ನೆಲ್ಯಾಡಿ ಶಾಲೆಯಲ್ಲಿ ‘ಪಿಎಂ ಶ್ರೀ ಶಾಲೆ’ ಉದ್ಘಾಟನೆ

0

ಯೋಜನೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಭಾಗೀರಥಿ ಮುರುಳ್ಯ

ನೆಲ್ಯಾಡಿ: ಕೇಂದ್ರ ಸರಕಾರದ ಪಿಎಂ ಶ್ರೀ ಯೋಜನೆಗೆ ಆಯ್ಕೆಗೊಂಡಿರುವ ನೆಲ್ಯಾಡಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ಪಿಎಂ ಶ್ರೀ ಯೋಜನೆಯ ಉದ್ಘಾಟನೆ ಆ.11ರಂದು ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಹಾಗೂ ಕಡಬ ತಾಲೂಕಿನ ನೆಲ್ಯಾಡಿ ಶಾಲೆ ಪಿಎಂ ಶ್ರೀ ಯೊಜನೆಗೆ ಆಯ್ಕೆಗೊಂಡಿವೆ. ಇದೊಂದು ಅದ್ಬುತ ಯೋಜನೆಯಾಗಿದ್ದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿದೆ. ವಿದ್ಯಾರ್ಥಿಗಳು ಕೇವಲ ಕಲಿಕೆಗೆ ಸೀಮಿತರಾಗದೆ ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಈ ಶಾಲೆ ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸಲಿ. ಇಲ್ಲಿ ಕಲಿಯುವ ಮಕ್ಕಳೂ ಉನ್ನತ ಹುದ್ದೆ ಅಲಂಕರಿಸುವಂತಾಗಲಿ ಎಂದರು.



ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರು ಮಾತನಾಡಿ, ಪುತ್ತೂರು ವಲಯದಲ್ಲಿ ವೀರಮಂಗಲ ಹಾಗೂ ನೆಲ್ಯಾಡಿ ಶಾಲೆ ಪಿಎಂ ಶ್ರೀ ಯೋಜನೆಗೆ ಆಯ್ಕೆಗೊಂಡಿದೆ. ಈ ಯೋಜನೆಗೆ ನೆಲ್ಯಾಡಿ ಶಾಲೆ ಆಯ್ಕೆಯಾಗುವಲ್ಲಿ ಇಲ್ಲಿನ ಶಿಕ್ಷಕ ವಿಮಲ್‌ಕುಮಾರ್ ಅವರ ಶ್ರಮ ಇದೆ. ಪಿಎಂ ಶ್ರೀ ಯೋಜನೆಗೆ ಆಯ್ಕೆಗೊಂಡಿರುವ ಶಾಲೆಗಳಿಗೆ ಅನುದಾನ ಬರಲು ಆರಂಭಗೊಂಡಿದ್ದು ಮೊದಲ ಹಂತದಲ್ಲಿ 56 ಲಕ್ಷ ರೂ.,ಅನುದಾನ ಬಂದಿದೆ. ಮುಂದಿನ 5 ವರ್ಷಗಳಲ್ಲಿ ಸಂಪೂರ್ಣ ಬದಲಾವಣೆಯಾಗಲಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಎಲ್ಲಾ ಸೌಲಭ್ಯಗಳೂ ಸಿಗಲಿವೆ ಎಂದರು.


ಬೀಳ್ಕೊಡುಗೆ/ಸನ್ಮಾನ:
ನೆಲ್ಯಾಡಿ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದು ಕಡಬ ಶಾಲೆಗೆ ವರ್ಗಾವಣೆಗೊಂಡಿರುವ ಆನಂದ ಅಜಿಲ ಅವರಿಗೆ ಬೀಳ್ಕೊಡುಗೆಯೂ ಈ ಸಂದರ್ಭದಲ್ಲಿ ನಡೆಯಿತು. ಶಾಸಕಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನೆಲ್ಯಾಡಿ ಶಾಲೆಗೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ಪ್ರಸನ್ನ ಅವರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.

ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಸಭೆಯ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ವರ್ಗಾವಣೆಗೊಂಡ ಮುಖ್ಯಶಿಕ್ಷಕ ಆನಂದ ಅಜಿಲ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸಿಆರ್‌ಪಿ ಪ್ರಕಾಶ್ ಬಾಕಿಲ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಎಸ್‌ಡಿಎಂಸಿ ಅಧ್ಯಕ್ಷ ಬಿನೋಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಭಾರ ಮುಖ್ಯಶಿಕ್ಷಕಿ ವೀಣಾ ಮಸ್ಕರೇನಸ್ ಸ್ವಾಗತಿಸಿ, ಎಸ್‌ಡಿಎಂಸಿ ಸದಸ್ಯ ಪ್ರಸಾದ್ ಕೆ.ಪಿ.ವಂದಿಸಿದರು. ಸಹಶಿಕ್ಷಕ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅತಿಥಿಗಳಿಗೆ ಆಟಿ ತಿಂಗಳ ಖಾದ್ಯದ ಉಪಹಾರ ನೀಡಲಾಯಿತು. ಪ್ರಾಚ್ಯವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪಿಎಂ ಶ್ರೀ ಯೋಜನೆಯ ಕುರಿತ ಮತ್ತು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ವರ್ಗಾವಣೆಗೊಂಡ ಮುಖ್ಯಶಿಕ್ಷಕ ಆನಂದ ಅಜಿಲ ಅವರ ಸಾಧನೆಯ ಕುರಿತ ವಿಡಿಯೋ ಪ್ರದರ್ಶನವೂ ಮಾಡಲಾಯಿತು.

LEAVE A REPLY

Please enter your comment!
Please enter your name here