂ ಹೇಳಿದರಲ್ಲದೆ,ಮಳೆಯಿಂದ ಪೂರ್ತಿಹಾನಿಯಾದ ಮನೆಗಳಿಗೆ ೫ ಲಕ್ಷ ಪರಿಹಾರಕ್ಕೆ ಇಂದೇ ಆದೇಶ ಹೊರಡಿಸುತ್ತೇನೆ ಎಂದು ಮೊದಲಿದ್ದ ರೀತಿಯಲ್ಲೇ ಎ, ಬಿ, ಸಿ ಕೆಟಗರಿಯಲ್ಲಿ ವಿಂಗಡಿಸಿ ಪರಿಹಾರ ನೀಡುವಂತೆ ಹೇಳಿದರು.


ಶಿಕ್ಷಣ ಸೂಚ್ಯಂಕ ಕುಸಿತ ಯಾಕೆ?:
ಸುಶಿಕ್ಷಿತರ ಜಿಲ್ಲೆ ಮಂಗಳೂರು ಶಿಕ್ಷಣ ಸೂಚ್ಯಂಕದಲ್ಲಿ ಕುಸಿಯುತ್ತಿರುವುದು ಒಳ್ಳೆ ಬೆಳವಣಿಗೆ ಅಲ್ಲ ಎಂದು ಹೇಳಿದ ಸಿಎಂ, ಈ ಬಗ್ಗೆ ಡಿಡಿಪಿಐ ಅವರಿಂದ ವಿವರಣೆ ಕೇಳಿದರು.
ಆರೋಗ್ಯ ಸೂಚ್ಯಂಕದಲ್ಲೂ ಕುಸಿದಿದೆ. ದಕ ಜಿಲ್ಲೆ 2015 ರಲ್ಲಿ 3 ಸ್ಥಾನದಲ್ಲಿತ್ತು. ಈಗ ೨೩ನೇ ಸ್ಥಾನಕ್ಕೆ ಕುಸಿದಿರುವುದು ಏಕೆ, ತಾಯಿ ಮಕ್ಕಳ ಮರಣ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿರುವುದಕ್ಕೆ ಎಂ.ಎಂ.ಆರ್ ಸಮೀಕ್ಷೆಯ ವರದಿಯನ್ನು ತಿಳಿದುಕೊಂಡು ಅದನ್ನು ತಡೆಗಟ್ಟಲು ಕ್ರಮಕೈಗೊಳ್ಳುವಂತೆ ತಿಳಿಸಿದರು.


ಗ್ರಾಮೀಣ ವೈದ್ಯರು ಕ್ವಾರ್ಟರ್‍ಸ್‌ನಲ್ಲಿರಲಿ:
ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಇನ್ನು ಮುಂದೆ ಅವರಿಗೆ ನೀಡಿದ ಕ್ವಾರ್ಟರ್ಸ್‌ಗಳಲ್ಲೇ ನೆಲೆಸುವಂತೆ ಕ್ರಮವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ರಸಗೊಬ್ಬರ ಕೊರತೆಯಾಗಬಾರದು:
ರೈತರಿಗೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಒಮ್ಮೆ ಬೀಜ, ರಸಗೊಬ್ಬರ ಕೊಟ್ಟರೆ ಮುಗಿಯಿತು ಎಂದು ಅಧಿಕಾರಿಗಳು ವರ್ತಿಸಬಾರದು. ಬೆಳೆಹಾನಿಯಾಗಿ ಮತ್ತೆ ಬೀಜ, ರಸಗೊಬ್ಬರಕ್ಕೆ ಬೇಡಿಕೆ ರೈತರಿಂದ ಬಂದರೆ ಬೇಡಿಕೆ ಪೂರೈಸಬೇಕು ಎಂದು ಸೂಚಿಸಿದರು.


ಅಡಕೆಗೆ ರೋಗ-ತಜ್ಞರ ಸಭೆ ಕರೆದು ಪರಿಹಾರ:
ಅಡಕೆಗೆ ಎಲೆಚುಕ್ಕೆ ರೋಗ, ಹಳದಿ ರೋಗ, ಕೀಟ ಬಾಧೆ ಯಾವ ಪ್ರಮಾಣದಲ್ಲಿ ಬಂದಿದೆ ಎನ್ನುವ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು ಈ ಸಂಬಂಧ ಕೃಷಿ ವಿಜ್ಞಾನಗಳು ಹಾಗೂ ತಜ್ಞರನ್ನು ಕರೆದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.ವಿಟ್ಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರಕಾರದ ಅಧೀನದ ಸಿಪಿಸಿಆರ್‌ಐ ಸಂಸ್ಥೆ ಅಡಿಕೆಗೆ ಕೊಳೆರೋಗ, ಎಲೆಚುಕ್ಕಿ ರೋಗ, ಹಳದಿ ರೋಗ ಬಂದಾಗಲೂ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಸಿಎಂ ಗಮನಕ್ಕೆ ತಂದರು.


ಮಾದಕ ವಸ್ತು ಹಾವಳಿ ಗೂಂಡಾ ಕಾಯ್ದೆ ಹಾಕಿ:
ಮಾದಕ ವಸ್ತು ಹಾವಳಿ ಮಂಗಳೂರಿನಲ್ಲಿ ವಿಪರೀತ ಹೆಚ್ಚಾಗುತ್ತಿದೆ.ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪೊಲೀಸ್ ಆಯುಕ್ತರನ್ನು ಮುಖ್ಯಮಂತ್ರಿಗಳು ಪ್ರಶ್ನಿಸಿದರು.ಆಯುಕ್ತರ ಉತ್ತರದಿಂದ ಸಮಾಧಾನಗೊಳ್ಳದ ಮುಖ್ಯಮಂತ್ರಿಗಳು ಗೂಂಡಾಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.


ಅನೈತಿಕ ಪೊಲೀಸ್‌ಗಿರಿ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ:
ಅನೈತಿಕ ಪೊಲೀಸ್‌ಗಿರಿ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಯಾವುದೇ ಗುಂಪು, ಯಾವುದೇ ಸಿದ್ಧಾಂತದವರು ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸ್ ಗಿರಿ ನಡೆಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಸ್ಪಷ್ಟ ಸೂಚನೆ ನೀಡಿದರು.


ಕಡಲ್ಕೊರೆತ-ಶಾಶ್ವತ ಪರಿಹಾರ:
ಕಡಲ ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತೀರ್ಮಾನಿಸಿದ್ದೇವೆ. ಕಡಲ ಕೊರೆತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿzನೆ ಎಂದು ಹೇಳಿದ ಸಿಎಂ,ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಸೇರಿಸಿ ಸಮಗ್ರ ಚರ್ಚೆ ಮಾಡಿ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲು ತಿಳಿಸಿದರು.


ನೆರವು ಮೀನುಗಾರರ ಸಮುದಾಯಕ್ಕೆ ತಲುಪುತ್ತಿದೆಯೇ?:
ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು 1.5 ಲಕ್ಷ ಕಿಲೋ ಲೀಟರ್‌ನಿಂದ 2 ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಿದ್ದೇವೆ.ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವು ನೀಡಿದ್ದೇವೆ.ಇದು ಮೀನುಗಾರ ಸಮುದಾಯಕ್ಕೆ ತಲುಪುತ್ತದೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಇದರಿಂದ ಸಮುದಾಯಕ್ಕೆ ದೊಡ್ಡ ಅನುಕೂಲವಾಗಿದೆ ಎಂದು ಉತ್ತರಿಸಿದರು.


ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 5೦,೦೦೦ ರೂ. ಸಹಾಯಧನ ನೀಡುತ್ತಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4,೦೦೦ ಸೀಮೆ ಎಣ್ಣೆ ಇಂಜಿನ್‌ಗಳ ಬದಲಾವಣೆಗೆ 2೦ ಕೋಟಿ ರೂ. ಸಹಾಯಧನ ಒದಗಿಸಲಾಗುವುದು ಎಂದು ನಾವು ಆಯವ್ಯವಯದಲ್ಲಿ ಘೋಷಿಸಿದ್ದೇವೆ, ಈ ಕಾರ್ಯಕ್ರಮ ಸರಿಯಾಗಿ ಜಾರಿಯಾಗುವಂತೆ ಕ್ರಮ ವಹಿಸಲು ಅಧಿಕಾರಿಗಳು ಸೂಚಿಸಿದರು.
ಶಕ್ತಿ ಯೋಜನೆಯಿಂದ ಜನರಿಂದ ಮತ್ತು ವಿದ್ಯಾರ್ಥಿ ಸಮೂಹದಿಂದ ಉತ್ತಮ ಸ್ಪಂದನೆ ಇರುವುದರಿಂದ ಸದ್ಯದಲ್ಲೇ 4೦೦೦ ಹೆಚ್ಚುವರಿ ಬಸ್ ಗಳನ್ನು ಖರೀದಿಸುವುದಾಗಿ ಸಿಎಂ ತಿಳಿಸಿದರು.


ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳ ಲಾಭ ಜಿಲ್ಲೆಯ ಪ್ರತಿಯೊಬ್ಬ ಫಲಾನುಭವಿಗೂ ದೊರಕುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ಸಲಹೆ-ಸೂಚನೆಗಳನ್ನು ನೀಡಿದರು.


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀಹೆಬ್ಬಾಳ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ|ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ.ಅತಿಕ್,ಮಂಗಳೂರು ಮೇಯರ್ ಜಯಾನಂದ ಅಂಚನ್,ಶಾಸಕರಾದ ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ, ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್,ರಾಜೇಶ್ ನಾಯಕ್,ವಿಧಾನ ಪರಿಷತ್ ಶಾಸಕರಾದ ಡಾ|ಮಂಜುನಾಥ ಭಂಡಾರಿ, ಕೆ.ಹರೀಶ್ ಕುಮಾರ್, ಪ್ರತಾಪ ಸಿಂಹ ನಾಯಕ್, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಸ್ತೂರಿ ರಂಗನ್ ವರದಿ ಜಾರಿ ಬೇಕೇ ಬೇಡವೇ?ಕೇಂದ್ರಕ್ಕೆ ಬಿಟ್ಟ ವಿಚಾರ
ಕಸ್ತೂರಿರಂಗನ್ ವರದಿ ಜಾರಿ ಮಾಡುವುದು ಬಿಡುವುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ ಬಿಟ್ಟದ್ದು.ವರದಿ ಜಾರಿ ಬೇಡ ಎಂದು ನಾವು ಹೇಳಿದ್ದೇವೆ.ಆದರೆ ಪರಿಸರ ರಕ್ಷಣೆಯಲ್ಲಿ ನಾವು ಹಿಂದೆ ಬೀಳೋಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಸಿಎಂ ಉತ್ತರಿಸಿದರು.

ಸೌಜನ್ಯ ಪ್ರಕರಣ ಲೀಗಲ್ ಆಗಿ ಏನು ಮಾಡ್ಬಹುದು ನೋಡೋಣ
ಸೌಜನ್ಯ ಪ್ರಕರಣದ ಮರು ತನಿಖೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪ್ರಕರಣದ ಸಿಬಿಐ ತನಿಖೆ ನಡೆದು ಈಗಾಗಲೇ ತೀರ್ಪು ಬಂದಿದೆ.ಇದರ ಮರು ತನಿಖೆಯಾಗಬೇಕು ಎಂದು ಅವರ ಪೋಷಕರು, ಬೇರೆಯವರು ಬಂದು ಮನವಿ ಕೊಟ್ಟಿದ್ದಾರೆ.ಲೀಗಲ್ ಆಗಿ ಏನು ಮಾಡ್ಬಹುದು ಮುಂದೆ ನೋಡೋಣ.ಆದರೆ ನಾನೋರ್ವ ಲಾಯರ್ ಆಗಿ ಹೇಳೋದಾದ್ರೆ ಹೈಕೋರ್ಟ್‌ನಲ್ಲಿ ಇದರ ವಿರುದ್ಧ ಅಪೀಲು ಹಾಕಬೇಕು.ಆದರೆ ನಾನಿನ್ನೂ ಜಡ್ಜ್‌ಮೆಂಟ್ ಓದಿಲ್ಲ. ಜಡ್ಜ್‌ಮೆಂಟ್ ಓದಿ ಮುಂದೆ ನೋಡೋಣ ಎಂದು ಹೇಳಿದರು.

LEAVE A REPLY

Please enter your comment!
Please enter your name here