ಪುತ್ತೂರು: ಶ್ರೀದೇವತಾ ಸಮಿತಿ ಕಿಲ್ಲೆ ಮೈದಾನ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ಕಿಲ್ಲೆ ಮೈದಾನದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ 66ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮವು ಸೆ.19ರಿಂದ 25ರ ತನಕ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವತಾ ಸಮಿತಿಯ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಅವರು ತಿಳಿಸಿದ್ದಾರೆ. ದೇವತಾ ಸಮಿತಿ ಅಧ್ಯಕ್ಷ ಎನ್ ಸುಧಾಕರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಏಳು ದಿನಗಳ ಕಾಲ ನಡೆಯುವ ಮಹಾಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಗಳ ಕಾರ್ಯಕ್ರಮಗಳಾದ ಭಜನೆ, ಭರತನಾಟ್ಯ, ಸ್ಯಾಕ್ಸೋಫೋನ್ ವಾದನ, ನಾಟಕ ನಾಟ್ಯರಂಗ, ಯಕ್ಷಗಾನ, ಮೂಡಪ್ಪ ಸೇವೆ, 108 ಕಾಯಿಗಳ ಗಣಪತಿ ಹೋಮ, ತುಲಾಭಾರ, ಪ್ರತಿದಿನ ದೇವರ ನೈವೇದ್ಯ, ಅನ್ನ ಸಂತರ್ಪಣೆ ಮೊದಲಾದ ಕಾರ್ಯಕ್ರಮಗಳನ್ನು ಏಳು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಯಿತು.
ನಾಗರ ಪಂಚಮಿಯ ದಿನದಂದು ಗಣೇಶನ ಮೂರ್ತಿ ರಚನೆಗೆ ಮುಹೂರ್ತ ನಿಗದಿಪಡಿಸಲಾಯಿತು. ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಪೈಕಾಂಪ್ಲೆಕ್ಸ್ನಲ್ಲಿ ಮೂರ್ತಿಯ ರಚಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ರಮೇಶ್, ಕೋಶಾಧಿಕಾರಿ ಶ್ರೀಧರ ನಾಯಕ, ಗಣೇಶ್ ಶೆಟ್ಟಿ, ನೆಲ್ಲಿಕಟ್ಟೆ, ಗಣಪತಿ ಪೈ, ಸೀತಾರಾಮ ಶೆಟ್ಟಿ, ದಿನೇಶ್ವಿನಿ, ಸುದರ್ಶನ್, ಸುದೇಶ್ ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು
ಸಂತಾಪ: ಆರಂಭದಲ್ಲಿ ದೇವತಾ ಸಮಿತಿಯ ಸದಸ್ಯರಾಗಿದ್ದು ಇತ್ತೀಚೆಗೆ ನಿಧನರಾದ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ ಸಹಿತ ಹಲವಾರು ಮಂದಿಗೆ ಸಂತಾಪ ಸೂಚಿಸಲಾಯಿತು ಎಂದು ಸುಧಾಕರ್ ಶೆಟ್ಟಿ ಅವರು ತಿಳಿಸಿದರು.
ವಿಶೇಷ ಕಾರ್ಯಕ್ರಮ ಮೂಡಪ್ಪ ಸೇವೆ
ಪ್ರತಿ 5 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ವಿಶೇಷ ಸೇವೆಯಾದ ಮೂಡಪ್ಪ ಸೇವೆ ಕೂಡ ಈ ವರ್ಷದ ವಿಶೇಷ ಕಾರ್ಯಕ್ರಮವಾಗಿದೆ.