ಪುತ್ತೂರು: 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಸಹಾಯಕ ಕಮೀಷನರ್ ಮೂಲಕ ಮನವಿ ಸಲ್ಲಿಸಿದರು.
ನ್ಯಾಯ ಉಳಿಯಬೇಕು, ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡಬೇಕು:
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಕುಪ್ಪೆಪದವು ಅವರು ಮಾತನಾಡಿ 11 ವರ್ಷಗಳ ಹಿಂದೆ ಸೌಜನ್ಯ ಎಂಬ ಹೆಣ್ಣುಮಗಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಿಐಡಿ, ಸಿಬಿಐ, ಕೋರ್ಟ್ ತನಿಖೆ ಎಲ್ಲಾ ನಡೆದೂ ಈ ತನಕ ಅತ್ಯಾಚಾರಿ ಮತ್ತು ಕೊಲೆಗಡುಕ ಯಾರು ಎಂದು ಕಂಡು ಹಿಡಿಯಲಾಗಿಲ್ಲ. ನಮಗೆ ಇಲ್ಲಿ ನ್ಯಾಯ ಮುಖ್ಯ. ಯಾವ ರೀತಿಯಲ್ಲಾದರೂ ಆಗಬಹುದು ನ್ಯಾಯ ಉಳಿಯಬೇಕು. ಆ ಮೂಲಕ ಧರ್ಮಸ್ಥಳದ ಪಾವಿತ್ರ್ಯತೆಯನ್ನು ಕಾಪಾಡಲು ಶ್ರೀ ಅಣ್ಣಪ್ಪ ಪಂಜುರ್ಲಿ ಮತ್ತು ಮಂಜುನಾಥ ಸ್ವಾಮಿ ಅನುಗ್ರಹ ನೀಡಬೇಕೆಂದು ಹೇಳಿದರು.
ನಿವೃತ್ತ ನ್ಯಾಯಾಧೀಶರಿಂದ ಮರುತನಿಖೆಯಾಗಲಿ:
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ್ ಶೆಟ್ಟಿಯವರು ಮಾತನಾಡಿ ಸೌಜನ್ಯ ಪ್ರಕರಣದಲ್ಲ ತನಿಖೆಗೆ ಸಹಕಾರ ನೀಡಿದ ಎಲ್ಲಾ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ನಿವೃತ್ತ ನ್ಯಾಯಾಧೀಶರಿಂದ ಮರು ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳು ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸುವಂತೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ರೈತ ಸಂಘದ ಜಿಲ್ಲಾ ಸಮಿತಿಯಿಂದ ಚಳುವಳಿ ನಡೆಸಲಾಗುವುದು ಎಂದು ಹೇಳಿದರು. ರೈತ ಸಂಘದ ಹಿರಿಯರು ಮತ್ತು ಗೌರವ ಸಲಹೆಗಾರ ಮುರುವ ಮಹಾಬಲ ಭಟ್ ಅವರು ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ಈಶ್ವರ ಭಟ್ ಬಡಿಲ, ರಾಜೀವ ಗೌಡ, ಶೇಖರ್ ರೈ, ಭಾಸ್ಕರ್ ಬ್ರಹ್ಮರಕೂಡ್ಲು, ವಸಂತ ಪೆರಾಬೆ, ಸುರೇಶ್ ಭಂಡಾರಿ, ಇಸುಬು, ಯತೀಂದ್ರ, ಭರತ್ರಾಜ್ ರೈ ಸಹಿತ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Home ಇತ್ತೀಚಿನ ಸುದ್ದಿಗಳು ಸೌಜನ್ಯ ಪ್ರಕರಣ: ಮರುತನಿಖೆಗೊಳಿಸುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ