ಪುತ್ತೂರು:ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ತಾಲೂಕು ಕಚೇರಿಯ ಭೂಮಿ ಶಾಖೆಯ ಕೇಸ್ ವರ್ಕರ್ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣದಲ್ಲಿ,ತಮ್ಮ ಮೇಲೂ ಪ್ರಕರಣ ದಾಖಲಾದ ಬಳಿಕ ತಹಶೀಲ್ದಾರ್ ಎಸ್.ಬಿ.ಕೂಡಲಗಿ ತಲೆಮರೆಸಿಕೊಂಡಿದ್ದು,ಹಲವು ದಿನಗಳಿಂದ ಕಚೇರಿಗೆ ಹಾಜರಾಗದೇ ಇರುವ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯ ವ್ಯವಸ್ಥಾಪಕರಾಗಿರುವ ಗ್ರೇಡ್-2 ತಹಶೀಲ್ದಾರ್ ನಾಗರಾಜ್‌ರವರಿಗೆ ಪ್ರಭಾರ ಹುದ್ದೆ ನೀಡಿ ದ.ಕ.ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ.ಆದೇಶಿಸಿದ್ದಾರೆ.
ತಹಶೀಲ್ದಾರ್ ಆಗಿದ್ದ ಪುರಂದರ ಹೆಗ್ಡೆಯವರು ಮೇ 31ರಂದು ವಯೋನಿವೃತ್ತಿ ಹೊಂದಿದ್ದರು.ಸಹಾಯಕ ಆಯುಕ್ತರ ಕಚೇರಿಯಲ್ಲಿ ವ್ಯವಸ್ಥಾಪಕರಾಗಿದ್ದ ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಅವರನ್ನು ಪ್ರಭಾರ ತಹಸಿಲ್ದಾರ್ ಆಗಿ ನಿಯುಕ್ತಿಗೊಳಿಸಲಾಗಿತ್ತು.ಆ ಬಳಿಕ,ಬಾಗಲಕೋಟೆ ಇಳಕಲ್ ಗ್ರೇಡ್-1 ತಹಸೀಲ್ದಾರ್ ಎಸ್.ಬಿ.ಕೂಡಲಗಿ ಅವರು ಪುತ್ತೂರಿಗೆ ವರ್ಗಾವಣೆಗೊಂಡು ಆಗಮಿಸಿ ಜೂ.26ರಂದು ಕರ್ತವ್ಯಕ್ಕೆ ಹಾಜರಾಗಿದ್ದರು.
ಲೋಕಾಯುಕ್ತ ಟ್ರ್ಯಾಪ್:
ಆ.28ರಂದು ಸಂಜೆ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿ ಭೂಮಿ ಶಾಖೆಗೆ ದಾಳಿ ನಡೆಸಿದ್ದರು.ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನು ಪರಭಾರೆಗೆ ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು,ಕೇಸ್ ವರ್ಕರ್ ಸುನಿಲ್ ಎಂಬವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ತಹಸಿಲ್ದಾರ್ ಎಸ್.ಬಿ.ಕೂಡಲಗಿ ಅವರ ವಿರುದ್ಧವೂ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು,ಈ ಪ್ರಕರಣದಲ್ಲಿ ತಹಸಿಲ್ದಾರ್ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು.ಆದರೆ, ಸದ್ಯ ತಹಸಿಲ್ದಾರ್ ತಲೆಮರೆಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದರು.
15 ದಿನಗಳಿಂದ ಕಚೇರಿಗೆ ಬಾರದ ತಹಸಿಲ್ದಾರ್:
ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡ ನಂತರದಿಂದ ತಹಸಿಲ್ದಾರ್ ಎಸ್.ಬಿ.ಕೂಡಲಗಿ ಅವರು ಕಳೆದ ಹದಿನೈದು ದಿನಗಳಿಂದ ಕಚೇರಿಗೆ ಬಾರದೆ ನಾಪತ್ತೆಯಾಗಿದ್ದಾರೆ.ತಹಸಿಲ್ದಾರ್ ಅವರಿಲ್ಲದೆ ಅನೇಕ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಗ್ರೇಡ್-2 ತಹಶೀಲ್ದಾರ್ ನಾಗರಾಜ್ ಅವರಿಗೆ ಮತ್ತೆ ತಹಸಿಲ್ದಾರ್ ಅವರ ಪ್ರಭಾರ ಜವಾಬ್ದಾರಿ ನೀಡಿ ಜಿಲ್ಲಾಽಕಾರಿಯವರು ಆದೇಶ ಮಾಡಿದ್ದಾರೆ.
ತನ್ನ ಚಿಕ್ಕಪ್ಪನಿಗೆ ಅಕ್ರಮ ಸಕ್ರಮದಲ್ಲಿ ಮಂಜೂರಾದ ಜಮೀನನ್ನು ಪರಭಾರೆ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಈಶ್ವರಮಂಗಲದ ಅಜಿತ್ ಎಂಬವರು ನೀಡಿದ್ದ ದೂರಿನ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕೇಸ್ ವರ್ಕರ್ ಸುನೀಲ್ ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು.ಆ.೨೮ರಂದು ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ತಾಲೂಕು ಕಚೇರಿಯ ಭೂಸುಧಾರಣಾ ಶಾಖೆಯ ಕೇಸ್ ವರ್ಕರ್ ಸುನೀಲ್ ದೂರುದಾರ ಅಜಿತ್ ಅವರಿಂದ ರೂ.12 ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಬಂಽಸಿದ್ದರು.ಆ ಬಳಿಕ ನಾಪತ್ತೆಯಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಈ ತನಕ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿದ್ದಾರೆ.