ಶ್ರಾವಣ ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಪೂಜಿಸಿದಾಗ ಜೀವನ ಪಾವನ-ಸಾಯಿ ಶಾಂತಿ
ಪುತ್ತೂರು: ಹಿಂದು ಸನಾತನ ಸಂಸ್ಕೃತಿಯಲ್ಲಿ ಫಲ ಕೊಡುವ ಬೇರೆ ಬೇರೆ ವೃತವಿದೆ. ಅದರಲ್ಲೂ ಶ್ರಾವಣ ಶುಕ್ರವಾರದಂದು ಲಕ್ಷ್ಮೀದೇವಿಯನ್ನು ಪೂಜಿಸಿದಾಗ ಜೀವನ ಪಾವನವೆನಿಸುತ್ತದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಅರ್ಚಕ ಸಾಯಿ ಶಾಂತಿಯವರು ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರ ಪುತ್ತೂರು ಮತ್ತು ಬಿಲ್ಲವ ಮಹಿಳಾ ವೇದಿಕೆ ಪುತ್ತೂರು ಇದರ ವತಿಯಿಂದ ಆ.೨೫ ರ ಶ್ರಾವಣ ಶುಕ್ರವಾರದಂದು ಪುತ್ತೂರು ಬಿಲ್ಲವ ಸಂಘದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯು ಬೆಳಿಗ್ಗೆಯಿಂದ ಪ್ರಾರಂಭವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾತನಾಡಿದರು. ವಿಶ್ವದಲ್ಲಿ ಮಾನವ ಜನ್ಮ ಸೇರಿ ಸುಮಾರು 84 ಲಕ್ಷ ಜೀವರಾಶಿಗಳಿದ್ದರೂ ಮಾನವ ಜನ್ಮವೇ ಶ್ರೇಷ್ಟ ಎಂದು ಹೇಳಲಾಗುತ್ತಿದೆ. ಯಾರು ಇಚ್ಛಾಶಕ್ತಿ, ಜ್ಞಾನ ಶಕ್ತಿ ಹಾಗೂ ಕ್ರಿಯಾ ಶಕ್ತಿ ಒಲಿಸಿಕೊಳ್ಳುತ್ತಾರೆ ಅವರನ್ನು ದೇವರು ಖಂಡಿತಾ ಹರಸುತ್ತಾರೆ ಜೊತೆಗೆ ಶ್ರದ್ಧಾಭಕ್ತಿಯಿಂದ ದೇವರಲ್ಲಿ ಪೂಜಿಸಿಕೊಂಡಾಗ ದೇವರು ನಮ್ಮ ಕಷ್ಟ, ಕಾರ್ಪಣ್ಯಗಳನ್ನು ದೂರ ಮಾಡಬಲ್ಲನು ಎಂದರು.
ಸರಕಾರದಿಂದ ಗೃಹಲಕ್ಷ್ಮೀ ಯೋಜನೆಯಡಿ ಅನುದಾನ ಮಹಿಳೆಯರ ಸ್ಥಾನಮಾನ ಹೆಚ್ಚಿಸಿದೆ-ಸತೀಶ್ ಕೆಡೆಂಜಿ:
ಉದ್ಘಾಟನೆಯನ್ನು ನೆರವೇರಿಸಿದ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕಡೆಂಜಿ ಮಾತನಾಡಿ, ಬಿಲ್ಲವ ಮಹಿಳಾ ವೇದಿಕೆಯು ಹಿಂದು ಸಂಸ್ಕೃತಿಯಂತೆ ಕಳೆದ ಹದಿನೈದು ವರ್ಷಗಳಿಂದ ಶ್ರೀ ವರಮಹಾಲಕ್ಷ್ಮೀ ಪೂಜಾ ವೃತವನ್ನು ನಿರಂತರವಾಗಿ ಆಚರಿಸಿಕೊಂಡು ಬಂದಿದ್ದು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಹೆಚ್ಚಿಸಿದೆ ಮಾತ್ರವಲ್ಲ ಸರಕಾರವೇ ಗೃಹಲಕ್ಷ್ಮೀ ಯೋಜನೆಯಡಿ ಅನುದಾನ ನೀಡುವ ಮೂಲಕ ಮತ್ತೂ ಮಹಿಳೆಯರ ಸ್ಥಾನಮಾನ ಹೆಚ್ಚಿಸಿದೆ. ಲಕ್ಷ್ಮೀಯನ್ನು ಭಕ್ತಿಪೂರ್ವಕವಾಗಿ ಆಚರಿಸಿದಾಗ ದೇವರು ಖಂಡಿತಾ ಅನುಗ್ರಹವೀಯುತ್ತಾನೆ ಎಂದರು.
ಧಾರ್ಮಿಕ ಶಿಕ್ಷಣದೊಂದಿಗೆ ಭಜನೆ, ಗೌರವ ಹೊಂದುವುದು ಅಗತ್ಯ-ನವೀನ್ ಭಂಡಾರಿ:
ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ಹಿಂದೂ ಸನಾತನ ಸಂಸ್ಕೃತಿಯಂತೆ ಎಲ್ಲಾ ಹಬ್ಬಗಳನ್ನು ಹಿಂದೂಗಳು ವಿಜ್ರಂಭಣೆಯಾಗಿ ಆಚರಿಸುತ್ತಿರುವುದು ಶುಭ ಸಂಕೇತವಾಗಿದ್ದು ಮುಂದೆಯೂ ಇದು ನಡೆಯುವಂತಿರಲಿ. ಪ್ರಸ್ತುತ ವಿದ್ಯಾಮಾನದಲ್ಲಿ ತಾಂತ್ರಿಕವಾಗಿ ಎಲ್ಲವೂ ಮುಂದುವರೆದಿರುವಾಗ ಧಾರ್ಮಿಕ ಶಿಕ್ಷಣ ಕಲಿಸುವುದರ ಮೂಲಕ ಮನೆಗಳಲ್ಲಿ ಭಜನೆ, ಹಿರಿಯರಿಗೆ ಗೌರವವನ್ನು ಹೊಂದುವುದು ಕೂಡ ಅಗತ್ಯವಾಗಿ ಬೇಕಾಗಿದೆ ಎಂದರು.
ಹೆಣ್ಣು ಅಬಲೆಯಲ್ಲ, ಸಮಸ್ಯೆ ಬಂದಾಗ ಹೋರಾಡುವ ಶಕ್ತಿಯನ್ನೂ ಹೊಂದಬಲ್ಲಳು-ತನುಜಾ:
ಶಿಕ್ಷಣ ಇಲಾಖೆಯ ಬಿ.ಆರ್.ಸಿ ಶ್ರೀಮತಿ ತನುಜಾ ಮಾತನಾಡಿ, ಹೆಣ್ಣಿನ ಬಾಲ್ಯದಲ್ಲಿ ತಂದೆ ರಕ್ಷಕರಾಗಿ, ಬೆಳೆದು ಬಂದಾಗ ಅಣ್ಣ-ತಮ್ಮ, ಮದುವೆಯಾದಾಗ ಗಂಡ, ಪ್ರಾಯ ಆದಾಗ ಮಗ ಹೀಗೆ ರಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಪ್ರತೀ ಕಾಲಘಟ್ಟದಲ್ಲಿ ಹೆಣ್ಣು ಪುರುಷರಿಂದ ರಕ್ಷಣೆಗೊಳಗಾಗುತ್ತಾರೆ. ಆದರೆ ಹೆಣ್ಣು ಅಬಲೆಯಲ್ಲ, ಸಮಸ್ಯೆ ಬಂದಾಗ ಹೋರಾಡುವ ಶಕ್ತಿಯನ್ನೂ ಹೆಣ್ಣು ಹೊಂದಬಲ್ಲಳು. ಧಾರ್ಮಿಕತೆಯೊಂದಿಗೆ ಸಮಾಜದಲ್ಲಿ ನಾವು ಮತ್ತೊಬ್ಬರಿಗೆ ಸಹಾಯಹಸ್ತ ನೀಡಿದಾಗ, ಮತ್ತೊಬ್ಬರ ಮೊಗದಲ್ಲಿ ಮಂದಹಾಸ ಕಂಡಾಗ ಅದು ಶಕ್ತಿ ಎನಿಸಬಲ್ಲುದು. ಟಿ.ವಿಯಲ್ಲಿ ಬೆಳಿಗ್ಗೆ ಭವಿಷ್ಯವನ್ನು ನೋಡಿ ತಮ್ಮ ಭವಿಷ್ಯವನ್ನು ಖಂಡಿತಾ ಹಾಳು ಮಾಡಿಕೊಳ್ಳಬೇಡಿ ಎಂದು ಹೇಳಿ ತನ್ನೊಂದಿಗೆ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ಸೀತಮ್ಮರವರಿಗೆ ತನಗೆ ಹೊದಿಸಿದ ಶಾಲನ್ನು ಹಾಕುವ ಮೂಲಕ ಗೌರವಿಸಿದರು.
ನಾರಾಯಣಗುರುಗಳ ಧ್ಯೇಯವಾಕ್ಯದಂತೆ ನಮ್ಮ ಜೀವನ ಸಾಗಲಿ-ಡಾ|ಚಾಂದಿನಿ:
ಡಾ|ಕೆ.ಶಿವರಾಮ ಕಾರಂತ ಸರಕಾರಿ ಪ್ರೌಢಶಾಲೆ ಪುತ್ತೂರು ಇಲ್ಲಿನ ಸಹಶಿಕ್ಷಕಿ ಡಾ|ಚಾಂದಿನಿರವರು ಮಾತನಾಡಿ, ನಾರಾಯಣಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಧ್ಯೇಯವಾಕ್ಯದಂತೆ ಬಿಲ್ಲವ ಸಮುದಾಯ ಬಾಳುತ್ತಿದೆ. ಶ್ರೀ ವರಮಹಾಲಕ್ಷ್ಮೀ ವೃತದಲ್ಲಿ ಪೂಜೆ ಮಾಡಿಸಿಕೊಂಡ ಹೆಣ್ಣು ಮಗಳು ಖಂಡಿತಾ ದೇವರು ಸಮರ್ಪಿಸಿಕೊಂಡಿದ್ದಾರೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಶಾಶ್ವತ ಪೂಜೆಯನ್ನು ಮಾಡಿಸಿ-ಉದಯ ಕೋಲಾಡಿ:
ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಉದಯ ಕುಮಾರ್ ಕೋಲಾಡಿ ಮಾತನಾಡಿ, ಮಹಿಳೆಯರು ಶ್ರೀ ವರಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನಡೆಸುವ ಮೂಲಕ ಎಲ್ಲವೂ ಒಳ್ಳೆಯದಾಗುತ್ತದೆ ಮಾತ್ರವಲ್ಲ ಕುಟುಂಬಕ್ಕೆ, ಸಮಾಜಕ್ಕೆ ಒಳಿತ್ತನ್ನು ಮೂಡಿಸುತ್ತದೆ. ಇದೇ ತಿಂಗಳು ಬಿಲ್ಲವ ಸಂಘದಲ್ಲಿ ಸಂಭ್ರಮದ ಗುರುಪೂಜೆ ಜರಗಲಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಶಾಶ್ವತ ಪೂಜೆಯನ್ನು ಮಾಡಿಸಿಕೊಂಡು ಸಹಕರಿಸಬೇಕು ಎಂದರು.
ಉಪ್ಪಿನಂಗಡಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ನಿವೇದಿತಾ ದಡ್ದು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಪೂಜಾ ವಸಂತ್ ಮತ್ತು ಬಳಗ ಪ್ರಾರ್ಥಿಸಿದರು. ಬಿಲ್ಲವ ಮಹಿಳಾ ವೇದಿಕೆಯ ಸಂಚಾಲಕಿ ಶ್ರೀಮತಿ ಉಷಾ ಅಂಚನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಬಾಳಪ್ಪ ಪೂಜಾರಿ, ವಿಜಯಕುಮಾರ್ ಸೊರಕೆ, ಅಶ್ವಿನಿ ಚಂದ್ರ, ಬಿಲ್ಲವ ಮಹಿಳಾ ವೇದಿಕೆಯ ಬೇಬಿ, ಮಾಜಿ ಸಂಚಾಲಕಿ ವಿಶಾಲಾಕ್ಷಿ ಬನ್ನೂರು, ಕಾರ್ಯದರ್ಶಿ ಸುಶ್ಮಾ ಸತೀಶ್, ಜೊತೆ ಕಾರ್ಯದರ್ಶಿ ಆಶಾ, ನಿಕಟಪೂರ್ವ ಅಧ್ಯಕ್ಷೆ ಚಂದ್ರಕಲಾ ಮುಕ್ವೆರವರು ಹೂ ನೀಡಿ, ಶಾಲು ಹೊದಿಸಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ವಿಮಲ ಸುರೇಶ್ ವಂದಿಸಿದರು. ನಿವೃತ್ತ ಶಿಕ್ಷಕಿ ವೇದಾವತಿ ಮುಕ್ವೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಲ್ಪಟ್ಟಿತು.
ಕಣ್ಮಣ ಸೆಳೆದ ಕುಣಿತ ಭಜನೆ..
ಅರ್ಚಕರಾದ ಸಾಯಿ ಶಾಂತಿ ಹಾಗೂ ಜಗದೀಶ್ ಶಾಂತಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಲ್ಪಟ್ಟಿತ್ತು. ವೃತಾಚರಣೆ ಮಾಡಿದ ಎಲ್ಲರಿಗೂ ಸೀರೆ, ಹಸಿರು ಬಳೆ, ಕುಂಕುಮ, ದಾರವನ್ನು ಭಕ್ತಿ ಪೂರ್ವಕವಾಗಿ ವಿತರಿಸಲಾಯಿತು. ಮಧ್ಯಾಹ್ನ ಶ್ರಾವಣ ಸಂಭ್ರಮ ಕಾರ್ಯಕ್ರಮ ಜರಗಿದ್ದು ಮೊದಲಿಗೆ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ ಪಿ.ಎಸ್ರವರಿಂದ ಭಕ್ತಿಗೀತೆ ಜರಗಿತು. ಬಳಿಕ ವಿವಿಧ ಭಜನಾ ತಂಡಗಳಿಂದ ವೈವಿಧ್ಯಮಯ ಕುಣಿತ(ನೃತ್ಯ) ಭಜನಾ ಸ್ಪರ್ಧೆ ನಡೆದು ಎಲ್ಲರ ಕಣ್ಮಣ ಸೆಳೆಯಿತು. ಜಾತಿ, ಭೇದ, ಮತ ಭಾವನೆಗಳ ಯಾವುದೇ ವ್ಯಾಪ್ತಿ ಇಲ್ಲದೇ ಎಲ್ಲರೂ ತಂಡದಲ್ಲಿ ಭಾಗಿಗಳಾಗಬಹುದಾಗಿದ್ದು, ತಂಡದ ಸದಸ್ಯರ ಮಿತಿ ಇರುವುದಿಲ್ಲ. ೧೦ ನಿಮಿಷಗಳ ಕಾಲಾವಕಾಶ ಇದ್ದು ಭಜನಾ ಪರಿಕರಗಳಾದ ತಬಲಾ, ತಾಳ, ಕ್ಯಾಸೆಟ್ಗಳನ್ನೂ ಬಳಸಬಹುದು. ಯಾವುದೇ ಪರಿಕರಗಳನ್ನು ಬಳಸಿದರೂ ತಮ್ಮ ನೃತ್ಯ(ಕುಣಿತ) ಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಸಂಘವು ಮೊದಲೇ ಸೂಚನೆ ನೀಡಿತ್ತು.
ಸನ್ಮಾನ/ಗೌರವ:
ಈ ಸಂದರ್ಭದಲ್ಲಿ ಪೂಜೆಗೆ ಬೇಕಾದಂತಹ ಬಳೆ, ಅರಿಸಿನ ಕುಂಕುಮ ಇವುಗಳನ್ನು ಕೊಟ್ಟು ಸಹಕರಿಸಿದ ಬಿ.ಡಿ.ಆರ್.ಟಿ ತನುಜಾ ಹಾಗೂ ಅಶ್ವಿನಿ ಚಂದ್ರರವರನ್ನು ಗುರುತಿಸಿ ಸನ್ಮಾನಿಸಲಾಯಿತು. ವರ್ಷಂಪ್ರತಿ ಪೂಜೆಗೆ ತೆಂಗಿನಕಾಯಿಗಳನ್ನು ನೀಡುವ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆ ಹಾಗೂ ಶ್ರೀಮತಿ ಸುಕೃತಾ ವಿ.ಸೊರಕೆ ದಂಪತಿಗಳಿಗೆ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.