ಸೌಜನ್ಯ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆಯನ್ನಾದರೂ ನಡೆಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಲು ಡಾ. ಹೆಗ್ಗಡೆ ಪರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ

0

ಪುತ್ತೂರು: ವಿದ್ಯಾರ್ಥಿನಿ ಕು. ಸೌಜನ್ಯ ಸಾವು ಮತ್ತು ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರನ್ನು ಸ್ಥಾಪಿತ ಹಿತಾಸಕ್ತಿಗಳು ಅವಹೇಳನ ಮಾಡುತ್ತಿರುವ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಒದಗಿಸಲು ಮತ್ತೆ ಯಾವುದಾದರೂ ಸಂಸ್ಥೆಯಿಂದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಡಾ.ಹೆಗ್ಗಡೆ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದಾರೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮತ್ತು ನಂದೀಶ್ ಕುಮಾರ್ ಜೈನ್ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅಲಿಯಾಸ್ ರವಿ ಸಹಿತ ಒಂಬತ್ತು ಮಂದಿಯನ್ನು ಪ್ರತಿವಾದಿಯನ್ನಾಗಿಸಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ತಿರುಚಿ ಸತ್ಯ ಮರೆ ಮಾಚುತ್ತಿರುವ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಹಾಗೂ ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ನಿಂದಿಸುತ್ತಿರುವ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ರಿಟ್ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಸೌಜನ್ಯ ಹತ್ಯೆ ಪ್ರಕರಣದ ಕುರಿತು ಈಗಾಗಲೇ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಜಾರ್ಜಾಶೀಟ್ ಸಲ್ಲಿಸಿದ್ದು, ಪ್ರಕರಣದಲ್ಲಿ ಬಂಧಿತನಾಗಿದ್ದ ಕಾರ್ಕಳದ ಸಂತೋಷ್ ರಾವ್‌ನನ್ನು ನ್ಯಾಯಾಲಯ ನಿರಪರಾಧಿ ಎಂದು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿದೆ. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ಬಗೆಗೆ ಅಪಪ್ರಚಾರ ನಡೆಯುತ್ತಿದೆ. ಪೊಲೀಸ್ ಇಲಾಖೆ ಬಗ್ಗೆಯೂ ಸಾರ್ವಜನಿಕವಾಗಿ ಅವಹೇಳನ ಮಾಡಲಾಗುತ್ತಿದೆ. ಯೂ ಟ್ಯೂಬ್ ಚಾನೆಲ್, ಮುದ್ರಣ ಮಾಧ್ಯಮ ಮತ್ತು ಟಿ.ವಿ. ಚಾನೆಲ್‌ಗಳಲ್ಲಿ ತಪ್ಪು ಹೇಳಿಕೆ ನೀಡಲಾಗುತ್ತಿದೆ. ಆದ್ದರಿಂದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆಯನ್ನಾದರೂ ನಡೆಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಅರ್ಜಿಯ ವಿಚಾರಣೆ ಇನ್ನಷ್ಟೇ ನ್ಯಾಯಪೀಠದ ಮುಂದೆ ಬರಬೇಕಿದೆ.

LEAVE A REPLY

Please enter your comment!
Please enter your name here