





ಪುತ್ತೂರು: 20ರ ಸಂಭ್ರಮದಲ್ಲಿರುವ ಪುತ್ತೂರು ಅಸೋಸಿಯೇಷನ್ ಆಫ್ ಸಿವಿಲ್ ಎಂಜಿನಿಯರ್ಸ್ (ರಿ) ಇದರ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು. ನ.5ರ ಸಂಜೆ ನೆಹರುನಗರ ಮಾಸ್ಟರ್ ಪ್ಲಾನರಿಯ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಿತು.



ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಸಿವಿಲ್ ಎಂಜಿನಿಯರ್ ಲಕ್ಷ್ಮೀಶ ಯಡಿಯಾಲ್ ಮಾತನಾಡಿ, ಕಳೆದ ಇಪ್ಪತ್ತು ವರ್ಷಗಳಿಂದ ಅತ್ಯುತ್ತಮ ಸಂಘಟನೆಯಾಗಿ ಗುರುತಿಸಿಕೊಂಡಿರುವ ಪೇಸ್ ಪುತ್ತೂರಿನ ಪ್ರದೇಶಗಳಲ್ಲಿ ಇನ್ನಷ್ಟೂ ಪ್ರಬಲವಾಗಲಿಯೆಂದು ಆಶಯ ವ್ಯಕ್ತಪಡಿಸಿದರು. ಇಂಜಿನಿಯರಿಂಗ್ ಬಗ್ಗೆ ಯಾರೂ ಕೂಡ ಸಂಪೂರ್ಣ ಬಲ್ಲವರಾರಿಲ್ಲ ಮತ್ತು ನಾವೆಲ್ಲರೂ ಇನ್ನೊಬ್ಬರ ಹಣವನ್ನು ಖರ್ಚು ಮಾಡುವವರು. ಆದರಿಂದ ಇನ್ನೊಬ್ಬರ ಹಣದ ರಕ್ಷಣೆಯೂ ನಮ್ಮೆಲ್ಲರ ಜವಾಬ್ದಾರಿಯಾಗಿರಲಿ ಮತ್ತು ನಿಮ್ಮ ಕೆಲಸದಲ್ಲಿ ಆ ಹಣವನ್ನು ಯೋಗ್ಯ ರೀತಿಯಲ್ಲಿ ಅತೀ ಜಾಣ್ಮೆಯಿಂದ ಬಳಕೆ ಮಾಡಿ. ಇವನ್ನೆಲ್ಲಾ ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುವುದು ಪ್ರಮುಖ ಧ್ಯೇಯವಾಗಬೇಕು. ಇಂದು ನಾವು ನಿರ್ಮಿಸುವಂತಹ ಯಾವುದೇ ಕಟ್ಟಡಗಳು ನಮ್ಮ ಜೀವಿತಾವಧಿಯಲ್ಲಿ ಬೀಳಬಾರದು ಮತ್ತು ನಾವು ಮಾಡುವಂತಹ ಕೆಲಸ ಇನ್ನೊಬ್ಬರಿಗೆ ತೃಪ್ತಿಕರವಾಗಿರಬೇಕು ಎಂದು ಹೇಳಿದರು. ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿರುವ ಎಲ್ಲ ಸಿವಿಲ್ ಇಂಜಿನಿಯರುಗಳನ್ನು ಒಟ್ಟುಗೂಡಿಸುವಂತಹ ಕಾರ್ಯ ಪೇಸ್ ವತಿಯಿಂದ ನಡೆಯಲಿ, ಅದೇ ರೀತಿ ಅಂತಿಮ ಹಂತದ ಸಿವಿಲ್ ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೆಲ್ಲರನ್ನೂ ಕೂಡ ಪೇಸ್ ಸದಸ್ಯರನ್ನಾಗಿ ಮಾಡುವ ಕಾರ್ಯಕ್ಕೆ ವೇಗ ಸಿಗಲಿಯೆಂದು ಶುಭ ಹಾರೈಸಿದರು.





ಇನ್ನೋರ್ವ ಅತಿಥಿ ಉದ್ಯಮಿ ಸಂತೋಷ್ ಪೈ ಹಾಗೂ ಪೇಸ್ ನ ಸ್ಥಾಪಕ ಅಧ್ಯಕ್ಷರೂ ಮತ್ತು ಗೌರವ ಅಧ್ಯಕ್ಷರಾಗಿರುವ ಮಾಸ್ಟರ್ ಪ್ಲಾನರಿಯ ಆಡಳಿತ ನಿರ್ದೇಶಕ ಎಸ್. ಕೆ ಆನಂದರವರು ಕೂಡ ಶುಭವನ್ನು ಹಾರೈಸಿದರು. ಇದಕ್ಕೂ ಮೊದಲು ದೇಶ ಕಂಡಂತಹ ಅಪ್ರತಿಮ, ಅದ್ಭುತ ಇಂಜಿನಿಯರ್ ಸರ್.ಎಂ ವಿಶ್ವೇಶ್ವರಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ದೀಪ ಪ್ರಜ್ವಲನೆ ನೆರವೇರಿಸಿ ಗೌರವ ಸಲ್ಲಿಸಲಾಯಿತು.
ನಂತರ ನೂತನ ಸಾಲಿನ ಅಧ್ಯಕ್ಷ ಎಸ್.ಕೆ ಅರ್ಜುನ್ ಮತ್ತು ಸಂಘಟನೆ ಕಾರ್ಯದರ್ಶಿ ಪ್ರತೀಕ್ ಪಿ.ಜಿ ಮತ್ತು ತಂಡದ ಸದಸ್ಯರನ್ನು ನಿಕಟಪೂರ್ವ ಅಧ್ಯಕ್ಷ ಸತ್ಯಗಣೇಶ ಎಂ ಬಳಗ ಅಭಿನಂದಿಸಿ, ಅಧಿಕಾರ ಹಸ್ತಾಂತರಿಸಿದರು. ಗೌರವಾಧ್ಯಕ್ಷರಾದ ಎಸ್.ಕೆ ಆನಂದ್ ಅವರನ್ನು ನೂತನ ಸಾಲಿನ ಪದಾಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಜೊತೆಗೂಡಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ಈ ವೇಳೆ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಸನ್ನ ಭಟ್, ವಸಂತ್ ಭಟ್, ಸಂತೋಷ್ ಶೆಟ್ಟಿ, ಕೇಶವ ಭಟ್ ರವಿರಾಜ್ ಎಸ್, ರವೀಂದ್ರ ಪಿ, ಸತ್ಯನಾರಾಯಣ, ಶಂಕರ್ ಭಟ್, ರಮೇಶ್ ಭಟ್, ಅಕ್ಷಯ ಎಸ್.ಕೆ ಮತ್ತು ಸತ್ಯ ಗಣೇಶ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಸತ್ಯ ಗಣೇಶ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ, ನೂತನ ಸಮಿತಿಗೆ ಸಂಪೂರ್ಣ ಸಹಕಾರ, ಸಹಾಯದ ಭರವಸೆ ನೀಡಿ ಹಾರೈಸಿದರು. ನೂತನ ಸಾಲಿನ ಅಧ್ಯಕ್ಷ ಅರ್ಜುನ್ ಎಸ್ ಕೆ, ಕಾರ್ಯದರ್ಶಿ ಪ್ರತೀಕ್ ಪಿ ಜಿ ,ಉಪಾಧ್ಯಕ್ಷ ದಿನೇಶ್ ವಿ ಭಟ್,ಅಕ್ಷಯ್ ಎಸ್ ಕೆ, ಶ್ರೀಕಾಂತ್ ಕೊಳತ್ತಾಯ, ಶಿವಪ್ರಸಾದ್ ಟಿ ಮತ್ತು ಆಕರ್ಷ್ ಬಿಎಸ್ ವೇದಿಕೆಯಲ್ಲಿ ಹಾಜರಿದ್ದರು. ಮಾಜಿ ಅಧ್ಯಕ್ಷ ವಸಂತ ಭಟ್ ಮತ್ತು ಆಕಾಶ್ ಎಸ್.ಕೆ ಅತಿಥಿಗಳ ಪರಿಚಯ ಮಾಡಿದರು.
ಸಂಘದ ಸ್ಥಾಪಕ ಕಾರ್ಯದರ್ಶಿ ಮಾಜಿ ಅಧ್ಯಕ್ಷ ರವೀಂದ್ರ ಪಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿರ್ದೇಶಕ ಆಕರ್ಷ್ ಬಿ.ಎಸ್ ಪ್ರಾರ್ಥನೆ ನೆರವೇರಿಸಿ, ಮಾಜಿ ಅಧ್ಯಕ್ಷ ಸತ್ಯನಾರಾಯಣ ಭಟ್ ಸ್ವಾಗತಿಸಿ, ಹರೀಶ್ ಪುತ್ತೂರಾಯ ಮತ್ತು ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರತೀಕ್ ವಿ ಜಿ ಧನ್ಯವಾದ ಅರ್ಪಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡು ಬಳಿಕ ಸವಿ ಭೋಜನ ನೆರವೇರಿತು.
ನೂತನ ಸದಸ್ಯರ ಸೇರ್ಪಡೆ….
ಪ್ರಥಮ ಮಹಿಳಾ ಸದಸ್ಯೆಯಾಗಿ ಆರತಿ ಎಸ್.ಕೆ ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಶ್ಯಾಮ್ ಕುಮಾರ್, ವಿದ್ಯಾಧರ್ ಶರ್ಮ, ಆದಿತ್ಯ ರಾವ್, ಆಯುಶ್ ಮತ್ತು ಧನ್ವಿತ್ ಇವರನ್ನು ಪೇಸ್ ಸದಸ್ಯರಾಗಿ ಸೇರ್ಪಡೆಗೊಂಡರು.
ಸಿಬ್ಬಂದಿಗಳಿಗೆ ಸನ್ಮಾನ ….
ಮಾಸ್ಟರ್ ಪ್ಲಾನರಿಯಲ್ಲಿ ಸುಮಾರು 47 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಭಟ್ ಮತ್ತು 49 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪ್ರಭಾಕರ ಎಂ.ಎನ್ ಇವರುಗಳನ್ನು ಪೇಸ್ ವತಿಯಿಂದ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
- ಪೇಸ್ನಿಂದ ಪ್ರತಿ ವರ್ಷ 15 ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್ ವ್ಯವಸ್ಥೆ
- ಮುಂದಿನ ದಿನಗಳಲ್ಲಿ ಸಿವಿಲ್ ಇಂಜಿನಿಯರ್ ಸಹಿತ ಅಂತಿಮ ಪದವಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಪೇಸ್ ಸದಸ್ಯತ್ವ ಕಲ್ಪಿಸುವ ಭರವಸೆ.
ತುಂಬು ಹೃದಯದ ಸಹಕಾರವಿರಲಿ….
ಅಧ್ಯಕ್ಷ ಸ್ಥಾನವನ್ನು ನೀಡಿರುವುದಕ್ಕೆ ಪೇಸ್ ನ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸದಸ್ಯ ತಂಡಕ್ಕೆ ನಮನ ಸಲ್ಲಿಸುವೆ. ಕೊಟ್ಟಿರುವಂತಹ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವೆನು ಹಾಗೂ ನಿಮ್ಮೆಲರ ತುಂಬು ಹೃದಯದ ಸಹಕಾರವು ಸದಾವಿರಲಿ.
ಅರ್ಜುನ್ ಎಸ್.ಕೆ
ನೂತನ ಅಧ್ಯಕ್ಷ










