ಪಂಚಾಯತ್ ಅಭಿವೃದ್ಧಿ ಕಾಮಗಾರಿಗಳಿಗೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಅಡ್ಡಿ…!
ಬೋಳೋಡಿಯಲ್ಲಿರುವ 40 ಎಕರೆ ಗೋಮಾಳ ಜಾಗದ ತನಿಖೆಗೆ ಲೋಕಾಯುಕ್ತಕ್ಕೆ ಬರೆಯಲು ನಿರ್ಣಯ
ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ಗೆ ಒಳಪಟ್ಟ ಸುಮಾರು 40 ಎಕರೆ ವಿಸ್ತ್ರೀರ್ಣವಿರುವ ಗೋಮಾಳ ಜಾಗವು ಗ್ರಾಮದ ಬೋಳೋಡಿ ಎಂಬಲ್ಲಿ ಇದ್ದು ಈ ಜಾಗವನ್ನು ಸಾಮಾಜಿಕ ಅರಣ್ಯ ಇಲಾಖೆಯವರು ತಮ್ಮ ಜಾಗ, ಇಲ್ಲಿ ನಾವು ನೆಡುತೋಪು ಮಾಡಿದ್ದೇವೆ ಎಂದು ಹೇಳಿಕೊಂಡು ಪಂಚಾಯತ್ನ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ ಬರುತ್ತಿದ್ದಾರೆ.ಇದರಿಂದ ಪಂಚಾಯತ್ನ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆಯಾಗುತ್ತಿದ್ದು ಆದ್ದರಿಂದ ಬೋಳೋಡಿಯಲ್ಲಿರುವ 40 ಎಕರೆ ಗೋಮಾಳದ ಜಾಗದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಬರೆದುಕೊಳ್ಳುವುದು ಎಂದು ಗ್ರಾಮಸ್ಥರ ಆಗ್ರಹದ ಮೇರೆಗೆ ಕೆದಂಬಾಡಿ ಗ್ರಾಮಸಭೆಯಲ್ಲಿ ನಿರ್ಣಯ ದಾಖಲಿಸಿಕೊಳ್ಳಲಾಯಿತು.
ಸಭೆಯು ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರರವರ ಅಧ್ಯಕ್ಷತೆಯಲ್ಲಿ ಆ.14 ರಂದು ಗ್ರಾಪಂ ಸಭಾಭವನದಲ್ಲಿ ನಡೆಯಿತು. ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈಯವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು. ಸಭೆಯ ವರದಿ ಮಂಡನೆ ವೇಳೆ ಗ್ರಾಪಂ ಮಾಜಿ ಸದಸ್ಯ ರಾಘವ ಗೌಡ ಕೆರೆಮೂಲೆಯವರು ವಿಷಯ ಪ್ರಸ್ತಾಪಿಸಿ, ಬೋಳೋಡಿಯಲ್ಲಿ ಸುಮಾರು 40 ರಿಂದ 60 ಎಕರೆಯಷ್ಟು ಪಂಚಾಯತ್ಗೆ ಸಂಬಂಧಪಟ್ಟ ಗೋಮಾಳ ಜಾಗವಿದೆ. ಆದರೆ ಇಲ್ಲಿ ಯಾವುದೇ ಕಾಮಗಾರಿ ನಡೆಯಲು ಸಾಮಾಜಿಕ ಅರಣ್ಯ ಇಲಾಖೆಯವರು ಅಡ್ಡಿ ಪಡಿಸುತ್ತಿದ್ದಾರೆ. ಇದು ನಮ್ಮ ಜಾಗ ನಾವು ಇಲ್ಲಿ ನೆಡುತೋಪು ರಚಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಮರಗಳೇ ಇಲ್ಲ, ನೆಡುತೋಪು ರಚಿಸಿರುವ ಬಗ್ಗೆ ಬಂದು ಮರಗಳನ್ನು ತೋರಿಸಿ ಎಂದು ಕೇಳಿಕೊಂಡರು ಇಲಾಖೆಯವರು ಬರುತ್ತಿಲ್ಲ, ಇದಲ್ಲದೆ ಈ ಹಿಂದೆ ಈ ಜಾಗದಲ್ಲಿ ನೆಡುತೋಪು ಮಾಡಲಾಗಿದ್ದು ಇದನ್ನು 2012-13 ರಲ್ಲಿ ಅರಣ್ಯ ಇಲಾಖೆಯವರು ಕಟಾವು ಮಾಡಿದ್ದಾರೆ. ಆದರೆ ಕಟಾವು ಮಾಡಿದ್ದರಲ್ಲಿ ಪಂಚಾಯತ್ಗೆ ಸಲ್ಲತಕ್ಕ 10 ಲಕ್ಷ ರೂಪಾಯಿ ಹಣವನ್ನು ಇದುವರೇಗೆ ಪಂಚಾಯತ್ಗೆ ಸಂದಾಯ ಮಾಡಿಲ್ಲ, ಕಟಾವು ಮಾಡಿದ ಬಳಿಕ ಮತ್ತೆ ಇದರಲ್ಲಿ ನೆಡುತೋಪು ರಚಿಸಲು ಪಂಚಾಯತ್ನಿಂದ ಯಾವುದೇ ಪರವಾನಗೆ ತೆಗೆದುಕೊಂಡಿಲ್ಲ ಹೀಗಿದ್ದರೂ ಇದು ತಮ್ಮ ಜಾಗ ಎಂದು ಹೇಳಿಕೊಳ್ಳುತ್ತಿರುವ ಸಾಮಾಜಿಕ ಅರಣ್ಯ ಇಲಾಖೆಯಿಂದ ಪಂಚಾಯತ್ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದರು.
ಮರಗಳೇ ಇಲ್ಲ…!?
ಸಾಮಾಜಿಕ ಅರಣ್ಯ ಇಲಾಖೆಯವರು ಈ ಜಾಗದಲ್ಲಿ ನೆಡುತೋಪು ರಚಿಸಿದ್ದೇವೆ ಎಂದು ಹೇಳುತ್ತಿದ್ದರೂ ಇಲ್ಲಿ ಮರಗಳೇ ಇಲ್ಲ? ಒಂದು ವೇಳೆ ಗಿಡಗಳನ್ನು ನಾಟಿ ಮಾಡಿದ್ದರೂ ಅದು ಪೋಷಣೆ ಇಲ್ಲದೆ ಸತ್ತು ಹೋಗಿರಬಹುದು, ಹೀಗಿರುವಾಗ ಪಂಚಾಯತ್ ಜಾಗದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯವರು ಅಡ್ಡಿ ಪಡಿಸುವುದು ಸರಿಯಲ್ಲ ಎಂದ ರಾಘವ ಗೌಡ ಕೆರೆಮೂಲೆಯವರು, ಕೆಎಂಎಫ್ನವರು ಈ ಜಾಗದಲ್ಲಿ ತಮ್ಮ ಕಾರ್ಖಾನೆ ಆರಂಭಿಸಲು ಮುಂದಾದಾಗ ಸಾಮಾಜಿಕ ಅರಣ್ಯ ಇಲಾಖೆಯವರು ಇದು ನಮ್ಮ ಜಾಗ ಎಂದು ಹೇಳಿಕೊಂಡು ಗ್ರಾಮದ ಅಭಿವೃದ್ಧಿಗೆ ಅಡ್ಡಿ ಬಂದಿದ್ದಾರೆ. ಆದ್ದರಿಂದ ಈ ಜಾಗದ ಬಗ್ಗೆ ಸೂಕ್ತ ತನಿಖೆಯಾಗಬೇಕು ಈ ಬಗ್ಗೆ ಲೋಕಾಯುಕ್ತಕ್ಕೆ ಬರೆದುಕೊಳ್ಳುವ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ರತನ್ ರೈ ಕುಂಬ್ರರವರು, ಪಂಚಾಯತ್ನಿಂದ ಈಗಾಗಲೇ ಸಾಮಾಜಿಕ ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ನೆಡುತೋಪು ಕಟಾವು ಮಾಡಿದ ಬಾಬ್ತು ಪಂಚಾಯತ್ಗೆ ಸಲ್ಲತಕ್ಕ ೧೦ ಲಕ್ಷ ರೂ.ಕೂಡ ಇನ್ನೂ ಸಿಕ್ಕಿಲ್ಲ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ರಾಘವ ಗೌಡ ಕೆರೆಮೂಲೆಯವರು, ಈ ಬಗ್ಗೆ ಇರುವ ಗೊಂದಲ ನಿವಾರಣೆಯಾಗಬೇಕಾದರೆ ಲೋಕಾಯುಕ್ತಕ್ಕೆ ಬರೆದುಕೊಳ್ಳುವುದೇ ಉತ್ತಮ, ಇದರ ಬಗ್ಗೆ ಸಂಪೂರ್ಣ ತನಿಖೆಯಾಗಲಿ ಎಂದು ತಿಳಿಸಿದರು. ಅದರಂತೆ ನಿರ್ಣಯ ದಾಖಲಿಸಿಕೊಳ್ಳಲಾಯಿತು.
ಆರೋಗ್ಯ ಕೇಂದ್ರದ ಅಂಗಳದಲ್ಲೇ ಎದ್ದು ನಿಂತ ಕಟ್ಟಡ..!
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಗಳದಲ್ಲೇ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು ಇದರಿಂದ ಆಸ್ಪತ್ರೆಗೆ ಬರುವ ಜನರಿಗೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಲು ಸಮಸ್ಯೆಯಾಗುತ್ತಿದೆ. ಬೇರೆ ಜಾಗವಿದ್ದರೂ ಆಸ್ಪತ್ರೆಯ ಅಂಗಳದಲ್ಲೇ ಕಟ್ಟಡ ನಿರ್ಮಾಣ ಮಾಡಿರುವ ಉದ್ದೇಶವೇನು? ಮತ್ತು ಈ ಕಟ್ಟಡದ ಬಗ್ಗೆ ಮಾಹಿತಿ ನೀಡುವಂತೆ ರಾಘವ ಗೌಡ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿ ಡಾ| ಭವ್ಯರವರು, ಇದು ಕೇಂದ್ರ ಸರಕಾರದ ಎಂಡೋ ಸೆಲ್ನಿಂದ ಸುಮಾರು ೫ ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡವಾಗಿದೆ. ಇದು ಮುಖ್ಯವಾಗಿ ಎಂಡೋಪೀಡಿತರಿಗೆ ಸಂಬಂಧಪಟ್ಟ ಕೇಂದ್ರವಾಗಿದೆ. ಇದು ಕೇಂದ್ರ ಸರಕಾರದಿಂದ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಬೇರೆ ಎಲ್ಲೂ ಜಾಗ ಇಲ್ಲದೇ ಇದ್ದುದರಿಂದ ಇಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್ ರೈಯವರು, ಆಸ್ಪತ್ರೆಯ ಹಿಂದುಗಡೆ ಗುಡ್ಡ ಕುಸಿಯುತ್ತಿದೆ ಹಾಗೂ ಇಲ್ಲಿ ಸಮತಟ್ಟು ಮಾಡಲು ಹೆಚ್ಚುವರಿ ಅನುದಾನ ಕೂಡ ಬೇಕಾಗುತ್ತದೆ. ಆಸ್ಪತ್ರೆಯ ಎದುರು ಸೂಕ್ತವಾದ ಸಮತಟ್ಟು ಜಾಗವಿದ್ದ ಕಾರಣ ಇಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ಆರೋಗ್ಯ ಕೇಂದ್ರವು ಮುಂದಿನ ದಿನಗಳಲ್ಲಿ ಅಭಿವೃದ್ಧಿಯಾಗುವ ಸಂದರ್ಭ ಇದರಿಂದ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು ಆದ್ದರಿಂದ ಸೂಕ್ತ ಜಾಗದಲ್ಲಿ ನಿರ್ಮಾಣ ಮಾಡಿದ್ದರೆ ಚೆನ್ನಾಗಿತ್ತು ಎಂದು ರಾಘವ ಗೌಡ ತಿಳಿಸಿದರು. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ ತಿಳಿಸಿದರು.
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ 5 ಕೋಟಿ ರೂ.ಅನುದಾನ ಪಾಣಾಜೆಗೆ ಶಿಫ್ಟ್!
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸುಮಾರು 5 ಕೋಟಿ ರೂ.ಅನುದಾನ ಬಿಡುಗಡೆಗೊಂಡಿದೆ ಎಂದು ವರ್ಷಗಳ ಹಿಂದೆ ಬ್ಯಾನರ್ ಅಳವಡಿಸಲಾಗಿತ್ತು ಆದರೆ ಇದುವರೆಗೆ ಆರೋಗ್ಯ ಕೇಂದ್ರ ಅಭಿವೃದ್ಧಿಯಾಗಿಲ್ಲ ಈ ಅನುದಾನ ಬಂದಿಲ್ಲವೇ ಎಂದು ಗ್ರಾಮಸ್ಥ ನೌಷಾದ್ ತಿಂಗಳಾಡಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಾ| ದೀಪಕ್ ರೈಯವರು, ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಬಂದಿದ್ದ 5 ಕೋಟಿ ರೂ.ಅನುದಾನವನ್ನು ಪಾಣಾಜೆ ಆರೋಗ್ಯ ಕೇಂದ್ರಕ್ಕೆ ಹೋಗಿದೆ. ಪಾಣಾಜೆ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯವಾಗಿ ಮೇಲ್ದರ್ಜೆಗೇರುತ್ತಿದೆ. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯು ಸುಮಾರು ೩೦ ಸಾವಿರ ಜನಸಂಖ್ಯೆಯನ್ನು ಹೊಂದಿದ್ದು ಗ್ರಾಮಕ್ಕೆ ಇನ್ನೊಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಅಗತ್ಯತೆ ಇದೆ. ಮುಂದಿನ ದಿನಗಳಲ್ಲಿ ತಿಂಗಳಾಡಿ ಆರೋಗ್ಯ ಕೇಂದ್ರಕ್ಕೆ ಅನುದಾನ ಬರಬಹುದು ಈ ಬಗ್ಗೆ ಜಿಲ್ಲಾ ಮಟ್ಟದಿಂದ ಸರಕಾರಕ್ಕೆ ಬರೆಯಲಾಗಿದೆ ಎಂದು ತಿಳಿಸಿದರು.
ಇದ್ಪಾಡಿ-ಅಡೈತ್ತಿಮಾರು ಕಾಲು ದಾರಿ ಸರಿಪಡಿಸಿ
ಇದ್ಪಾಡಿಯಿಂದ ಅಡೈತ್ತಿಮಾರು ಸಂಪರ್ಕಿಸುವ ಕಾಲು ಸಂಕ ಮುರಿದು ಹೋಗಿದ್ದು ಇದರಿಂದ ಬಹಳಷ್ಟು ಜನರಿಗೆ, ಶಾಲಾ ಕಾಲೇಜು, ಅಂಗನವಾಡಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಜನರು ಸುತ್ತುಬಳಸಿ ಬರಬೇಕಾಗುತ್ತದೆ ಆದ್ದರಿಂದ ಇದನ್ನು ಶೀಘ್ರವೇ ದುರಸ್ತಿ ಮಾಡಬೇಕು ಎಂದು ಅಂಗನವಾಡಿ ಶಿಕ್ಷಕಿ ಪುಷ್ಪಾವತಿ ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು ಈ ಬಗ್ಗೆ ಅನುದಾನಕ್ಕಾಗಿ ಶಾಸಕರಿಗೆ ಬರೆದುಕೊಳ್ಳುವ ಎಂದು ತಿಳಿಸಿದರು.
ಸಂಪರ್ಕ ರಸ್ತೆ ಕಾಂಕ್ರಿಟೀಕರಣಗೊಳಿಸಿ
ಕೆದಂಬಾಡಿ, ಒಳಮೊಗ್ರು, ಮುಂಡೂರು, ಸರ್ವೆ, ಕುರಿಯ ಇತ್ಯಾದಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸನ್ಯಾಸಿಗುಡ್ಡೆ ಬೋಳೋಡಿ ಸಂಪರ್ಕ ರಸ್ತೆಯಲ್ಲಿ ಈಗಾಗಲೇ ಮುಂಡಾಲ ಎಂಬಲ್ಲಿ ಸುಮಾರು ೫೦ ಲಕ್ಷ ರೂ.ವೆಚ್ಚದಲ್ಲಿ ಸಂಪರ್ಕ ಸೇತುವೆ ನಿರ್ಮಾಣವಾಗಿದೆ. ಆದರೆ ಕಚ್ಚಾರಸ್ತೆಯಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಬೇಕು ಈ ಬಗ್ಗೆ ಅನುದಾನಕ್ಕೆ ಶಾಸಕರಿಗೆ ಬರೆದುಕೊಳ್ಳಿ ಎಂದು ರಾಘವ ಗೌಡ ಕೆರೆಮೂಲೆ ತಿಳಿಸಿದರು.
ಪೊಲೀಸರ ಗಮನಕ್ಕೆ
ಗ್ರಾಮದ ಕುಯ್ಯಾರು ಪಂಜಿಗುಡ್ಡೆ ಗಟ್ಟಮಲೆ ರಸ್ತೆಯಲ್ಲಿ ರಾತ್ರಿ ಸಮಯ ಮರಗಳ ಲೋಡ್ ತುಂಬಿದ ಲಾರಿಗಳು ಬರುತ್ತಿದೆ. ರಾತ್ರಿ ವೇಳೆ ಈ ಲಾರಿಗಳು ರಸ್ತೆ ಬದಿಯಲ್ಲಿ ನಿಂತುಕೊಂಡಿರುತ್ತವೆ ಆದ್ದರಿಂದ ಈ ಭಾಗಕ್ಕೆ ಬೀಟ್ ಪೊಲೀಸ್ನವರು ಗಮನಹರಿಸಬೇಕು ಎಂದು ನಾರಾಯಣ ಪಾಟಾಳಿ ಪಂಜಿಗುಡ್ಡೆ ತಿಳಿಸಿದರು.
ಸಭೆಯಿಂದ ಕೇಳಿಬಂದ ಸಮಸ್ಯೆಗಳು
ಸನ್ಯಾಸಿಗುಡ್ಡೆ ಪ್ರದೇಶದಲ್ಲಿ ಬೀದಿ ದೀಪಗಳೇ ಇಲ್ಲ ಈ ಬಗ್ಗೆ ವಾರ್ಡ್ ಸದಸ್ಯರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ಇದೆ. ಕೆದಂಬಾಡಿ ಶಾಲಾ ಬಳಿ ವಿದ್ಯುತ್ ತಂತಿ ಜೋತು ಬಿದ್ದಿದ್ದು ಹಲವು ಬಾರಿ ತುಂಡಾಗಿದೆ. ಶಾಲಾ ಮಕ್ಕಳು ಓಡಾಡುವ ಪ್ರದೇಶವಾಗಿರುವುದರಿಂದ ಅಪಾಯ ಸಂಭವಿಸುವ ಮುನ್ನ ತಂತಿ ಬದಲಾಯಿಸುವಂತೆ ಗ್ರಾಮಸ್ಥರು ಕೇಳಿಕೊಂಡರು.
ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಭಾಸ್ಕರ ರೈ ಮಿತ್ರಂಪಾಡಿ, ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಅಸ್ಮಾ ಗಟ್ಟಮನೆ, ಸುಜಾತ, ಜಯಲಕ್ಷ್ಮೀ ಬಲ್ಲಾಳ್, ಸುಜಾತ ಮುಳಿಗದ್ದೆ, ರೇವತಿ ಬೋಳೋಡಿ ಉಪಸ್ಥಿತರಿದ್ದರು. ಗ್ರಾಪಂ ಸಿಬ್ಬಂದಿ ಜಯಂತ ಮೇರ್ಲ ವರದಿ ಮಂಡಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ ಸ್ವಾಗತಿಸಿ, ಗ್ರಾಪಂ ಮಾಹಿತಿ ನೀಡಿದರು.ಸಿಬ್ಬಂದಿಗಳಾದ ಗಣೇಶ್, ವಿದ್ಯಾಪ್ರಸಾದ್, ಮೃದುಳಾ, ಶಶಿಪ್ರಭಾ ಸಹಕರಿಸಿದ್ದರು.
` ಗ್ರಾಮದ ಅಭಿವೃದ್ಧಿಯ ದೃಷ್ಟಿಯಲ್ಲಿ ಗ್ರಾಮಸ್ಥರ ಬೇಡಿಕೆಗಳನ್ನು ದಾಖಲಿಸಿಕೊಂಡು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು, ನನ್ನ ೨.೫ ವರ್ಷದ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗೆ ನನ್ನಿಂದ ಸಾಧ್ಯವಾಗುವಷ್ಟು ಶ್ರಮಪಟ್ಟಿದ್ದೇನೆ. ಅಭಿವೃದ್ಧಿ ಪರ್ವದಲ್ಲಿ ನನ್ನೊಂದಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ,ಮುಂದೆಯೂ ಸಹಕಾರ ನೀಡುವಂತೆ ಕೇಳಿಕೊಳ್ಳುತ್ತೇನೆ.’
ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ