ಪರಿಸರದ ಆರೋಗ್ಯ ಕಾಪಾಡುವವರ ಆರೋಗ್ಯ ಕಾಪಾಡುವುದು ಅಗತ್ಯ-ರುಡಾಲ್ಫ್ ನೊರೊನ್ಹಾ
ಅತ್ಯುತ್ತಮ ಸಂಸ್ಥೆಯಾಗಿ ಗುರುತಿಸಿಕೊಂಡ ಸಂಸ್ಥೆ – ಶಶಿಕುಮಾರ್ ರೈ ಬಾಲ್ಯೊಟ್ಟು
ಪುತ್ತೂರು: ಕುಂಬಾರ ಕುಶಲ ಕರ್ಮಿಗಳಿಗೆ ಸುಧಾರಿತ ವಿದ್ಯುತ್ ಚಾಲಿತ ಕುಂಬಾರಿಕಾ ಚಕ್ರ ಮತ್ತು ಟೂಲ್ ಕಿಟ್‌ಗಳ ವಿತರಣೆ ಕಾರ್ಯಕ್ರಮವು ಆ.11ರಂದು ಇಲ್ಲಿನ ಲಯನ್ಸ್ ಕ್ಲಬ್ ಹಾಲ್‌ನಲ್ಲಿ ನಡೆಯಿತು.
ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ.ಆರ್.ಪಿ.ಎಲ್. ಜನರಲ್ ಮ್ಯಾನೇಜರ್ ರುಡಾಲ್ಫ್ ನೊರೊನ್ಹಾ ಅವರು ಮಾತನಾಡಿ ಜನರ ಆರೋಗ್ಯ ಮಟ್ಟ ಸುಧಾರಿಸಬೇಕೆಂಬ ಹಿನ್ನೆಲೆಯಲ್ಲಿ ಹಲವು ಕಡೆ ಪೂರಕ ಕಾರ್ಯಕ್ರಮವನ್ನು ನಮ್ಮ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಹಮ್ಮಿಕೊಂಡಿತ್ತು. ಪರಿಸರಕ್ಕೆ ಹಾನಿಯಾಗದಂತೆ ಮಣ್ಣಿನ ಪರಿಕರಗಳನ್ನು ತಯಾರಿಸುವ ಮೂಲಕ ಕುಂಬಾರ ಸಮುದಾಯ ಆರೋಗ್ಯ ರಕ್ಷಣೆಯ ಕಾರ್ಯ ಮಾಡುತ್ತಿದ್ದು, ಅದಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೃತ್ತಿ ಬಾಂಧವರಿಗೆ ಕಿಟ್ ವಿತರಿಸಲಾಗಿದೆ ಎಂದರು.
ಅತ್ಯುತ್ತಮ ಸಂಸ್ಥೆಯಾಗಿ ಗುರುತಿಸಿಕೊಂಡ ಸಂಸ್ಥೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ಬಾಲ್ಯೊಟ್ಟು, ಎಂ.ಆರ್.ಪಿ.ಎಲ್. ಸಂಸ್ಥೆಯಿಂದ 5-6 ವರ್ಷಗಳಲ್ಲಿ ಸುಮಾರು ರೂ. 176 ಕೋಟಿಯನ್ನು ಸಮಾಜದ ಪ್ರಗತಿಯ ಉದ್ದೇಶಕ್ಕೆ ವಿನಿಯೋಗಿಸಲಾಗಿದೆ. ಸುಮಾರು 14 ಶಾಖೆಗಳನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ದ.ಕ. ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 10 ಮಂದಿ ಕುಂಬಾರ ಕುಶಲ ಕರ್ಮಿಗಳಿಗೆ ಸುಧಾರಿತ ವಿದ್ಯುತ್ ಚಾಲಿತ ಕುಂಬಾರಿಕಾ ಚಕ್ರ ಮತ್ತು ಟೂಲ್ ಕಿಟ್‌ಗಳ ವಿತರಣೆ ಮಾಡಲಾಯಿತು. ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಸಂಘದ ತಾಂತ್ರಿಕ ವಿಭಾಗದ ರಮೇಶ್ ನಡೆಸಿಕೊಟ್ಟರು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಉಪಾಧ್ಯಕ್ಷ ದಾಮೋದರ್, ಎಂ.ಆರ್.ಪಿ.ಎಲ್. ನ ಹಿರಿಯ ಮ್ಯಾನೇಜರ್ ಮನೀಷ್ ಗುಪ್ತ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.