ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ 2023ನೇ ಸಾಲಿನಲ್ಲಿ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಉಚಿತ ಬಸ್ ಪಾಸ್ ಅನ್ನು ಆ.9 ರಿಂದ ಪುತ್ತೂರು ವಿಭಾಗದ ನಿಗದಿ ಪಡಿಸಿದ ಸ್ಥಳದಲ್ಲಿ ವಿತರಣೆಯ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪುತ್ತೂರು ವಿಭಾಗದ ವ್ಯಾಪ್ತಿಯಲ್ಲಿ ಬರುವ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ಥರಿಗೆ ಅನುಕೂಲವಾಗುವಂತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಂಡೋಸಂತ್ರಸ್ತರು ಇದರ ಸದುಪಯೋಗ ಪಡೆಯುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರು ತಿಳಿಸಿದ್ದಾರೆ. ಆ.9ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಂಡೋಸಂತ್ರಸ್ಥರ ಪಾಲನಾ ಕೇಂದ್ರ, ಆ.10ಕ್ಕೆ ಅದೇ ತಾಲೂಕಿನ ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಆ.11ಕ್ಕೆ ಪುತ್ತೂರು ತಾಲೂಕಿನ ಕೊಲ ಪಂಚಾಯತ್ ಕಚೇರಿಯಲ್ಲಿ, ಆ.12ಕ್ಕೆ ಬಂಟ್ವಾಳ ತಾಲೂಕಿನ ವಿಟ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಆ.16ರಂದು ಬೆಳ್ಳಾರೆ ಕರಾರಸಾ ನಿಗಮ ಸಂಚಾರ ನಿಯಂತ್ರಣ ಕೇಂದ್ರದಲ್ಲಿ ಎಂಡೋಸಂತ್ರಸ್ಥರಿಗೆ ಉಚಿತ ಬಸ್ ಪಾಸ್ ವಿತರಣೆ ನಡೆಯಲಿದೆ. ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 5ರ ತನಕ ಕಾರ್ಯಕ್ರಮ ನಡೆಯಲಿದೆ.
ಎಂಡೋಸಲ್ಫಾನ್ ಸಂತ್ರಸ್ಥರು ಅಥವಾ ಸದರಿಯವರ ಕುಟುಂಬದವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸುತ್ತೋಲೆಯನ್ವಯ ಅಂಗವಿಕಲ ಕಲ್ಯಾಣ ಇಲಾಖೆ ನೀಡಿರುವ ಎಂಡೋಸಲ್ಫಾನ್ ಗುರುತಿನ ಕಾರ್ಡ್ ಹಾಗು ಯಥಾ ಪ್ರತಿ, ವಾಸ್ತವ್ಯ ದೃಢೀಕರಣ ಬಗ್ಗೆ ದಾಖಲಾತಿ, ಪಾಸ್ ಪೋರ್ಟ್ ಸೈಜ್ ಪೋಟೋ, ಅಂಚೆ ಚೀಟಿ ಗಾತ್ರದ ಒಂದು ಪೋಟೋ ಹಾಗು ವೈದ್ಯಕೀಯ ಪರೀಕ್ಷೆಗಳ ವರದಿ ಅಥವಾ ಕಂದಾಯ ಇಲಾಖೆಯಿಂದ ಒದಗಿಸಿದ ಮಂಜೂರಾತಿ ಆದೇಶದ ಪ್ರತಿಯೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಎಂಡೋಸಲ್ಫಾನ್ ಉಚಿತ ಪಾಸನ್ನು ಪಡೆಯಬಹುದಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ ಪ್ರಕಟಣೆ ತಿಳಿಸಿದೆ.