ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಲಾ ಸಂಘದ ವತಿಯಿಂದ ವ್ಯಕ್ತಿತ್ವ ಒಂದು ಕನ್ನಡಿ ಕುರಿತಾದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿವೇಕಾನಂದ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ಮಾತನಾಡಿ ನಾವು ಸಮಾಜವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಬದಲಾದಾಗ ಮಾತ್ರ ಸಮಾಜ ಬದಲಾಗಲು ಸಾಧ್ಯ. ಆದ್ದರಿಂದ ಮೊದಲು ನಾವು ನಮ್ಮ ಬದುಕಿನಲ್ಲಿ ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತಿನ ಅರ್ಥದಂತೆ ವ್ಯಕ್ತಿಗೆ ಅವನ ಉತ್ತಮ ವ್ಯಕ್ತಿತ್ವವೇ ಭೂಷಣವಾಗಬೇಕು. ಒಬ್ಬ ಶಿಲ್ಪಿಯಾಗಿ, ಒಬ್ಬ ಸಂಗೀತಗಾರನಾಗಿ ಹಾಗೂ ಒಬ್ಬ ಕಥೆಗಾರನಾಗಿ ನಮ್ಮ ನಿತ್ಯಜೀವನದ ನಮ್ಮ ವರ್ತನೆಗಳ ನಮ್ಮ ವ್ಯಕ್ತಿತ್ವಕ್ಕೊಂದು ಸುಂದರ ಮೆರುಗು ನೀಡುವಂತಹ ಒಬ್ಬ ಮಹಾನ್ ಕಲಾವಿದ ಎಲ್ಲರ ಹೃದಯದೊಳಗೂ ಅಡಗಿರುತ್ತಾನೆ. ಅವನನ್ನು ಗುರುತಿಸಿ, ಪೂಜಿಸಿ, ಆರಾಧಿಸಿ ಒಲಿಸಿಕೊಳ್ಳುವಂತಹ ಕೆಲಸವನ್ನೋ ನಾವು ಯಾವಾಗ ಪ್ರಾರಂಭಿಸುತ್ತೇವೆಯೋ ಅಂದೇ ನಮ್ಮ ವ್ಯಕ್ತಿತ್ವ ಒಂದು ಹೊಸ ರೂಪ ಪಡೆದುಕೊಳ್ಳಲು ಆರಂಭಿಸುತ್ತದೆ. ತನ್ನ ನಡೆ-ನುಡಿಗಳಲ್ಲಿ ನಂಬಿಕಸ್ಥನಾಗಿ ಬದುಕುವುದು, ತನ್ನ ಆಚಾರ-ವಿಚಾರಗಳಲ್ಲಿ ಸುಸಂಸ್ಕೃತನಾಗಿರುವುದು, ಶಿಸ್ತುಬದ್ಧ ಜೀವನಶೈಲಿಯೊಂದಿಗೆ ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳುವುದು ಹಾಗೂ ತನ್ನೊಳಗಿರುವ ಕಲಾವಿದನೊಂದಿಗೆ ತನ್ನನ್ನು ತಾನು ಅರ್ಪಿಸಿಕೊಳ್ಳುವುದರಿಂದ ನಮ್ಮ ವ್ಯಕ್ತಿತ್ವದ ಮೆರುಗು ಸುಂದರವಾಗಿ ಮೈದಾಳಿ ನಿಲ್ಲುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ಸಂತೋಷದಿಂದ ಮಾಡಲಾರಂಭಿಸಿದಾಗ ನಮ್ಮ ಹೃದಯ ಶ್ರೀಮಂತವಾಗುತ್ತದೆ. ಧನ್ಯತಾಭಾವದಿಂದ ಸಂಭ್ರಮಿಸುವಂತಾಗುತ್ತದೆ ಎಂದರು. ಅಲ್ಲದೆ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹೆತ್ತವರ ಪಾತ್ರದ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ಇಂದಿರಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಜೊತೆಕಾಯದರ್ಶಿ ಶೀಮತಿ ವೀಣಾಕಿರಣ್ ಬಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಯಶವಂತಿ, ಸಾಯಿಸುಧಾ, ಹೇಮಲತ ಮತ್ತು ಉಷಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೂರ್ವಿಕ ಸ್ವಾಗತಿಸಿ ಅನಘ ವಂದಿಸಿದರು. ಭೂಮಿಕ ಕಾರ್ಯಕ್ರಮ ನಿರೂಪಿಸಿದರು.