ಪುತ್ತೂರು: ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಪ್ರೀತ್ ಕಣ್ಣಾರಾಯ ನೇತೃತ್ವದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುಮಾರು 30 ವರ್ಷಗಳಂದ ಕಾರ್ಯನಿರ್ವಹಿಸುತ್ತಿದ್ದು, ಸದ್ರಿ ಆರೋಗ್ಯ ಕೇಂದ್ರವು 5 ಉಪಕೇಂದ್ರಗಳನ್ನು ಹೊಂದಿದ್ದು 3 ಆರೋಗ್ಯ ಸುರಕ್ಷಾಧಿಕಾರಿ ಹುದ್ದೆ ಖಾಲಿ ಇರುತ್ತದೆ, ಹಾಗೂ 5 ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ ಮಂಜೂರಾಗಿದ್ದರೂ ಸದ್ರಿ ಹುದ್ದೆಗಳು ಕೂಡಾ ಖಾಲಿ ಇದೆ. ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿ ಗ್ರೂಪ್ನ ಸಿಬ್ಬಂದಿಯೋರ್ವರು ಕೆಲವು ದಿನಗಳ ಹಿಂದೆ ನಿಧನ ಹೊಂದಿದ್ದು ಈ ಹುದ್ದೆ ಕೂಡಾ ಖಾಲಿ ಇದೆ. ಕೇಂದ್ರದಲ್ಲಿ ಈ ತನಕ ಹಿರಿಯ ಮಹಿಳಾ ಪ್ರಾಥಮಿಕ ಸುರಕ್ಷಾಧಿಕಾರಿ ಹಾಗೂ ಒಂದು ಹೆಚ್ಚುವರಿ ಗ್ರೂಪ್ ಡಿ ಹುದ್ದೆಯ ಜೊತೆಯಲ್ಲಿ ಶುಶ್ರೂಷಕಿ ಹುದ್ದೆಯು ಇಲ್ಲದೇ ಇರುವುದರಿಂದ ತೊಂದರೆಯುಂಟಾಗಿದೆ. ಆದುದರಿಂದ ತಾವು ಈ ಬಗ್ಗೆ ಪರಿಶೀಲಿಸಿ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಹಿರಿಯ ಮಹಿಳಾ ಸುರಕ್ಷಾಧಿಕಾರಿ ಹುದ್ದೆ, ಶುಶ್ರೂಷಕಿ ಹುದ್ದೆ, ಹಾಗೂ ಹೆಚ್ಚುವರಿಯಾಗಿ ಒಂದು ಮಹಿಳಾ ಡಿ ದರ್ಜೆಯ ಸಿಬ್ಬಂದಿಯ ಹುದ್ದೆಯನ್ನು ಮಂಜೂರು ಮಾಡಬೇಕು ಮತ್ತು ಸದ್ರಿ ಹುದ್ದೆಗೆ ನೇಮಕಾತಿಯನ್ನು ಮಾಡಬೇಕು. ಆರೋಗ್ಯ ಕೇಂದ್ರವು ಗ್ರಾಮಾಂತರದಲ್ಲಿರುವುದರಿಂದ ಸುಮಾರು 5 ಕ್ಕೂ ಮೇಲ್ಪಟ್ಟು ಗ್ರಾಮಗಳಿಂದ ಕೂಡಿದ್ದು, ಸದ್ರಿ ಕೇಂದ್ರದಲ್ಲಿ ಬಹಳಷ್ಟು ಪ.ಜಾತಿ, ಪ.ಪಂ ಕುಟುಂಬದವರು ವಾಸ್ತವ್ಯ ಇದ್ದು 21,104 ಜನಸಂಖ್ಯೆ ಹೊಂದಿದೆ. ಆದುದರಿಂದ ಈ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಕೆಮ್ಮಿಂಜೆ ಬೂತ್ ಅಧ್ಯಕ್ಷ ಗಣೇಶ್ ಬಂಗೇರ ಕೊರಂಗು, ಪ್ರವೀಣ್ ಆಚಾರ್ಯ ನರಿಮೊಗರು, ಆಸಿಫ್ ಕಂಪ, ಅನೀಸ್ ಕಂಪ ಇದ್ದರು.