





ಪುತ್ತೂರಿನ ಡಾ| ಹರ್ಷಕುಮಾರ್ ರೈ ಮಾಡಾವು ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಬಿಡುಗಡೆ


ಪುತ್ತೂರು: ಅಂತರಾಷ್ಟ್ರೀಯ ರೋಟರಿ ಜಿಲ್ಲೆ 2181 ರ ಪಬ್ಲಿಕ್ ಇಮೇಜ್ ಮತ್ತು ರಸ್ತೆ ಸುರಕ್ಷತೆ ಮತ್ತು ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಡಾ| ಹರ್ಷಕುಮಾರ್ ರೈ ಮಾಡಾವು ಅವರ ನೇತೃತ್ವದಲ್ಲಿ ನಿರ್ಮಾಣಗೊಂಡ ‘ಹೋಫ್ ಫಾರ್ ರೋಡ್ ಸೇಫ್ಟಿ’ ಕನ್ನಡ ಕಿರುಚಿತ್ರವು ಆ.15ರ ಸ್ವಾತಂತ್ರೋತ್ಸವದ ವಿಶೇಷ ದಿನದಂದು ನವದೆಹಲಿಯಲ್ಲಿ ಬಿಡುಗಡೆಗೊಳಿಸಲಾಯಿತು.





ನವದೆಹಲಿಯ ರೋಟರಿ ದಕ್ಷಿಣ ಏಷ್ಯಾದ ಕೇಂದ್ರ ಕಚೇರಿಯಲ್ಲಿ ರೋಟರಿಯ ಅಂತರಾಷ್ಟ್ರೀಯ ದಕ್ಷಿಣ ಏಷ್ಯಾದ ಮುಖ್ಯಸ್ಥ ರಾಜೀವ್ ರಂಜನ್ ಅವರು ಈ ಜನಜಾಗೃತಿಯ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಅವರು ಶುಭ ಹಾರೈಸಿ ಮಾತನಾಡಿ ಸಾಮಾಜಿಕ ಕಳಕಳಿಯಿಂದ ರೋಟರಿಯ ಮೂಲಕ ನಿರ್ಮಾಣಗೊಂಡ ಕಿರುಚಿತ್ರ ಸಮಾಜದ ಎಲ್ಲರನ್ನು ತಲುಪುವಂತಾಗಲಿ, ರಸ್ತೆ ಸುರಕ್ಷತೆಯ ಜಾಗೃತಿಯನ್ನು ಜನರಲ್ಲಿ ಹೆಚ್ಚುವಂತಾಗಲಿ ಎಂದರು.

ರೋಟರಿ ಜಿಲ್ಲೆಯ ರಸ್ತೆ ಸುರಕ್ಷತೆ ಮತ್ತು ಜಾಗೃತಿ ಚೇರ್‌ಮ್ಯನ್ ಆಗಿರುವ ಡಾ| ಹರ್ಷಕುಮಾರ್ ರೈ ಮಾಡಾವು ಈ ಕಿರುಚಿತ್ರವನ್ನು ನಿರ್ಮಿಸಿದ್ದು, ರಂಗ ನಿರ್ದೇಶಕ ಮೌನೇಶ್ ವಿಶ್ವಕರ್ಮ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರೋಟರಿಯ ಜಿಲ್ಲಾ ಗವರ್ನರ್ ಹೆಚ್.ಆರ್ ಕೇಶವ್, ನಿಕಟಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ಪಬ್ಲಿಕ್ ಇಮೇಜ್ ಚೇರ್‌ಮ್ಯಾನ್ ವಿಶ್ವಾಸ್ ಶೆಣೈ, ಕಿರುಚಿತ್ರದ ಸಂಯೋಜಕ ಆಸ್ಕರ್ ಆನಂದ್ ಅವರ ಸಹಕಾರದೊಂದಿಗೆ ಮೂಡಿ ಬಂದ ಈ ಚಿತ್ರದಲ್ಲಿ ರೋಟರಿ ಕ್ಲಬ್‌ಗಳ ಸದಸ್ಯರು ವಿವಿಧ ಪಾತ್ರ ನಿರ್ವಹಿಸಿದ್ದಾರೆ.
ಪುತ್ತೂರು ಮತ್ತು ಬಂಟ್ವಾಳ ನಗರ ಪೊಲೀಸ್ ಸಂಚಾರ ಪೊಲೀಸ್ ಠಾಣೆ ಮತ್ತು ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಕಿರುಚಿತ್ರ ನಿರ್ಮಾಣ ಮಾಡಲು ಸಂಪೂರ್ಣ ಸಹಕಾರ ನೀಡಿದ್ದು, ಛಾಯಾಗ್ರಾಹಕರಾಗಿ ಅರುಣ್ ರೈ ಪುತ್ತೂರು, ಎಡಿಟರ್ ಆಗಿ ಚರಣ್ ಆಚಾರ್ಯ, ಸಂಗೀತವನ್ನು ಸವಿ ಸಂಗೀತ ಸ್ಟುಡಿಯೋದ ಅಶ್ವಿನ್ ಬಾಬಣ್ಣ ನಿರ್ವಹಿಸಿದ್ದಾರೆ.

ಸ್ವಾತಂತ್ರ್ಯೋತ್ಸಕ್ಕೆ ಕಿರುಚಿತ್ರ ನಿರ್ಮಿಸಿ ಬಿಡುಗಡೆ
ಡಾ| ಹರ್ಷಕುಮಾರ್ ರೈ ಮಾಡಾವು ಅವರು ನಿರಂತರವಾಗಿ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶಾಭಿಮಾನ ಸಾರುವ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರವನ್ನು ನಿರ್ಮಿಸಿ ಬಿಡುಗಡೆಗೊಳಿಸುತ್ತಿದ್ದು, ಅವರ ಈ ಹಿಂದಿನ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ದಿನ ಅನ್‌ಲಾಕ್ ಮತ್ತು ತ್ರಿವರ್ಣ ಸೇರಿದಂತೆ ಹಲವು ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಪ್ರಶಂಸೆಯನ್ನು ಪಡೆದಿದೆ.
ಕೇಂದ್ರ ಸಚಿವರಿಂದ ಶ್ಲಾಘನೆ:
ಕೇಂದ್ರ ಸಂಸದ ಸಚಿವ ಪ್ರಹ್ಲಾದ್ ಜೋಷಿಯವರು ರೋಟರಿಯ ಈ ಕಿರುಚಿತ್ರವನ್ನು ಸ್ವಾತಂತ್ರ್ಯೋತ್ಸವದಂದು ತಮ್ಮ ನಿವಾಸದಲ್ಲಿ ವೀಕ್ಷಿಸಿ ರೋಟರಿಯ ಸೇವಾ ಕಾರ್ಯವನ್ನು ಶ್ಲಾಘೀಸಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರ ನೇತೃತ್ವದಲ್ಲಿ ರಸ್ತೆ ಸುರಕ್ಷತೆ ಮತ್ತು ಜಾಗೃತಿಯ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೋಟರಿಯ ಈ ಕಿರುಚಿತ್ರವನ್ನು ವೀಕ್ಷಿಸಿ , ಸಂಪೂರ್ಣ ಅಧ್ಯಯನ ಮಾಡಿ ಸಚಿವಾಲಯದ ವತಿಯಿಂದ ಮಾನ್ಯತೆ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದು ಡಾ| ಹರ್ಷಕುಮಾರ್ ರೈ ಮಾಡಾವು ತಿಳಿಸಿದ್ದಾರೆ.






