ಆ.11ರಿಂದ ಮೂರು ದಿನ ಪುತ್ತೂರಿನಲ್ಲಿ ಪುಸ್ತಕ ಹಬ್ಬ, ಪುಸ್ತಕದಾನಿಗಳ ಮೇಳ, ಸಾಹಿತ್ಯ ವೈಭವ

0

ಪುತ್ತೂರು: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನೇತೃತ್ವದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಇವರ ಸಹಕಾರದೊಂದಿಗೆ ಯುವ ಜನತೆಯಲ್ಲಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಅವರನ್ನು ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ‘ಪುಸ್ತಕ ಹಬ್ಬ’, ‘ಪುಸ್ತಕದಾನಿಗಳ ಮೇಳ’ ಮತ್ತು ‘ಸಾಹಿತ್ಯ ವೈಭವ’ವು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಆ.11 ರಿಂದ 13 ರ ತನಕ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಆ.11ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಅವರು ದೀಪ ಪ್ರಜ್ವಲನೆ ಮಾಡಿ, ದ್ವಾರಕಾ ಕನ್ಸ್ ಸ್ಟ್ರಕ್ಷನ್ಸ್‌ನ ಮಾಲಕ ಗೋಪಾಲಕೃಷ್ಣ ಭಟ್ ಪುಸ್ತಕ ಮೇಳದ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ವಹಿಸಲಿದ್ದಾರೆ.ಪ್ರಥಮ ಪುಸ್ತಕ ದಾನಿಗಳಾದ ಪ್ರೊ.ಬಿ.ವಿ.ಅರ್ತಿಕಜೆ, ಹಿರಿಯ ವೈದ್ಯರಾದ ಡಾ.ಸುಧಾ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ಸಂಧ್ಯಾ ದತ್ತಾತ್ರೇಯ ರಾವ್ ಇವರ ‘ಸಕ್ಕರೆ ಗೊಂಬೆ’ (ಮಕ್ಕಳ ಕವನ ಸಂಕಲನ) ಹಾಗೂ ‘ಭಾವ ದ್ಯುತಿ’ (ಕವನ ಸಂಕಲನ) ಕೃತಿಗಳನ್ನು ಹಿರಿಯ ಸಾಹಿತಿಗಳಾದ ಡಾ.ಎಚ್.ಜಿ.ಶ್ರೀಧರ್ ಬಿಡುಗಡೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರಿಂದ ‘ಮಾಗಧ ವಧೆ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ ಎಂದು ಅವರು ಹೇಳಿದರು.


ಆ.12ರಂದು ಪೂರ್ವಾಹ್ನ ಗಂಟೆ 10 ಗಂಟೆಗೆ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರ ಯಶಸ್ ನೆಹರುನಗರ, ಪುತ್ತೂರು ಇವರ ಸಹಯೋಗದೊಂದಿಗೆ ಆಸಕ್ತ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಮತ್ತು ಸಾರ್ವಜನಿಕರಿಗೆ ಐ.ಎ.ಎಸ್- ಐ.ಪಿ.ಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ಹಾಗೂ ಐ.ಎ.ಎಸ್ ದರ್ಶನ ಎಂಬ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ ಗೊಳ್ಳಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಅವರು ಲೋಕಾರ್ಪಣೆ ಮಾಡಲಿದ್ದಾರೆ, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕಿ ಶೀಲತಾ ಅವರು ಹಾಗೂ ಕೃಷ್ಣನಾರಾಯಣ ಮುಳಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸುದಾನ ಕಿಟ್ಟೆಲ್ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಸಹಯೋಗದಲ್ಲಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಇವರ ಆತ್ಮಕಥನ ‘ದೀವಿಗೆ’ ಕೃತಿ ಲೋಕಾರ್ಪಣೆಗೊಳ್ಳಲಿದೆ. ಸಂಜೆ 4.30ಕ್ಕೆ ಹಿರಿಯ ಸಾಹಿತಿಗಳಾದ ತೀರ್ಥರಾಮ ವಳಲಂಬೆ ಇವರೊಂದಿಗೆ ‘ಪುನರ್ಜನ್ಮ’ ‘ಪುರುಷಾರ್ಥ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ ‘ಕುಶಲ ಹಾಸ್ಯಪ್ರಿಯರ ಸಂಘ’ದ ಸದಸ್ಯರಿಂದ ‘ಹಾಸ್ಯ ಸಂಜೆ’ ಕಾರ್ಯಕ್ರಮ ಜರಗಲಿದೆ ಎಂದು ಉಮೇಶ್ ನಾಯಕ್ ಹೇಳಿದರು.


ಆ.13ರಂದು ಪೂರ್ವಾಹ್ನ 10 ಗಂಟೆಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಹಿರಿಯ ಸಾಹಿತಿಗಳಾದ ಗಣೇಶ್ ಪ್ರಸಾದ್ ಪಾಂಡೆಯಲು ಅವರ ನೇತೃತ್ವದಲ್ಲಿ ‘ಕವಿಗೋಷ್ಠಿ’ ಹಾಗೂ ಮಧ್ಯಾಹ್ನ 3 ಗಂಟೆಗೆ ಪುತ್ತೂರಿನ ಸುನಾದ ಸಂಗೀತ ಶಾಲೆಯ ಕಾಂಚನ ಈಶ್ವರ ಭಟ್ ಶಿಷ್ಯ ವೃಂದದವರಿಂದ ‘ಸಂಗೀತ ಕಾರ್ಯಕ್ರಮ’ ನಡೆಯಲಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಬಜತ್ತೂರಿನ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿಯಾದ ಪುಷ್ಪಲತಾ ಎಂ. ಸಮಾರೋಪ ಭಾಷಣ ಮಾಡಲಿದ್ದಾರೆ. ಯಕ್ಷಗಾನ ಅರ್ಥದಾರಿ, ಸಮಾಜ ಸೇವಕರಾದ ಸೀತಾರಾಮ್ ಕುಂಜತ್ತಾಯ ಪಣಿಯೆ ಇವರಿಗೆ ‘ಅಡೂರು ಸೂರ್ಯನಾರಾಯಣ ಕಲ್ಲುರಾಯ ಸ್ಮರಣಾರ್ಥ’ ಪ್ರಶಸ್ತಿ ಪ್ರದಾನವನ್ನು ಪ್ರದೀಪ್ ಕುಮಾರ್ ಕಲ್ಕೂರ ಅವರು ನೆರೆವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಅವಿನಾಶ ಕೊಡಿಂಕಿರಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ನಾ.ಕಾರಂತ ಪೆರಾಜೆ ಮತ್ತು ದ.ಕ.ಜಿಲ್ಲಾ ಕ.ಸಾ.ಪ ಕಾರ್ಯಕಾರಿ ಸಮಿತಿ ಸದಸ್ಯ ಸುಂದರ ನಾಯ್ಕ್ ಭಾಗವಹಿಸಲಿದ್ದಾರೆ. ಸಂಜೆ 6 ಗಂಟೆಯಿಂದ ಸತೀಶ ಪುಣಿಂಚತ್ತಾಯ ಬಳಗದಿಂದ ಯಕ್ಷಗಾನ ಗಾನವೈಭವ ನಡೆಯಲಿದೆ ಎಂದು ಉಮೇಶ್ ನಾಯಕ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ತಾಲೂಕು ಗೌರವ ಕಾರ್ಯದರ್ಶಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಗೌರವ ಕೋಶಾಧ್ಯಕ್ಷ ಡಾ| ಹರ್ಷ ಕುಮಾರ್ ರೈ, ಜ್ಞಾನ ಗಂಗಾ ಪುಸ್ತಕ ಮಳಿಗೆಯ ಪ್ರಕಾಶ್ ಕೊಡಿಂಕಿರಿ ಉಪಸ್ಥಿತರಿದ್ದರು.

ರಾಜ್ಯದಲ್ಲೇ ಪ್ರಥಮ
“ಐಎಎಸ್ ದರ್ಶನ” ಉಚಿತ ಯುಟ್ಯೂಬ್ ಚಾನೆಲ್ ಲೋಕಾರ್ಪಣೆ ಬಹುಶಃ ರಾಜ್ಯದಲ್ಲೇ ಒಂದು ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ನೇತೃತ್ವದಲ್ಲಿ ಈ ಐ.ಎ.ಎಸ್ ಐ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತಾದ ಉಚಿತ ಮಾಹಿತಿ ನೀಡುವ ಯೂಟ್ಯೂಬ್ ಚಾನೆಲ್ ದರ್ಶನ್ ಘರ್ತಿಕೆರೆ ಅವರ ಸಂಚಾಲಕತ್ವದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಈಗಾಗಲೇ ವಿವೇಕಾನಂದ ಐಎಎಸ್ ಅಧ್ಯಯನ ಕೇಂದ್ರ ಯಶಸ್ ಸಹಯೋಗದಲ್ಲಿ ಐವತ್ತಕ್ಕೂ ಅಧಿಕ ಉಚಿತ ಕಾರ್ಯಗಾರವನ್ನು ನಡೆಸಿದ್ದು ಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ ಎಂದು ಉಮೇಶ್ ನಾಯಕ್ ತಿಳಿಸಿದ್ದಾರೆ.

ಪುಸ್ತಕಗಳಿಗೆ ರಿಯಾಯಿತಿ ದರ, ಪುಸ್ತಕ ದಾನಿಗಳ ಮೇಳ ವಿಶೇಷತೆ
ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರಿಗೂ ಒಂದು ಪುಸ್ತಕ ಉಚಿತವಾಗಿ ನೀಡಲಾಗುವುದು. ಪುಸ್ತಕ ಪ್ರದರ್ಶನದಲ್ಲಿ ಶೇ.10 ರಿಂದ 90ರ ತನಕ ರಿಯಾಯತಿ ದರದಲ್ಲಿ ಪುಸ್ತಕ ಮಾರಾಟ.


ಕಾರ್ಯಕ್ರಮದಲ್ಲಿ ಪುಸ್ತಕದ ದಾನಿಗಳ ಮೇಳ ಹಮ್ಮಿಕೊಂಡಿದ್ದೇವೆ ನಿಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ಅಥವಾ ನೀವು ರಚಿಸಿರುವ ಕೃತಿಯನ್ನು ಅಥವಾ ಖರೀದಿಸಿಯೂ ದಾನ ರೂಪದಲ್ಲಿ ನೀಡಿ ಬಹುದಾಗಿದೆ. ನೀವು ನೀಡುವ ಪುಸ್ತಕಗಳನ್ನು ನಮ್ಮ ಕಾರ್ಯಕ್ರಮದಲ್ಲಿ ನಿಮ್ಮ ಹೆಸರಿನಲ್ಲಿ ಹಂಚುತ್ತೇವೆ. ಹೆಚ್ಚುವರಿ ಬಂದಲ್ಲಿ ಶಾಲಾ-ಕಾಲೇಜುಗಳ ಗ್ರಂಥಾಲಯಗಳಿಗೆ ನೀಡುತ್ತೇವೆ. ಹೆಚ್ಚುವರಿ ಪುಸ್ತಕ ಇದ್ದಲ್ಲಿ ನಿಮ್ಮ ಮನೆಗೆ ಬಂದು ಸಂಗ್ರಹ ಮಾಡುತ್ತೇವೆ. ದೂರದ ಊರುಗಳಿಂದ ಪುಸ್ತಕದಾನ ಮಾಡುವ ದಾನಿಗಳು ಗುಡ್ಸ್ ಹಾಕಿದರೆ ಅದರ ವೆಚ್ಚವನ್ನು ನಾವು ಬರಿಸುತ್ತೇವೆ. ಪುಸ್ತಕದಾನವಾಗಿ ಕೊಡುವ ದಾನಿಗಳಿಗೆ ಮುಂದಿನ ದಿನದಲ್ಲಿ ಪುಸ್ತಕದಾನಿಗಳ ಸಮಾವೇಶ ಎಂಬ ಪ್ರತ್ಯೇಕ ಕಾರ್ಯಕ್ರಮ ಮಾಡಿ ಪುಸ್ತಕ ‘ಮಹಾದಾನಿ ಎಂಬ ಅಭಿನಂದನಾ ಪತ್ರ’ ನೀಡಿ ಗೌರವಿಸಲಾಗುವುದು. ಪುಸ್ತಕದಾನ ಮಾಡುವ ದಾನಿಗಳು ಕಾರ್ಯಕ್ರಮದ ಸಂಯೋಜಕರಾದ ಶಂಕರಿ ಶರ್ಮ 9449856033 ಹಾಗೂ ಶಾಂತ ಪುತ್ತೂರು 8277591731 ಅವರನ್ನು ಸಂಪರ್ಕಿಸಬಹುದು ಎಂದು ಉಮೇಶ್ ನಾಯಕ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here