ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗೆ ಶಿಕ್ಷೆಯಾಗುವಂತೆ ಪುತ್ತೂರಿನಲ್ಲಿ ಸಾಮೂಹಿಕ ಪ್ರಾರ್ಥನೆ

0

11 ವರ್ಷದ ಬಳಿಕ ದೇಶವೇ ಎದ್ದು ನಿಂತಿದೆ – ಕುಸುಮಾವತಿ
ಕರ್ನಾಟಕ ಸರಕಾರ ಮರು ತನಿಖೆ ಮಾಡಬೇಕು – ಸಂಜೀವ ಮಠಂದೂರು
ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆಯಾಗಲಿರುವ ನಂಬಿಕೆ – ಮುರಳಿಕೃಷ್ಣ ಹಸಂತಡ್ಕ

ಪುತ್ತೂರು: 2011ರಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣವು ಆದಷ್ಟು ಬೇಗ ಇತ್ಯರ್ಥವಾಗಿ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಪುತ್ತೂರಿನಲ್ಲಿ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದಿಂದ ಆ.7ರಂದು ಪುತ್ತೂರಿನಲ್ಲಿ ಕಾಲ್ನಡಿಗೆ ಮತ್ತು ಲಕ್ಷ್ಮೀವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.


ಬೆಳಿಗ್ಗೆ ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ನಂತರ ಅಲ್ಲಿಂದ ಬರಿ ಕಾಲಿನಲ್ಲೇ ಕಾಲ್ನಡಿಗೆ ಮೂಲಕ ಮುಖ್ಯರಸ್ತೆಯಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಅವರು ಭಾಗವಹಿಸಿ ಶ್ರೀ ಮಹಾಲಿಂಗೇಶ್ವರ ದೇವರ ಅಭಿಷೇಕ್ಕೆ ಸೀಯಾಳಾ ಸಮರ್ಪಣೆ ಮಾಡಿದರು. ಸೌಜನ್ಯ ತಂದೆ ಚಂದಪ್ಪ ಗೌಡ, ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಾಜಿ ಶಾಸಕ ಸಂಜೀವ ಮಠಂದೂರು, ವಿಶ್ವಹಿಂದು ಪರಿತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಕಾರ್ಯದರ್ಶಿ ಸತೀಶ್ ಭಟ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪರಮೇಶ್ವರಿ ಭಟ್ ಬಲ್ನಾಡು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಯಾದವ್, ಕೃಷ್ಣಪ್ರಸಾದ್ ಬೆಟ್ಟ, ಜನಾರ್ದನ ಬೆಟ್ಟ, ಶ್ರೀಧರ್ ತೆಂಕಿಲ, ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಸುರೇಶ್ ಆಳ್ವ, ನಾಗೇಶ್ ಟಿ.ಎಸ್, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ವಿಶಾಖ್ ರೈ, ಪ್ರಶಾಂತ್ ಕೆಮ್ಮಾಯಿ ಸಹಿತ ನೂರಾರು ಮಂದಿ ಕಾಲ್ನಡಿಗೆಯಲ್ಲಿ ಪಾಲ್ಗೊಂಡರು.


11 ವರ್ಷದ ಬಳಿಕ ದೇಶವೇ ಎದ್ದು ನಿಂತಿದೆ:
ಸಾಮೂಹಿಕ ಪ್ರಾರ್ಥನೆಯ ಸಂದರ್ಭ ಮಾಧ್ಯಮದೊಂದಿಗೆ ಸೌಜನ್ಯ ತಾಯಿ ಕುಸುಮಾವತಿ ಅವರು ಮಾತನಾಡಿ ಹೋರಾಟದಲ್ಲಿ ನ್ಯಾಯ ಸಿಗುವ ಭರವಸೆ ಇದೆ. ಯಾಕೆಂದರೆ 11 ವರ್ಷದ ಒಳಗೆ ಹೋರಾಟಕ್ಕೆ ಸೇರಿದ ಜನಕ್ಕಿಂತ 11 ವರ್ಷದ ಬಳಿಕ ಅದಕ್ಕಿಂತ ಹತ್ತು ಪಟ್ಟು ಜನರು ಬೆಂಬಲ ನೀಡಿರುವ ಮೂಲಕ ಇವತ್ತು ಇಡಿ ದೇಶವೇ ಎದ್ದು ನಿಂತಿದೆ. ಎಲ್ಲ ಜನರು ನಮ್ಮೊಂದಿಗೆ ಕೈಜೋಡಿಸಿ ಖಂಡಿತವಾಗಿಯೂ ನ್ಯಾಯ ದೊರಕಿಸಿ ಕೊಡುತ್ತಾರೆಂಬ ಭರವಸೆ ಇದೆ ಎಂದರು.


ಕರ್ನಾಟಕ ಸರಕಾರ ಮರು ತನಿಖೆ ಮಾಡಬೇಕು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿಜವಾದ ಅಪರಾಧಿ ಯಾರು ಎಂಬುದನ್ನು ತನಿಖೆ ಮಾಡಬೇಕಾಗಿದೆ ಅದಕ್ಕೆ ಬೇಕಾಗಿ ಸಮಾಜ ಒಟ್ಟಾಗಿ ನಿಜವಾದ ಅಪರಾಧಿ ಯಾರೆಂದು ಪತ್ತೆಯಾಗಬೇಕು. ಅಪರಾಧಿಗೆ ಯಾರ್‍ಯಾರು ಸಹಕಾರ ಮಾಡಿದ್ದಾರೋ ಅವರಿಗೂ ಶಿಕ್ಷೆಯಾಗಬೇಕು. ಅದಕ್ಕೆ ಬೇಕಾಗಿ ದೇವರ ಅನುಗ್ರಹ ಬೇಕೆಂದು ಪರಿವಾರದ ಬಂಧುಗಳು ಸೇರಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಹೇಳಿದರು.


ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆಯಾಗಲಿರುವ ನಂಬಿಕೆ:
ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಅವರು ಮಾದ್ಯಮದ ಜೊತೆ ಮಾತನಾಡಿದರು. ಸೌಜನ್ಯ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕೆಂದು ಮಂಗಳೂರು ವಿಭಾಗದ ವಿಹಿಂಪದಿಂದ ಎಲ್ಲಾ ದೇವಸ್ಥಾನ, ದೈವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ. ಸಾಮೂಹಿಕ ಪ್ರಾರ್ಥನೆಗೆ ಹೆಚ್ಚು ಶಕ್ತಿ ಇದೆ. ಅನ್ಯಾಯ ಮಾಡಿದ ವ್ಯಕ್ತಿಗಳಿಗೆ ಸರಿಯಾದ ಶಿಕ್ಷೆಯಾಗಲಿದೆ ಎಂದು ನಂಬಿಕೆಯಿಂದೆ ಎಂದರು.

ವಸಂತ ಬಂಗೇರ ಅವರು ತುಂಬಾ ಚೆನ್ನಾಗಿ ಹೇಳಿದ್ದಾರೆ:
ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರು ನಿನ್ನೆ ತುಂಬಾ ಚೆನ್ನಾಗಿ ಸಭೆಯಲ್ಲಿ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿಗೆ ಕರೆದು ಕೊಂಡು ಹೋಗಿ ಮನವಿ ಕೊಡಲು ಅವರು ಸಹಕರಿಸಿದ್ದಾರೆ. 11 ವರ್ಷದ ಹಿಂದೆಯೂ ಅವರು ಸಿಬಿಐ ತನಿಖೆಗೂ ಅವರೇ ಕೊಡಿಸಿದ್ದಾರೆ. ನಿನ್ನೆ ಅದೇ ಮಾತನ್ನು ಹೇಳಿದ್ದಾರೆ. ಸೌಜನ್ಯ ಕೊಲೆ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರವಿದೆ ಎಂದು ಸಭೆಯ ಮುಂದೆಯೇ ಹೇಳಿದ್ದಾರೆ. ಈ ಪ್ರಕರಣದಲ್ಲಿ ಯಾರ್‍ಯಾರು ಇದ್ದಾರೆ. ಇದನ್ನು ಮುಚ್ಚಿ ಹಾಕಲು ಯಾರು ಪ್ರಯತ್ನಿಸುತ್ತಿದ್ದಾರೆ ಅದೆಲ್ಲ ಅವರಿಗೆ ಗೊತ್ತಿದೆ. ಅವರೇ ಹೇಳೀದ ಹಾಗೆ ‘ನನ್ನನ್ನು ಕೊಂದರೆ ಹೋಯಿತು. ಇಲ್ಲದಿದ್ದರೆ ಖಂಡಿತವಾಗಿಯು ಮುಂದಿನ ಚುನಾವಣೆಯಲ್ಲಿ ಇದನ್ನು ಎಲ್ಲರ ಮುಂದೆ ಹೇಳುತ್ತೇನೆ’ ಎಂದು ಸಬೀಕರ ಮುಂದೆ ಹೇಳಿದ್ದಾರೆ. ಅವರು ಆ ಸತ್ಯವನ್ನು ಈಗಲೇ ಹೇಳಬೇಕೆಂದು ನಮ್ಮ ಒತ್ತಾಯವಿಲ್ಲ. ಕಾನೂನು ಪ್ರಕಾರ ಹೋರಾಟ ಮುಂದುವರಿಯಲಿದೆ. ಕಾನೂನು ಪ್ರಕಾರವೇ ನ್ಯಾಯ ಸಿಗಲಿ ಎಂದು ಸೌಜನ್ಯ ತಾಯಿ ಕುಸುಮಾವತಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here