ನಮ್ಮ ನಿರಪರಾಧಿತನ ವನ್ನು ಅಣ್ಣಪ್ಪ ಸ್ವಾಮಿಯೆದುರು ಹೇಳಿಕೊಳ್ಳುತ್ತೇವೆ

0

ನಮ್ಮನ್ನು ಆರೋಪಿಸಿದ ರೀತಿಯಲ್ಲಿ ಕುಸುಮಾವತಿಯವರೂ ಪ್ರಮಾಣ ಮಾಡಲಿ

ಪುತ್ತೂರು:ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕೆಂದು ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿವೆ.ಈ ನಡುವೆ ಆ.27ರಂದು ವಿಶ್ವ ಹಿಂದೂ ಪರಿಷತ್,ಬಜರಂಗದಳ ಧರ್ಮಸ್ಥಳಕ್ಕೆ ಪಾದಯಾತ್ರೆ ಆಯೋಜಿಸಿದ್ದು ಇದರಲ್ಲಿ ಸೌಜನ್ಯ ತಾಯಿ ಕುಸುಮಾವತಿಯವರು ಭಾಗವಹಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.ಈ ಹಿನ್ನಲೆಯಲ್ಲಿ, ಸೌಜನ್ಯ ತಾಯಿಯವರು ಆರೋಪ ಮಾಡಿರುವ ಮೂವರು ಯುವಕರಾದ ಧೀರಜ್ ಕೆಲ್ಲ, ಮಲಿಕ್ ಜೈನ್ ಮತ್ತು ಉದಯ್ ಜೈನ್‌ರವರು ತಾವು ಪ್ರಮಾಣಕ್ಕೆ ಸಿದ್ಧ ಎಂದು ವಾಟ್ಸ್‌ಆಪ್ ಸಂದೇಶ ರವಾನಿಸಿದ್ದಾರೆ.


ನಾಳೆ(ಆ.27)ಅಣ್ಣಪ್ಪ ಸ್ವಾಮಿಯ ಬೆಟ್ಟದ ಸಮೀಪ ಕಾಯುತ್ತಿರುತ್ತೇವೆ, ನಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲವೆಂದು ಪ್ರಮಾಣ ಮಾಡಲು ಸಿದ್ಧ’ ಎಂಬ ವಾಟ್ಸಾಪ್ ಸಂದೇಶದ ಬಗ್ಗೆ ಮಲಿಕ್ ಜೈನ್‌ರವರಲ್ಲಿಸುದ್ದಿ’ ವಿಚಾರಿಸಿದಾಗ,ಹೌದು ನಾವು ಪ್ರಮಾಣಕ್ಕೆ ಸಿದ್ಧರಿದ್ದೇವೆ.ಅದಕ್ಕಾಗಿ ಮೆಸೇಜ್ ಹಾಕಿದ್ದೇವೆ.ಕುಸುಮಾವತಿಯವರು ದಯವಿಟ್ಟು ಬರಬೇಕು.ನಾವು ಪ್ರಮಾಣ ಮಾಡುತ್ತೇವೆ.ಅವರೂ ಪ್ರಮಾಣ ಮಾಡಲಿ ಅನ್ನುವ ಕಾರಣಕ್ಕೆ ಸಂದೇಶ ರವಾನಿಸಿದ್ದೇವೆ’ ಎಂದು ತಿಳಿಸಿದರು.


ಧೀರಜ್ ಕೆಲ್ಲ,ಮಲಿಕ್ ಜೈನ್, ಉದಯ್ ಜೈನ್ ವಾಟ್ಸಪ್ ಸಂದೇಶ
ವಾಟ್ಸಾಪ್ ಮೆಸೆಜ್‌ನಲ್ಲಿ ಏನಿದೆ?
ಸೌಜನ್ಯ ತಾಯಿ ಕುಸುಮಾವತಿಯವರಿಗೊಂದು ಸುವರ್ಣವಕಾಶ.ನಾಳೆ ದಿನಾಂಕ 27.08.2023ರ ಭಾನುವಾರದಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಪಾದಯಾತ್ರೆಯೊಂದನ್ನು ಆಯೋಜಿಸಿದ್ದು, ತಾವು ಈ ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ತಿಳಿದುಬಂದಿರುತ್ತದೆ.ಪ್ರಕರಣ ನಡೆದು ಸುಮಾರು ಒಂದು ವರ್ಷಗಳ ನಂತರ ನಮ್ಮ ಮೂರು ಜನರ ಹೆಸರನ್ನು ಉಲ್ಲೇಖಿಸಿ ಆರೋಪಗಳನ್ನು ಮಾಡಿರುತ್ತೀರಿ.ವಿವಿಧ ತನಿಖೆಗಳ ನಂತರ ನಾವು ನಿರಪರಾಧಿಗಳೆಂದು ನ್ಯಾಯಾಲಯ ತೀರ್ಪು ಕೊಟ್ಟ ನಂತರವೂ ನಮ್ಮ ಬಗ್ಗೆ ರಾಜ್ಯಾದ್ಯಂತ ಆರೋಪಗಳನ್ನು ಮಾಡುತ್ತಾ ತಿರುಗುತ್ತಿರುವಿರಿ.ನಾಳೆ(ಆ.27)ನಿಮಗೊಂದು ಸುವರ್ಣ ಅವಕಾಶ. ಬಹುಷಃ ಅಣ್ಣಪ್ಪ ಸ್ವಾಮಿಯ ಇಚ್ಛೆಯೇ ಇದಾಗಿರಬಹುದು.ನಾವು ಮೂರು ಜನ ಅಣ್ಣಪ್ಪ ಸ್ವಾಮಿಯ ಮುಂದೆ ನಮ್ಮ ನಿರಪರಾಧಿತನವನ್ನು ಹೇಳಿಕೊಳ್ಳುತ್ತೇವೆ.ನೀವು ಭಾಷಣಗಳಲ್ಲಿ ನಮ್ಮನ್ನು ಆರೋಪಿಸಿದ ರೀತಿಯಲ್ಲಿ ಅಣ್ಣಪ್ಪನ ಮುಂದೆ ಪ್ರಮಾಣ ಮಾಡಿ.ನ್ಯಾಯ ತೀರ್ಮಾನ ಅಣ್ಣಪ್ಪನ ಮೆಟ್ಟಿಲಲ್ಲಿಯೇ ಆಗಲಿ.ಈ ಅವಕಾಶ ಸೃಷ್ಟಿಸಿದ ವಿಶ್ವಹಿಂದೂ ಪರಿಷತ್, ಬಜರಂಗದಳಕ್ಕೆ ಧನ್ಯವಾದಗಳು-
ಧೀರಜ್ ಕೆಲ್ಲ,ಮಲಿಕ್ ಜೈನ್, ಉದಯ್ ಜೈನ್

ಅಣ್ಣಪ್ಪನ ಮುಂದೆ ಇಂದು ನಡೆಯಲಿದೆಯಾ ಪ್ರಮಾಣ?
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಆ.27ರಂದು ವಿಶ್ವಹಿಂದೂ ಪರಿಷತ್, ಬಜರಂಗದಳ ಆಯೋಜಿಸಿರುವ ಪಾದಯಾತ್ರೆಯಲ್ಲಿ ಸೌಜನ್ಯ ಅವರ ತಾಯಿ ಕುಸುಮಾವತಿ ಭಾಗವಹಿಸಲಿದ್ದಾರೆಯೇ?ಧೀರಜ್ ಕೆಲ್ಲ, ಮಲಿಕ್ ಜೈನ್ ಮತ್ತು ಉದಯ್ ಜೈನ್ ಅವರು ವಾಟ್ಸಾಪ್ ಸಂದೇಶದಲ್ಲಿ ತಿಳಿಸಿರುವಂತೆ ಆ.27ರಂದು ಧರ್ಮಸ್ಥಳದಲ್ಲಿ ಅಣ್ಣಪ್ಪನ ಸನ್ನಿಧಿಯಲ್ಲಿ ಕುಸುಮಾವತಿಯವರು ಪ್ರಮಾಣ ಮಾಡುವರೇ? ಧೀರಜ್ ಕೆಲ್ಲ, ಮಲಿಕ್ ಜೈನ್, ಉದಯ್ ಜೈನ್ ಅವರೂ ಪ್ರಮಾಣ ಮಾಡುವರೇ? ಎನ್ನುವ ಕುತೂಹಲ ಸೃಷ್ಟಿಯಾಗಿದ್ದು ಆ.27ರಂದು ಇದಕ್ಕೆ ಉತ್ತರ ದೊರೆಯಲಿದೆ.

LEAVE A REPLY

Please enter your comment!
Please enter your name here