ಶಾಸಕರ ಐಶಾರಾಮಿ ಕಚೇರಿಗೆ ನಗರಸಭೆಯ ತೆರಿಗೆ ಹಣ ವಿನಿಯೋಗ ಖಂಡನೀಯ

0

ರೂ.31ಲಕ್ಷ ಹಣವನ್ನು ನಗರಸಭೆಗೆ ವಾಪಾಸು ಮಾಡದಿದ್ದರೆ ಬಿಜೆಪಿಯಿಂದ ಪ್ರತಿಭಟನೆ ಅನಿವಾರ್ಯ – ಸಂಜೀವ ಮಠಂದೂರು ಎಚ್ಚರಿಕೆ

ಪುತ್ತೂರು: ಪುತ್ತೂರಿನಲ್ಲಿ ಶಾಸಕರ ಕಚೇರಿ ಲೋಕಾರ್ಪಣೆ ಆಗಿದೆ. ಇದಕ್ಕೆ ನಾವೆಲ್ಲ ಸಂತೋಷ ಪಡಬೇಕು. ಆದರೆ ಆ ಕಚೇರಿಗೆ ನಗರಸಭೆಯ ತೆರಿಗೆ ಹಣವನ್ನು ವಿನಿಯೋಗಿಸಿದ್ದು ಖಂಡನೀಯ. ಪುತ್ತೂರು ನಗರಸಭೆಯ ರೂ. 31ಲಕ್ಷ ವೆಚ್ಚ ಮಾಡಿ ಶಾಸಕರ ಐಶಾರಾಮಿ ಕಚೇರಿ ನಿರ್ಮಾಣ ಆಗಿದೆ. ಈ ಹಣವನ್ನು ನಗರಸಭೆಗೆ ಜಿಲ್ಲಾಧಿಕಾರಿಗಳು ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿ ನೇತೃತ್ವದಲ್ಲಿ ನಗರಸಭೆ ಸದಸ್ಯರೊಂದಿಗೆ ಪುತ್ತೂರು ನಗರಸಭೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಕೆ ನೀಡಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಶಾಸಕ ಅಶೋಕ್ ರೈ ಅವರ ಕಚೇರಿ ಮಾಡಲು ಅನುದಾನ ಎಲ್ಲಿಂದ ಬಂತು ಎಂಬುದನ್ನು ಯಾರು ನೋಡಿರಿಲ್ಲ. ಪುತ್ತೂರಿನ ಇತಿಹಾಸದಲ್ಲಿ ಶಾಸಕರಾಗಿದ್ದ ಸದಾನಂದ ಗೌಡ, ಶಕುಂತಳಾ ಶೆಟ್ಟಿ, ಮಲ್ಲಿಕಾಪ್ರಸಾದ್, ನಾನು ಕೂಡಾ ಸೇರಿದಂತೆ ಯಾರು ಕೂಡಾ ಐಶಾರಾಮದ ಕಚೇರಿ ಮಾಡಿಲ್ಲ. ಜನಾಮಾನ್ಯರ ತೆರಿಗೆ ಹಣದಲ್ಲಿ ಕಚೇರಿ ಮಾಡದೆ ತಾಲೂಕು ಪಂಚಾಯತ್, ತಾಲೂಕು ಆಡಳಿತ ಸೌಧದಲ್ಲೇ ಕಚೇರಿ ಮಾಡಿದ್ದೆವು. ಜನಸಾಮಾನ್ಯರಿಗೆ ಸುಲಭವಾಗಿ ಶಾಸಕರು ಸಿಗಬೇಕೆಂಬ ನಿಟ್ಟಿನಲ್ಲಿ ಎಲ್ಲಾ ಕಡೆ ಸರಕಾರಿ ಕಚೇರಿಯಲ್ಲೇ ಮಾಡಲಾಗಿತ್ತು. ಆದರೆ ಪುತ್ತೂರು ಶಾಸಕರು ತಮ್ಮ ಕಚೇರಿಗೆ ನಗರಸಭೆಯ ರೂ. 31ಲಕ್ಷ ವನ್ನು ವಿನಿಯೋಗಿಸಿದ್ದಾರೆ. ಪುತ್ತೂರು ನಗರಸಭೆಯ ಜನರ ತೆರಿಗೆ ಹಣದಲ್ಲಿ ಈ ಕಚೇರಿಗೆ ವಿನಿಯೋಗ ಮಾಡುವ ಕೆಲಸದ ಬದಲು ಅದು ಪುತ್ತೂರಿನ ಅಭಿವೃದ್ಧಿಗೆ ವಿನಿಯೋಗ ಆಗಬೇಕಾಗಿತ್ತು. ನಗರಸಭೆಯ ಸದಸ್ಯರಿಗೆ ಅನುದಾನ ಹಂಚಿಕೆ ಮಾಡಿದಲ್ಲಿ ಅವರು ತಮ್ಮ ತಮ್ಮ ವಾರ್ಡ್‌ಗಳ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದರು. ಆದರೆ ಇಲ್ಲಿ ಶಾಸಕರು ಸೂಚನೆ ಕೊಟ್ಟು ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ನಗರಸಭೆಯ ಜನಪ್ರತಿನಿಧಿಗಳ ಗಮನಕ್ಕೂ ತಾರದೆ ನಿರ್ಣಯ ಮಾಡಿ ಅನುದಾನವನ್ನು ಶಾಸಕರ ಕಚೇರಿಗೆ ವಿನಿಯೋಗಿಸಲು ನೀಡಿರುವುದು ಖಂಡನೀಯ. ಈ ನಡುವೆ ಪುಡಾ ಕಚೇರಿನ್ನು ಖಾಸಗಿ ಕಟ್ಟಡಕ್ಕೆ ವರ್ಗಾವಣೆ ಮಾಡುವ ಮೂಲಕ ನಗರಸಭೆಗೆ ಪುಡಾದ ಬಾಡಿಗೆಯಿಂದ ಬರುವ ಅನುದಾನವು ಕಡಿತವಾಗಿದೆ. ಇದೀಗ ಪುಡಾವು ಹೆಚ್ಚುವರಿ ರೂ. 16ಸಾವಿರ ಬಾಡಿಗೆ ಕೊಡಬೇಕಾಗಿ ಬಂದಿದೆ. ಒಂದು ಶಾಸಕರ ಕಚೇರಿಗಾಗಿ ಎಷ್ಟು ಖರ್ಚನ್ನು ಸರಕಾರದ ಖಜಾನೆಯಿಂದ ಖರ್ಚು ಮಾಡುತ್ತಾರೆ ಎಂಬುದು ಜನಸಾಮಾನ್ಯರು ಯೋಚನೆ ಮಾಡಬೇಕು. ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಎಲ್ಲಿಂದ ಭ್ರಷ್ಟಾಚಾರ ಆಗುತ್ತಿದೆ. ಎಲ್ಲಿ ಸರಕಾರದ ಹಣ ಪೋಲಾಗುತ್ತಿದೆ. ಇದನ್ನು ಯೋಚನೆ ಮಾಡಬೇಕು. ಅದಕ್ಕಾಗಿ ಪುತ್ತೂರು ನಗರಸಭೆಯ ಜನರು ತೆರಿಗೆ ರೂಪದಲ್ಲಿ ನಗರಸಭೆಗೆ ಕಟ್ಟಿದ ಹಣವನ್ನು ಮತ್ತೆ ನಗರಭೆಗೆ ಜಿಲ್ಲಾಧಿಕಾರಿಯವರು ಕೊಡಿಸಬೇಕು. ಆ ಹಣದಿಂದ ನಗರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಅಭಿವೃದ್ಧಿ ಮಾಡಬಹುದು. ಇಲ್ಲವಾದಲ್ಲಿ ಮುಂದಿನ ದಿನ ಬಿಜೆಪಿಯಿಂದ ನಗರಸಭೆಯ ಮುಂದೆ ಪ್ರತಿಭಟನೆ ಅನಿವಾರ್ಯವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ನಾನು ಶಾಸಕನಾಗಿದ್ದ ಸಂದರ್ಭ ಲೋಕೋಪಯೋಗಿ ಇಲಾಖೆಯವರು ನೇರ ಸರಕಾರದಿಂದ ನೀಡಿದ ರೂ. 3ಲಕ್ಷದಲ್ಲಿ ನನ್ನ ಕಚೇರಿ ನಿರ್ಮಾಣ ಆಗಿದೆ ಎಂದರು. ಆದರೆ ಈಗಿನ ಶಾಸಕರು ಒಂದು ಕಚೇರಿಗಾಗಿ ಇಷ್ಟೊಂದು ಹೊರೆ ಭರಿಸುವುದು ಅಗತ್ಯವಿತ್ತಾ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here