ಕಡಬ: ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ(ಎನ್‌ಐಪಿಎಂ)ಇದರ ಕರ್ನಾಟಕ ಶಾಖೆಯ 2023-2025ರ ಸಾಲಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಯಾಗಿ ಕಡಬ ತಾಲೂಕಿನ ಐತ್ತೂರು ಗ್ರಾಮದ ಮಾಲ ಶೀನಪ್ಪ ಗೌಡರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎನ್‌ಐಪಿಎಂ ದೇಶದಾದ್ಯಂತ 55 ಶಾಖೆಗಳನ್ನು ಹೊಂದಿದ್ದು ಸುಮಾರು 12ಸಾವಿರ ಸದಸ್ಯರನ್ನು ಹೊಂದಿದೆ. ಇದೊಂದು ಲಾಭರಹಿತ ಸಂಸ್ಥೆಯಾಗಿದ್ದು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಉನ್ನತ ಮಟ್ಟದ ಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಸಾಧಿಸಲು ವೃತ್ತಿಪರ ನಿರ್ವಹಣೆಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು ಮತ್ತು ಸಹಾಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಶೀನಪ್ಪ ಗೌಡ ಅವರು ಕಳೆದ ಎರಡು ವರ್ಷಗಳಿಂದ ಎನ್‌ಐಪಿಎಂ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಷಯದ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿಗಳು, ವಿದ್ಯಾಲಯಗಳು ಮತ್ತು ಉದ್ಯೋಗದಾತರ ಸಮನ್ವಯತೆ ಮತ್ತು ಸಂಯೋಜನೆಯ ಜವಾಬ್ದಾರಿ ವಹಿಸಿಕೊಂಡು ಗಮನಾರ್ಹ ಸೇವೆ ಸಲ್ಲಿಸಿದ್ದರು.
ಕಡಬ ತಾಲೂಕು ಐತ್ತೂರು ಗ್ರಾಮದ ಮಾಲ ಮನೆಯ ದಿ.ಕೊರಗಪ್ಪ ಗೌಡ ಮತ್ತು ದಿ.ಶೇಸಮ್ಮ ದಂಪತಿ ಪುತ್ರರಾಗಿರುವ ಶೀನಪ್ಪ ಗೌಡರವರು ಪ್ರತಿಷ್ಠಿತ ಬಾಷ್ ಸಂಸ್ಥೆಯಲ್ಲಿ ೩೪ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ಬಾಷ್ ಸಂಸ್ಥೆಯ ಬೆಂಗಳೂರಿನ ನಾಗನಾಥಪುರ ಸ್ಥಾವರದಲ್ಲಿ ಮಾನವ ಸಂಪನ್ಮೂಲ ವಿಭಾಗದ ಕಾರ್ಮಿಕ ಸಂಬಂಧ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಷ್ ಸಂಸ್ಥೆಯಲ್ಲಿ ಉತ್ತಮ ಸೇವೆಗಾಗಿ 2006ರಲ್ಲಿ ಉತ್ತಮ ಉದ್ಯೋಗಿ ಪ್ರಶಸ್ತಿ, 2019ರಲ್ಲಿ ಸಂಸ್ಥೆಯ ವ್ಯವಹಾರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ವಿಶೇಷ ಸಾಧಕ ಪ್ರಶಸ್ತಿ, ೨೦೨೩ರಲ್ಲಿ ಸ್ಟಾರ್ ಹೆಚ್‌ಆರ್ ಪ್ರಶಸ್ತಿ ಪಡೆದುಕೊಂಡಿದ್ದರು. ಶೀನಪ್ಪ ಗೌಡರವರು ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೋಮಾ, ವ್ಯವಹಾರ ಹಾಗೂ ಆಡಳಿತ ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಹೊಂದಿದವರಾಗಿದ್ದಾರೆ.