ಪುತ್ತೂರು:ಸ್ವಿಫ್ಟ್ ಕಾರಿನ ವ್ಯವಹಾರದ ಕುರಿತು ಮಾತನಾಡಲು ಇದೆ ಎಂದು ಬನ್ನೂರು ಆರ್ಟಿಒ ಹಿಂಬದಿಯ ಶಾಲೆಯ ಬಳಿಗೆ ಕರೆಸಿ ಹಲ್ಲೆ ನಡೆಸಿ, ನಗದು ಮತ್ತು ಮೊಬೈಲ್ ಫೋನ್ ಕಸಿದುಕೊಂಡು ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬನ್ನೂರು ಮಸೀದಿ ಬಳಿಯ ಅಬ್ದುಲ್ ಗಫೂರ್ ಎಂಬವರ ಮಗ ಮಹಮ್ಮದ್ ಎಂಬವರ ಮೊಬೈಲ್ಗೆ ಕಳೆದ ಫೆಬ್ರವರಿ 13ರಂದು ಕೀನ್ಯ ಪಡುಬಿದ್ರೆ ನಿವಾಸಿ ಇಲ್ಯಾಸ್ ಯಾನೆ ಇಲ್ಯಾಸ್ ಪಾರೆ ಎಂಬಾತ ಕರೆ ಮಾಡಿ, ಸ್ವಿಫ್ಟ್ ಕಾರಿನ ವ್ಯವಹಾರದ ಕುರಿತು ಮಾತನಾಡಲು ಇದೆ ಎಂದು ಹೇಳಿ ಬನ್ನೂರು ಆರ್ಟಿಒ ಹಿಂದುಗಡೆ ಇರುವ ಶಾಲೆಯ ಬಳಿಗೆ ಬರುವಂತೆ ತಿಳಿಸಿದ್ದ.ಅದರಂತೆ ತಾನು ಅಲ್ಲಿಗೆ ಹೋದಾಗ ಪರಿಚಯದ ಕೀನ್ಯ ಪಡುಬಿದ್ರೆ ನಿವಾಸಿ ಇಲ್ಯಾಸ್ ಯಾನೆ ಇಲ್ಯಾಸ್ ಪಾರೆ, ಉಪ್ಪಿನಂಗಡಿ ನಿವಾಸಿ ಅಜೈ ಶೆಟ್ಟಿ, ಸವಣೂರು ನಿವಾಸಿ ಸುಲೈಮಾನ್, ಮಾಡಾವಿನ ಸಿನಾನ್, ಹಾಸನ ಜಿಲ್ಲೆ ಆಲೂರು ನಿವಾಸಿ ಅವಿನಾಶ್, ಶಶಾಂಕ್, ಇನ್ನಿತರರು ತನ್ನನ್ನುದ್ದೇಶಿಸಿ, ಸ್ವಿಫ್ಟ್ ಕಾರನ್ನು ಎಲ್ಲಿ ಅಡವಿಟ್ಟಿದ್ದೀಯಾ?ನನಗೆ ಕೂಡಲೇ 1 ಲಕ್ಷ ರೂ.ಕೊಡು ಎಂದು ಧಮ್ಕಿ ಹಾಕಿದ್ದಾರೆ.ತಾನು ಯಾವುದೇ ಕಾರನ್ನು ಅಡವಿಟ್ಟಿಲ್ಲ ಎಂದು ಹೇಳಿದಾಗ ತನಗೆ ಹೊಡೆದು,ಪ್ಯಾಂಟಿನ ಕಿಸೆಯಲ್ಲಿದ್ದ ಟೆಕ್ನೋ ಮೊಬೈಲ್ ಮತ್ತು 50 ಸಾವಿರ ರೂ.ಗಳನ್ನು ಬಲವಂತವಾಗಿ ಎಳೆದುಕೊಂಡಿದ್ದಾರೆ.ತಮಗೆ 1 ಲಕ್ಷ ರೂ.ಗಳನ್ನು ಎರಡು ದಿನಗಳೊಳಗೆ ಕೊಡಬೇಕು ಎಂದು ಹೇಳಿ ಆರೋಪಿಗಳೆಲ್ಲರೂ ಸೇರಿ ಜೀವಬೆದರಿಕೆ ಒಡ್ಡಿದ್ದರು.ಫೆ.14ರಂದು ಮಜಲ್ ಫ್ಯಾಮಿಲಿ ಗ್ರೂಪ್ಗೆ ಒಂದು ಹೆಣ್ಣಿನ ಜೊತೆಯಲ್ಲಿರುವ ಚಿತ್ರವನ್ನು ವಾಟ್ಸಪ್ ಗ್ರೂಪ್ನಲ್ಲಿ ವೈರಲ್ ಮಾಡಿದ್ದು ಬೇರೆ ವಾಟ್ಸಪ್ ಗ್ರೂಪ್ನಲ್ಲಿಯೂ ವೈರಲ್ ಮಾಡಿದ್ದಾರೆ.ಅದೇ ದಿನ ಆರೋಪಿ ಅಜಯ್ ಶೆಟ್ಟಿ ನನ್ನ ಪತ್ನಿಯ ಮೊಬೈಲ್ಗೆ ವಾಯ್ಸ್ ನೋಟ್ ಒಂದನ್ನು ಕಳುಹಿಸಿದ್ದು ಅದರಲ್ಲಿ, ನಿನ್ನ ಗಂಡ 5 ಲಕ್ಷ ರೂ.ಕೊಡದೇ ಇದ್ದಲ್ಲಿ ಪೇಪರ್ ಮತ್ತು ಟಿವಿ ಚಾನೆಲ್ನಲ್ಲಿ, ನಿನ್ನ ಗಂಡ ಮತ್ತು ಮಹಿಳೆಯ ಜೊತೆಯಲ್ಲಿರುವ ಅಶ್ಲೀಲ ಚಿತ್ರವನ್ನು ಪ್ರಚಾರ ಮಾಡುವುದಾಗಿ ಹೇಳಿದ್ದಾರೆ ಎಂದು ಮಹಮ್ಮದ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಇಲ್ಯಾಸ್ ಪಾರೆ ಯಾನೆ ಇಲ್ಯಾಸ್ ಉಚ್ಚಿಲ, ಸುಲೈಮಾನ್ ಕೆ.ಯಾನೆ ಕೊಂಬಾಳಿ ಸುಲೈಮಾನ್ ಪುರುಷರಕಟ್ಟೆ, ಅಹ್ಮದ್ ಸಿನಾನ್ ಪಡ್ಪಿನಂಗಡಿ ಮತ್ತು ಶಶಾಂಕ್ ಎ.ಎನ್.ಯಾನೆ ಸಶಾಂಕ್ ಆಲೂರು ಹಾಸನ ಎಂಬವರಿಗೆ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡು, ಮೋಹಿನಿ ಕೆ.ವಾದಿಸಿದ್ದರು.