ಸವಣೂರು : 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಕು.ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆಯ ನೈಜ ಆರೋಪಿಗಳ ಶಿಕ್ಷೆಗೆ ಆಗ್ರಹಿಸಿ ಆ.7ರಂದು ಸವಣೂರಿನಲ್ಲಿ ಸವಣೂರು ಯುವಕ ಮಂಡಲ ಹಾಗೂ ಸಮಾನ ಮನಸ್ಕ ಬಂಧುಗಳ ವತಿಯಿಂದ ಪ್ರತಿಭಟನೆ ನಡೆಯಿತು.
ಸವಣೂರು ಬಸದಿ ಬಳಿಯಿಂದ ಬೆಳಿಗ್ಗೆ10 ರಿಂದ ಮೌನ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಸವಣೂರು ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಿತು. ಬಳಿಕ ಸವಣೂರು ಗ್ರಾ.ಪಂ.ಬಳಿ ಸೇರಿ ಅಭಿವೃದ್ಧಿ ಅಧಿಕಾರಿಯವರ ಮೂಲಕ ಸರಕಾರಕ್ಕೆ ,ರಾಜ್ಯಪಾಲರಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ದೈಪಿಲ ಕ್ರೀಡಾ ಸೇವಾ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ, ನಿವೃತ ಶಿಕ್ಷಕಿ ರೇವತಿ ಕುದ್ಮಾರು, ತಾ.ಪಂ.ಮಾಜಿ ಸದಸ್ಯೆ ವಿಜಯ ಈಶ್ವರ ಗೌಡ, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್, ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆ ಆಗುವವರೆಗೂ ಹೋರಾಟ ನಿಲ್ಲದು ಎಂದರು.
ಸವಣೂರು ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆಗೈದರು. ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ ಜಿ. ಸ್ವಾಗತಿಸಿ, ಕಾರ್ಯದರ್ಶಿ ಕೀರ್ತನ್ ಮೇಲಿನಮುಗ್ಗ ವಂದಿಸಿದರು.