`ಸುದ್ದಿ’ಗೆ ಸ್ಪೀಕರ್ ಯು.ಟಿ.ಖಾದರ್ ಎಕ್ಸ್ಕ್ಲೂಸಿವ್ ಸಂದರ್ಶನ
ಬೆಳ್ತಂಗಡಿ: ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ರವರನ್ನುಸುದ್ದಿ ನ್ಯೂಸ್ ಬೆಳ್ತಂಗಡಿ'ಸಂದರ್ಶನʼನಡೆಸಿದೆ. ಉಜಿರೆಯಲ್ಲಿ
ಸುದ್ದಿ’ಯೊಂದಿಗೆ ಮಾತನಾಡಿದ ಯು.ಟಿ. ಖಾದರ್ ಅವರು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದು ನನಗೆ ತುಂಬಾ ಸಂತೋಷ ನೀಡಿದೆ. ಸಂವಿಧಾನಬದ್ಧ ನಿಯಮಕ್ಕೆ ಅನುಗುಣವಾಗಿ ನಡೆಯುವಂತಹ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಆ ಪೀಠಕ್ಕೆ ಗೌರವ ತರುವಂತಹ ಕೆಲಸ ಮಾಡುತ್ತೇನೆ. ನಮ್ಮ ಜಿಲ್ಲೆಯವರಾಗಿರುವ ವೈಕುಂಠ ಬಾಳಿಗರು ಮತ್ತು ಕೆ.ಎಸ್. ಹೆಗ್ಡೆಯವರು ಈ ಹುದ್ದೆಗೆ ಗೌರವ ತಂದಿದ್ದಾರೆ. ಅವರ ಆಶೀರ್ವಾದ ಅತ್ಯಗತ್ಯ ಎಂದು ಹೇಳಿದರು. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಹಿತ ವಿವಿಧೆಡೆಗೆ ಭೇಟಿ ನೀಡಿದ್ದ ಯು.ಟಿ. ಖಾದರ್ ಅವರು ರುಡ್ಸೆಟ್ ಸಂಸ್ಥೆ ಬಳಿ `ಸುದ್ದಿ’ಯೊಂದಿಗೆ ಮಾತನಾಡಿದರು.
ತುಳುಭಾಷೆ ಕೇವಲ ಭಾಷೆಯಲ್ಲ ಅದು ಸಂಸ್ಕೃತಿ:
ಸ್ವೀಕರ್ ಆಗಿ ಅಧಿವೇಶನ ಅತ್ಯುತ್ತಮವಾಗಿ ಮುಗಿದಿದೆ. ಅದನ್ನು ನಿಭಾಯಿಸುವ ಜೊತೆಯಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರ ಜೊತೆ ಚರ್ಚೆ ಮಾಡುವ ಜೊತೆಯಲ್ಲಿ ನಾನು ಕೂಡ ಸ್ವಲ್ಪ ಮಟ್ಟಿನ ಕಲಿಕೆ ಪಡೆದಿದ್ದೇನೆ. ತುಳು ಭಾಷೆಯ ಬಗೆಗೆ ಅತ್ಯಂತ ಗೌರವವಿದೆ. ನಾನು ಮನೆಯಲ್ಲಿ ಬ್ಯಾರಿ ಭಾಷೆ ಮಾತನಾಡುವುದು. ಆದರೆ ಹೊರಗೆ ಬಂದಾಗ ನಾವೆಲ್ಲರು ಮಾತನಾಡುವುದು ತುಳು. ಭಾಷೆ ಎಂದಾಕ್ಷಣ ಅದು ಭಾಷೆ ಮಾತ್ರವಲ್ಲ ಅದು ಆಚಾರ ವಿಚಾರ ಸಂಸ್ಕೃತಿ ವೇಷಭೂಷಣಗಳು ಎಲ್ಲವನ್ನು ಒಳಗೊಂಡಿರುತ್ತದೆ. ನಾವು ಯಾವುದೇ ಜಾತಿ ಮತ ಆದರೂ ನಾವೆಲ್ಲರೂ ತುಳುನಾಡಿನ ಹೆಮ್ಮೆಯ ಮಕ್ಕಳು. ತುಳುನಾಡಿನ ಸಂಸ್ಕೃತಿ ಪ್ರತಿಯೊಬ್ಬನ ವ್ಯಕ್ತಿತ್ವದಲ್ಲಿ ನೆಲೆ ನಿಂತಿದೆ. ಕಳೆದ ಸಾವಿರಾರು ವರ್ಷಗಳಿಂದ ಯಾವುದೇ ಲಿಪಿಯಿಲ್ಲದೆ ಕೇವಲ ಬಾಯಿಮಾತಿನಿಂದ ಒಂದು ಗುರುತನ್ನು ಹಾಗೂ ಅಸ್ತಿತ್ವವನ್ನು ಉಳಿಸಿಕೊಂಡಿದ್ದರೆ ಅದು ತುಳು ಭಾಷೆ. ಅದು ದೊಡ್ಡಮಟ್ಟದ ಶಕ್ತಿ ಎಂದು ಹೇಳಿದ ಯು.ಟಿ.ಖಾದರ್ ಅವರು ಈಗ ತುಳುವಿಗೆ ಲಿಪಿಯೂ ಇದೆ. ಅದರ ಬಗ್ಗೆ ಹೆಮ್ಮೆಯಿದೆ ಎಂದರು.
ರಾಜ್ಯದ ಎರಡನೇ ಭಾಷೆಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ:
ತುಳುವನ್ನು ರಾಜ್ಯದ ಎರಡನೇ ಭಾಷೆಯಾಗಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಾಗಿ ತಿಳಿಸಿದ ಮಂಗಳೂರು ಶಾಸಕರೂ, ಮಾಜಿ ಸಚಿವರೂ ಆಗಿರುವ ಕಡಬ ತಾಲೂಕಿನ ಗೋಳಿತ್ತೊಟ್ಟು ಮೂಲದ ಯು.ಟಿ. ಖಾದರ್ ಅವರು ವಿಧಾನಸಭೆಯಲ್ಲಿ ತುಳುವಿನಲ್ಲೇ ಮಾತನಾಡಿರುವ ಬಗ್ಗೆಯೂ ಖುಷಿಯಿದೆ ಎಂದರು. ಉಡುಪಿ, ಮಂಗಳೂರಿನ ಎಲ್ಲಾ ಶಾಸಕರು ಸೇರಿಕೊಂಡು ತುಳು ಭಾಷೆಯ ಬಗ್ಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇವೆ ಎಂದು ಖಾದರ್ ಹೇಳಿದರು.
ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ-ನಾನೀಗ ಸ್ಪೀಕರ್:
ಸಂದರ್ಶನದ ವೇಳೆ ಲೋಕಸಭೆ ಚುನಾವಣೆಯ ಬಗ್ಗೆ ಹಾಗೂ ಉಡುಪಿ ಕಾಲೇಜಿನ ವೀಡಿಯೋ ವಿವಾದದ ಬಗ್ಗೆ ಸುದ್ದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯು.ಟಿ.ಖಾದರ್ ಅವರು ನಾನು ರಾಜಕೀಯವನ್ನು ಮರೆತಿದ್ದೇನೆ. ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾಜಕೀಯ ಮಾತಾಡುವುದಿಲ್ಲ ಎಂದರು.
ತುಳುವಿನಲ್ಲೇ ಮಾತನಾಡಿದ ಖಾದರ್:
ಸುದ್ದಿ ನ್ಯೂಸ್ನ ವಿಶೇಷ ಸಂದರ್ಶನದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ತುಳುನಾಡಿನ ಬಗ್ಗೆ, ತುಳುವಿನ ಬಗ್ಗೆ ತುಳುವಿನಲ್ಲೇ ಮಾತನಾಡಿದರು. ಎಲ್ಲರೂ ಕೂಡ ಒಗ್ಗಟ್ಟಾಗಿ ತುಳು ಭಾಷೆಗೆ ರಾಜ್ಯಭಾಷೆಯ ಮಾನ್ಯತೆ ಬಗ್ಗೆ ಕಾರ್ಯೋನ್ಮುಖರಾಗುವ ಬಗ್ಗೆಯೂ ಮಾತನಾಡಿದ್ದಾರೆ. ಈ ಸಂದರ್ಶನವನ್ನು ಸಂಪೂರ್ಣವಾಗಿ ನೋಡಲು ಸುದ್ದಿ ನ್ಯೂಸ್ ಬೆಳ್ತಂಗಡಿ ಯೂ ಟ್ಯೂಬ್ವಾಹಿನಿ ವೀಕ್ಷಿಸಬಹುದು. ಖಾದರ್ ಅವರ ಸಂದರ್ಶನವನ್ನು ಈಗಾಗಲೇ ಸುದ್ದಿ ನ್ಯೂಸ್ ಬೆಳ್ತಂಗಡಿ ಯೂಟ್ಯೂಬ್ ವಾಹಿನಿಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.