ನೆಟ್ಟಣಿಗೆಮುಡ್ನೂರು ಗ್ರಾ.ಪಂ- ಅಧ್ಯಕ್ಷರಾಗಿ ಫೌಝಿಯಾ ಇಬ್ರಾಹಿಂ, ಉಪಾಧ್ಯಕ್ಷರಾಗಿ ರಾಮ ಮೇನಾಲ

0

ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ 2 ಮತಪತ್ರ ಪತ್ತೆ-ಗೊಂದಲ ಸೃಷ್ಟಿ
ಅಕ್ರಮ ನಡೆದಿರುವುದಾಗಿ ಆರೋಪಿಸಿ ಬಿಜೆಪಿ, ಪುತ್ತಿಲ ಪರಿವಾರ ಬೆಂಬಲಿತರ ಪ್ರತಿಭಟನೆ


ಗೊಂದಲದ ಬಳಿಕ ಉಪಾಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ
ಚುನಾವಣೆ ಮುಂದೂಡಿ ಇಲ್ಲವೇ ಬೇರೆ ಅಧಿಕಾರಿ ಮೂಲಕ ಮರು ಚುನಾವಣೆ ನಡೆಸಿ-
ಪ್ರತಿಭಟನೆ ಮುಂದುವರಿಸಿ ಮರು ಮತದಾನದಿಂದ ದೂರ ಉಳಿದ ಬಿಜೆಪಿ, ಪುತ್ತಿಲ ಪರಿವಾರ ಸದಸ್ಯರು
ಸದಸ್ಯರ ಪ್ರತಿಭಟನೆಗೆ ಪಕ್ಷದ ಪ್ರಮುಖರು, ಕಾರ್ಯಕರ್ತರ ಸಾಥ್
ಕಾಂಗ್ರೆಸ್ ಬೆಂಬಲಿತರ ಗೆಲುವು-ವಿಜಯೋತ್ಸವ ಸಂಭ್ರಮ


ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆ.21ರಂದು ನಡೆದಿದ್ದು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಫೌಝಿಯಾ ಇಬ್ರಾಹಿಂ ಅಧ್ಯಕ್ಷರಾಗಿ ಮತ್ತು ರಾಮ ಮೇನಾಲ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಆಯ್ಕೆಯ ಚುನಾವಣಾ ಮತ ಪತ್ರದಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಯ ಎರಡು ಮತಪತ್ರಗಳೂ ದೊರೆತುದರಿಂದ ಗೊಂದಲ ಉಂಟಾಯಿತು. ಆ ಎರಡು ಮತಗಳನ್ನು ಅಸಿಂದುಗೊಳಿಸಬೇಕು ಅಥವಾ ಬೇರೆ ಅಧಿಕಾರಿ ಮೂಲಕ ಮರು ಚುನಾವಣೆ ನಡೆಸಬೇಕು ಇಲ್ಲವೇ ಚುನಾವಣೆ ಮುಂದೂಡಬೇಕು ಎಂದು ಆಗ್ರಹಿಸಿ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಮತ್ತು ಸದಸ್ಯರು ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದ ಮತ್ತು ಉಪಾಧ್ಯಕ್ಷತೆಗೆ ಮರು ಚುನಾವಣೆ ನಡೆದರೂ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಮತ್ತು ಸದಸ್ಯರು ಮರುಚುನಾವಣೆಯಿಂದ ಹೊರಗುಳಿದ ಘಟನೆ ನಡೆಯಿತು.ಕಾಂಗ್ರೆಸ್ ಬೆಂಬಲಿತ ಸದಸ್ಯ ರಾಮ ಮೇನಾಲ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.ಮರು ಚುನಾವಣೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಸಹಾಯಕ ಆಯುಕ್ತ ಗಿರೀಶ್‌ನಂದನ್ ಅವರು ಆಗಮಿಸಿ ಚುನಾವಣಾಧಿಕಾರಿ, ಅಭ್ಯರ್ಥಿಗಳು ಮತ್ತು ಪ್ರತಿಭಟನಾನಿರತರ ಜೊತೆ ಮಾತುಕತೆ ನಡೆಸಿದರು.ಚುನಾವಣಾ ಪ್ರಕ್ರಿಯೆ ಬಗ್ಗೆ ಅಸಮಾಧಾನವಿದ್ದರೆ ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ’ ಎಂದು ಪ್ರತಿಭಟನಾನಿರತರಿಗೆ ಎ.ಸಿ.ಯವರು ಹೇಳಿದರು.


ಏನಿದು ಗೊಂದಲ..?: ಮುಂದಿನ ಎರಡೂವರೆ ವರ್ಷಗಳವಧಿಗೆ ಗ್ರಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಫೌಝಿಯಾ ಇಬ್ರಾಹಿಂ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರಫುಲ್ಲ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸವಿತಾ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯೆ ಇಂದಿರಾ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ರಾಮ ಮೇನಾಲ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರದೀಪ್ ಕುಮಾರ್ ಮತ್ತು ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಚಂದ್ರಹಾಸ ನಾಮಪತ್ರ ಸಲ್ಲಿಸಿದ್ದರು.ಬಳಿಕ ಚುನಾವಣೆ ನಡೆದು ಮತ ಎಣಿಕೆ ನಡೆಯಿತು.ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫೌಝಿಯಾ ಇಬ್ರಾಹಿಂ ಅವರು ೧೩ ಮತ ಪಡೆದು ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇಂದಿರಾ 8 ಮತಗಳನ್ನು ಪಡೆದುಕೊಂಡರು.ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರಫುಲ್ಲ ಹಾಗೂ ಪುತ್ತಿಲ ಪರಿವಾರದ ಸವಿತಾ ಅವರು ಯಾವುದೇ ಮತ ಪಡೆದುಕೊಂಡಿರಲಿಲ್ಲ.22 ಸದಸ್ಯರ ಪೈಕಿ 12 ಮಂದಿ ಕಾಂಗ್ರೆಸ್ ಬೆಂಬಲಿತರು, 8 ಬಿಜೆಪಿ ಬೆಂಬಲಿತರು ಹಾಗೂ ಇಬ್ಬರು ಎಸ್‌ಡಿಪಿಐ ಬೆಂಬಲಿತರಾಗಿದ್ದಾರೆ.ಗ್ರಾ.ಪಂ ಸದಸ್ಯೆ ವತ್ಸಲಾ ಗೈರು ಹಾಜರಾಗಿದ್ದರು.


ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಮತಪತ್ರ-ಗೊಂದಲ:
ಉಪಾಧ್ಯಕ್ಷ ಸ್ಥಾನದ ಮತ ಎಣಿಕೆ ವೇಳೆ ಚಂದ್ರಹಾಸರವರಿಗೆ 10 ಹಾಗೂ ರಾಮ ಮೇನಾಲರವರಿಗೆ 9 ಮತಗಳು ಲಭಿಸಿದ್ದು ಪ್ರದೀಪ್‌ರವರಿಗೆ ಮತ ದೊರೆತಿರಲಿಲ್ಲ ಚಲಾವಣೆಯಾದ 21 ಮತಗಳ ಪೈಕಿ ಎರಡು ಮತಪತ್ರ ಅಧ್ಯಕ್ಷ ಸ್ಥಾನಕ್ಕೆ ಬಳಸುವ ಮತಪತ್ರಗಳಾಗಿರುವುದರಿಂದ ಗೊಂದಲ ಉಂಟಾಯಿತು. ಬಿಜೆಪಿ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು ಈ ವೇಳೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾಧಿಕಾರಿಯಾಗಿದ್ದ ಶಿವಶಂಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ಉಪಾಧ್ಯಕ್ಷ ಚುನಾವಣೆಯಲ್ಲಿ ಬಳಕೆಯಾದ ಅಧ್ಯಕ್ಷರ ಚುನಾವಣೆಯ ಮತ ಪತ್ರಗಳ 2 ಮತಗಳನ್ನು ಅಸಿಂಧುಗೊಳಿಸಿ ಫಲಿತಾಂಶ ಘೋಷಿಸಬೇಕು ಅಥವಾ ಚುನಾವಣೆಯನ್ನು ಮುಂದೂಡಬೇಕು ಇಲ್ಲವೇ ಬೇರೆ ಅಧಿಕಾರಿಗಳು ಬಂದು ಮರು ಚುನಾವಣೆ ನಡೆಸಬೇಕೆಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್ ಬೆಂಬಲಿತ ಸದಸ್ಯರೂ ಮಧ್ಯ ಪ್ರವೇಶಿಸಿ ಮತ ಪತ್ರಗಳ ಯಡವಟ್ಟಿಗೆ ಸದಸ್ಯರು ಕಾರಣವಲ್ಲ ಆದರೂ ಉಪಾಧ್ಯಕ್ಷ ಸ್ಥಾನಕ್ಕೆ ಮರು ಚುನಾವಣೆ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ,ಈಗಲೇ ಮರು ಚುನಾವಣೆ ಮಾಡಿ ನಾವು ಸಿದ್ದರಿದ್ದೇವೆ ಎಂದು ಹೇಳಿದರು.

ಈ ವೇಳೆ, ಮರು ಚುನಾವಣೆ ನಡೆಸಲು ಚುನಾವಣಾಧಿಕಾರಿಯವರು ಸಿದ್ದತೆ ನಡೆಸುತ್ತಿದ್ದ ವೇಳೆ ಆಕ್ಷೇಪ ವ್ಯಕ್ತಪಡಿಸಿದ ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿ ಚಂದ್ರಹಾಸ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರದೀಪ್ ಕುಮಾರ್ ಚುನಾವಣಾಧಿಕಾರಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ನಿಮ್ಮ ಮೇಲೆ ನಮಗೆ ವಿಶ್ವಾಸವಿಲ್ಲ, ನೀವು ನಕಲಿ ಮತಪತ್ರ ಸೃಷ್ಠಿಸಿರುವ ಸಂಶಯ ನಮಗಿದೆ, ನೀವು ಮಾಡುವ ಮರು ಚುನಾವಣೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿದರು.ನೀವು ಸಾಮಾನ್ಯ ಅಧಿಕಾರಿಯಲ್ಲ, ನೀವೊಬ್ಬ ಗೆಜೆಟೆಡ್ ಆಫೀಸರ್, ತಹಶೀಲ್ದಾರ್, ನೀವೇ ಇಂತಹ ತಪ್ಪು ಮಾಡುವುದೆಂದರೆ ಇದರ ಅರ್ಥವೇನು? ಇದು ಕಳ್ಳ ಪೊಲೀಸ್ ಆಟವಲ್ಲ, ಮಕ್ಕಳಾಟವೂ ಅಲ್ಲ, ಇದು ಗ್ರಾ.ಪಂ ಚುನಾವಣೆ, ಸರಿಯಾಗಿ ಚುನಾವಣಾ ಪ್ರಕ್ರಿಯೆ ಆಗಬೇಕು. ನೀವು ನಮಗೆ ನ್ಯಾಯ ಕೊಡಬೇಕೇ ವಿನಃ ನಿಮ್ಮಿಷ್ಟಕ್ಕೆ ಚುನಾವಣೆ ಮಾಡುವುದಲ್ಲ, ನಿಮ್ಮಲ್ಲಿ ನಮಗೆ ವಿಶ್ವಾಸವೇ ಇಲ್ಲ ಎಂದು ಅವರು ಹೇಳಿದರು.


ಗ್ರಾ.ಪಂ ಎದುರು ಪ್ರತಿಭಟನೆ:
ಉಪಾಧ್ಯಕ್ಷ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ವೇಳೆ ಲೋಪವಾಗಿದೆ ಎಂದು ಆರೋಪಿಸಿ ಚುನಾವಣಾಧಿಕಾರಿ ವಿರುದ್ಧ ಬಿಜೆಪಿ ಹಾಗೂ ಪುತ್ತಿಲ ಬೆಂಬಲಿತ ಅಭ್ಯರ್ಥಿಗಳು ಮತ್ತು ಸದಸ್ಯರು ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರು.ಮೇಲಧಿಕಾರಿಗಳು ಬಂದು ಮರುಚುನಾವಣೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸದಸ್ಯರಾದ ಚಂದ್ರಹಾಸ, ಪ್ರದೀಪ್ ಕುಮಾರ್, ವೆಂಕಪ್ಪ, ಪ್ರಫುಲ್ಲ, ಸವಿತಾ, ಪೂರ್ಣೇಶ್ವರಿ, ಕುಮಾರನಾಥ ಹಾಗೂ ಶಶಿಕಲಾ ಪ್ರತಿಭಟನೆಯಲ್ಲಿ ಕುಳಿತುಕೊಂಡರು.ಚುನಾವಣಾಧಿಕಾರಿಗಳಿಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು,ನಮಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದರು.ಮತ ಎಣಿಕೆಯಲ್ಲಿ ಅಕ್ರಮ ನಡೆಸಿದ ಚುನಾವಣಾಧಿಕಾರಿಯನ್ನು ಬಂಧಿಸಿ ಎಂದೂ ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು.ರಾಜೇಶ್ ಪಂಚೋಡಿ, ದೀಪಕ್ ಮೂಲ್ಯ, ಜಯರಾಜ್, ಪ್ರಕಾಶ್, ಗೌರೀಶ್ ಮತ್ತಿತರ ಹಲವರು ಪ್ರತಿಭಟನೆಯಲ್ಲಿ ಭಾಗಿಯಾದರು.


ಬಿಜೆಪಿ, ಪುತ್ತಿಲ ಪರಿವಾರದ ಮುಖಂಡರ ಆಗಮನ:
ಪ್ರತಿಭಟನೆ ಮುಂದುವರಿಯುತ್ತಿದ್ದಂತೆ ಬಿಜೆಪಿ, ಪುತ್ತಿಲ ಪರಿವಾರದ ಮುಖಂಡರು ಆಗಮಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ,ಪ್ರಮುಖರಾದ ಹರೀಶ್ ಬಿಜತ್ರೆ, ಸಹಜ್ ರೈ ಬಳಜ್ಜ, ರಾಜೇಶ್ ರೈ ಪರ್ಪುಂಜ, ಸಚಿನ್ ರೈ ಪಾಪೆಮಜಲು, ರತನ್ ರೈ ಕುಂಬ್ರ, ಸಂತೋಷ್ ಮಣಿಯಾನಿ, ಹರೀಶ್ ಅರಿಯಡ್ಕ ಸಹಿತ ಬಿಜೆಪಿ ಮುಖಂಡರು, ಪುತ್ತಿಲ ಪರಿವಾರದ ತಾಲೂಕು ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಮುಖಂಡ ಪ್ರವೀಣ್ ಶೆಟ್ಟಿ ತಿಂಗಳಾಡಿ, ಮನೀಷ್ ಕುಲಾಲ್ ಸಹಿತ ಹಲವರು ಸ್ಥಳಕ್ಕೆ ಆಗಮಿಸಿ ಬಿಜೆಪಿ, ಪುತ್ತಿಲ ಪರಿವಾರ ಬೆಂಬಲಿತ ಸದಸ್ಯರ ಪ್ರತಿಭಟನೆಗೆ ಸಾಥ್ ನೀಡಿದರು.


ಚುನಾವಣಾಧಿಕಾರಿಯಿಂದ ಮನವೊಲಿಕೆ ಯತ್ನ:
ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಶಿವಶಂಕರ್ ಅವರು ಉಪಾಧ್ಯಕ್ಷತೆಯ ಮರು ಚುನಾವಣೆಯಲ್ಲಿ ಭಾಗವಹಿಸುವಂತೆ ಹಲವು ಬಾರಿ ಪ್ರತಿಭಟನಾ ನಿರತ ಸದಸ್ಯರ ಮನವೊಲಿಕೆಗೆ ಮುಂದಾದರೂ ಜಗ್ಗದ ಪ್ರತಿಭಟನಾಕಾರರು, ನಿಮ್ಮ ಮೇಲೆ ವಿಶ್ವಾಸವಿಲ್ಲ, ನೀವು ಮರು ಚುನಾವಣೆ ಮಾಡಿದರೆ ನಾವು ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಚುನಾವಣಾಧಿಕಾರಿ ಶಿವಶಂಕರ್ ಮಾತನಾಡಿ ಉಪಾಧ್ಯಕ್ಷ ಚುನಾವಣೆಯಲ್ಲಿ ಹೆಚ್ಚುವರಿ ಮತಪತ್ರ ಕಂಡು ಬಂದಿಲ್ಲ, ಆಕಸ್ಮಿಕವಾಗಿ ಸಣ್ಣ ಯಡವಟ್ಟಾಗಿದೆ,ಅದಕ್ಕಾಗಿ ಮರು ಚುನಾವಣೆ ನಡೆಸುತ್ತೇನೆ ಎಂದು ಹೇಳಿದರು.ಆದರೆ ಅವರ ಮಾತನ್ನು ಒಪ್ಪದ ಪ್ರತಿಭಟನಾಕಾರರು ಮೇಲಾಧಿಕಾರಿ ಬಂದ ಮೇಲೆಯೇ ನಾವು ಚುನಾವಣೆಯಲ್ಲಿ ಭಾಗವಹಿಸುತ್ತೇವೆ, ನಮಗೆ ನ್ಯಾಯ ಬೇಕು, ನಿಮ್ಮಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.


ಮರುಮತದಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಟ್ಟು:
ಅತ್ತ ಬಿಜೆಪಿ, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳು, ಸದಸ್ಯರಿಂದ ಗ್ರಾ.ಪಂ ಎದುರು ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್ ಬೆಂಬಲಿತ ಸದಸ್ಯರು ಉಪಾಧ್ಯಕ್ಷತೆಗೆ ಕೂಡಲೇ ಮರು ಮತದಾನಕ್ಕೆ ವ್ಯವಸ್ಥೆ ಮಾಡಿ ಎಂದು ಪಟ್ಟು ಹಿಡಿದರು.ನೀವು ಈಗಲೇ ಮರು ಚುನಾವಣೆ ಮಾಡದಿದ್ದರೆ ನಾವೂ ಪ್ರತಿಭಟನೆ ಮಾಡಬೇಕಾದೀತು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ರಮೇಶ್ ರೈ ಸಾಂತ್ಯ, ಶ್ರೀರಾಂ ಪಕ್ಕಳ, ಇಬ್ರಾಹಿಂ ಪಳ್ಳತ್ತೂರು, ಫೌಝಿಯಾ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು.ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಿ, ನಿಮಗೆ ಅಧಿಕಾರ ಇದೆಯಲ್ವಾ ಎಂದು ಸದಸ್ಯ ಸಂಶುದ್ದೀನ್ ಈಶ್ವರಮಂಗಲ ಆಗ್ರಹಿಸಿದರು.

ಬಿಜೆಪಿ, ಪುತ್ತಿಲ ಪರಿವಾರದಿಂದ ಮನವಿ:
ಮರುಮತದಾನ ಪ್ರಕ್ರಿಯೆಗೆ ಚುನಾವಣಾಧಿಕಾರಿ ಸಿದ್ದತೆ ನಡೆಸುತ್ತಿದ್ದ ವೇಳೆ ಆಗಮಿಸಿದ ಅಭ್ಯರ್ಥಿಗಳಾದ ಚಂದ್ರಹಾಸ, ಪ್ರದೀಪ್ ಕುಮಾರ್ ಮತ್ತಿತರರು ಮೇಲಧಿಕಾರಿಗಳ ಮೂಲಕ ನ್ಯಾಯ ಸಮ್ಮತವಾಗಿ ಮರು ಚುನಾವಣೆ ನಡೆಸುವಂತೆ ಅಥವಾ ಚುನಾವಣೆ ಮುಂದೂಡುವಂತೆ ಆಗ್ರಹಿಸಿದರು.

ಮರು ಮತದಾನ:
ಮರು ಮತದಾನ ಮಾಡುವ ಬಗ್ಗೆ ಚುನಾವಣಾಧಿಕಾರಿಯವರು ಗ್ರಾ.ಪಂ.ಸಭಾಂಗಣದಲ್ಲಿದ್ದ ಸದಸ್ಯರಿಂದ ಸಹಿ ಪಡೆದುಕೊಂಡರು.ಬಳಿಕ ಮರು ಮತದಾನ ನಡೆಯಿತು.

ಮರು ಚುನಾವಣೆಯಲ್ಲಿ ರಾಮ ಮೇನಾಲ ಜಯಭೇರಿ:
ಸದಸ್ಯ ಪ್ರತಿಭಟನೆ ನಡುವೆಯೇ ಉಪಾಧ್ಯಕ್ಷತೆಗೆ ಮರು ಮತದಾನ ನಡೆದು ಮತ ಎಣಿಕೆ ನಡೆಯಿತು.ಉಪಾಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿ ಪ್ರತಿಭಟನೆಯಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯ ಪ್ರದೀಪ್ ಕುಮಾರ್, ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಚಂದ್ರಹಾಸ ಅವರು ಮರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದರು.ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಗೈರಾಗಿದ್ದರು.ಇತರ 12 ಮಂದಿ ಮರು ಚುನಾವಣೆಯಲ್ಲಿ ಭಾಗವಹಿಸಿದ್ದರು.12 ಮತಗಳನ್ನು ಪಡೆದುಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮ ಮೇನಾಲ ಅವರು ಉಪಾಧ್ಯಕ್ಷರಾಗಿ ಭರ್ಜರಿ ಗೆಲುವು ಸಾಧಿಸಿದರು.


ಒಂದೆಡೆ ಧಿಕ್ಕಾರ…ಇನ್ನೊಂದೆಡೆ ಜೈಕಾರ:
ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಫೌಝಿಯಾ ಇಬ್ರಾಹಿಂ ಅಧ್ಯಕ್ಷರಾಗಿ ಮತ್ತು ರಾಮ ಮೇನಾಲ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಗ್ರಾ.ಪಂ ಎದುರು ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಕಾಂಗ್ರೆಸ್ ಮುಖಂಡರಾದ ಅನಿತಾ ಹೇಮನಾಥ ಶೆಟ್ಟಿ, ರವಿಪ್ರಸಾದ್ ಶೆಟ್ಟಿ, ಅಬ್ದುಲ್ ಹಾಜಿ ಮೇನಾಲ, ಅಬ್ದುಲ್ಲ ಮೆಣಸಿನಕಾನ, ಜಯಂತಿ ಅರಿಯಡ್ಕ, ವಿಕ್ರಂ ರೈ ಸಾಂತ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.ಒಂದು ಕಡೆ ಕಾಂಗ್ರೆಸ್ ವಿಜಯೋತ್ಸವ ಆಚರಿಸುತ್ತಿದ್ದರೆ ಇನ್ನೊಂದು ಕಡೆ ಬಿಜೆಪಿ, ಪುತ್ತಿಲ ಪರಿವಾರದ ಅಭ್ಯರ್ಥಿಗಳು, ಸದಸ್ಯರು, ಮುಖಂಡರು ಧಿಕ್ಕಾರ ಕೂಗುತ್ತಿದ್ದರು.ಚುನಾವಣೆಯಲ್ಲಿ ಅಕ್ರಮ ನಡೆಸಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ, ಡೋಂಗಿ, ಡೋಂಗಿ ಎಂದು ಅವರು ಬೊಬ್ಬೆ ಹೊಡೆಯುತ್ತಿದ್ದರು.

ಬಿಗಿ ಬಂದೋಬಸ್ತ್:
ಡಿವೈಎಸ್‌ಪಿ ಡಾ.ಗಾನ ಪಿ.ಕುಮಾರ್, ಇನ್ಸ್‌ಪೆಕ್ಟರ್ ರವಿ ಬಿ.ಎಸ್, ಪುತ್ತೂರು ಟ್ರಾಫಿಕ್ ಎಸ್ಸೈ ಉದಯರವಿ, ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಧನಂಜಯ ಬಿ.ಸಿ ಹಾಗೂ ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು. ಗ್ರಾ.ಪಂ ಪಿಡಿಓ ವಸೀಂ ಗಂಧದ ಚುನಾವಣಾ ಪ್ರಕ್ರಿಯೆ ಸಹಕರಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಮತಪತ್ರದ ಯಡವಟ್ಟು-ಮುಂದುವರಿದ ಗೊಂದಲ
ತಹಸಿಲ್ದಾರ್ ಶಿವಶಂಕರ್ ಅವರು ಚುನಾವಣಾಧಿಕಾರಿಯಾಗಿದ್ದರು.ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಳಸುವ 2 ಮತಪತ್ರ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಳಕೆಯಾಗಿರುವುದು ಗೊಂದಲಕ್ಕೆ ಕಾರಣವಾಗಿತ್ತು.ಅಲ್ಲದೇ ಗೊಂದಲ ಉಂಟಾದ ತಕ್ಷಣ ಮುಂದಿನ ಕ್ರಮದ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿಯೂ ಚುನಾವಣಾಧಿಕಾರಿಯವರು ವಿಫಲರಾದದ್ದು ಗೊಂದಲ ಮುಂದುವರಿಯಲು ಕಾರಣವಾಯಿತು ಎನ್ನಲಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಶ್ರೀರಾಂ ಪಕ್ಕಳ ಮತ್ತಿತರರು, ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಿ, ನೀವು ಅಧಿಕಾರಿ, ನಿಮಗೆ ಪವರ್ ಇದೆ, ಆ ಪವರ್ ಬಳಸಿ ಎಂದು ಹೇಳಿದರು.ಎ.ಸಿ.ಯವರ ಜೊತೆ ಫೋನ್ ಮೂಲಕ ಮಾತುಕತೆ ನಡೆಸಿದ ಬಳಿಕ ಮರು ಚುನಾವಣೆ ನಡೆಸಲು ಮುಂದಾದ ಚುನಾವಣಾಧಿಕಾರಿಯವರು ಎಲ್ಲ ಸದಸ್ಯರನ್ನೂ ಸಭಾಂಗಣಕ್ಕೆ ಬರುವಂತೆ ವಿನಂತಿಸಿದರು.ಈ ವೇಳೆ ಪ್ರತಿಭಟನಾ ನಿರತ ಸದಸ್ಯರಾದ ಚಂದ್ರಹಾಸ, ಪ್ರದೀಪ್ ಕುಮಾರ್ ಮತ್ತಿತರರು ನೀವು ಕರೆದರೆ ನಾವು ಮರು ಚುನಾವಣೆಗೆ ಬರುವುದಿಲ್ಲ,ನಿಮ್ಮಲ್ಲಿ ವಿಶ್ವಾಸವಿಲ್ಲ ಎಂದರು.ಬಿಜೆಪಿ, ಪುತ್ತಿಲ ಪರಿವಾರದಿಂದ ನಾಮಪತ್ರ ಸಲ್ಲಿಸಿದ್ದವರು ಮತ್ತು ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿ ಉಪಾಧ್ಯಕ್ಷ ಸ್ಥಾನದ ಮರು ಚುನಾವಣೆಯಿಂದ ದೂರವುಳಿದರು.

ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ
ನನ್ನ ಕರ್ತವ್ಯವನ್ನು ನಾನು ನಿಭಾಯಿಸಿದ್ದೇನೆ, ಮರು ಚುನಾವಣೆಗೆ ಎಲ್ಲ ಸದಸ್ಯರಿಗೂ ಆಹ್ವಾನ ನೀಡಿದ್ದೆ.ನನ್ನ ಪ್ರಕ್ರಿಯೆ ಮುಗಿಸಿದ್ದೇನೆ-
-ಶಿವಶಂಕರ್, ಚುನಾವಣಾಧಿಕಾರಿ



LEAVE A REPLY

Please enter your comment!
Please enter your name here