ಆಲಂಕಾರು: ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಗೆ ನೂತನ ಕೊಠಡಿ ನಿರ್ಮಾಣ ಮತ್ತು2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಸರಕಾರಿ ನಿಯಮದಂತೆ ಆಯ್ಕೆ ಮಾಡುವಂತೆ ಎರಡು ಪ್ರತ್ಯೇಕ ಮನವಿಯನ್ನು ಶಾಸಕರಿಗೆ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಲಾಭಿವೃಧ್ದಿ ಸಮಿತಿಯಿಂದ ಸಲ್ಲಿಸಲಾಯಿತು.
1954ರಲ್ಲಿ ಆರಂಭಗೊಂಡಿರುವ ಈ ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಎಂಟನೇ ತರಗತಿವರೆಗೆ 110 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 69 ವರ್ಷಗಳ ಹಿಂದೆ ಈ ಶಾಲಾ ಕಟ್ಟಡಗಳು ನಿರ್ಮಿಸಲಾಗಿದ್ದು, ಇದೀಗ ಈ ಕಟ್ಟಡಗಳ ಗೋಡೆಗಳು ಬಿರುಕು ಬಿಟ್ಟಿದ್ದು ಮೇಲ್ಛಾವಣಿಗಳು ಗೆದ್ದಲು ಹಿಡಿದಿವೆ. ಪರಿಣಾಮ ಕಟ್ಟಡ ಮುಂದಿನ ದಿನಗಳಲ್ಲಿ ಕುಸಿದು ಬೀಳುವ ಹಂತವನ್ನು ತಲುಪಿದ್ದು ವಿದ್ಯಾರ್ಥಿಗಳು ಜೀವಭಯದಿಂದ ಕುಳಿತುಕೊಳ್ಳುವ ಅನಿವಾರ್ಯತೆ ಬಂದೊದಗಿದೆ ಎಂಬ ಮನವರಿಕೆಯ ಮನವಿ ಪತ್ರವನ್ನು ಕ್ಷೇತ್ರದ ಶಾಸಕರಿಗೆ ನೀಡಲಾಯಿತು.
ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿಯನ್ನು ನೀಡುವ ಉದ್ದೇಶವನ್ನಿಟ್ಟುಕೊಂಡು ಸರಕಾರಿ ಶಾಲೆಗಳತ್ತ ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುವ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲೆ ನಡೆಸಲು ಸರಕಾರಿ ನಿಯಮದಂತೆ ಆಯ್ಕೆ ಮಾಡಲು ಅನುಮತಿ ಕೋರಿ ಎರಡು ಪ್ರತ್ಯೇಕ ಮನವಿಯನ್ನು ಸ್ಥಳೀಯ ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ಮತ್ತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ ಶೆಟ್ಟಿ, ಶಾಲಾಭಿವೃಧ್ದಿ ಸಮಿತಿ ಸದಸ್ಯರಾದ ವಾಮನ ಬರಮೇಲು, ಪಧ್ಮನಾಭ ಶೆಟ್ಟಿ , ಹಳೆ ವಿದ್ಯಾರ್ಥಿ ಅಬ್ದುಲ್ ಗಫ್ಫಾರ್ ಕೆಮ್ಮಾರ ಉಪಸ್ಥಿತರಿದ್ದರು.