ರೂ.2,63ಕೋಟಿ ವ್ಯವಹಾರ, ರೂ.4.42 ಲಕ್ಷ ಲಾಭ, ಶೇ.25 ಡಿವಿಡೆಂಡ್, ರೂ.1.25 ಬೋನಸ್
ಪುತ್ತೂರು: ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರ ಸಂಘವು 2022-23ನೇ ಸಾಲಿನಲ್ಲಿ ರೂ.2,63 ಕೋಟಿಯ ವ್ಯವಹಾರ ನಡೆಸಿ ರೂ.4,42,676.97 ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.25 ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ರೂ.1.25 ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಆನಂದ ಗೌಡ ಮುವಪ್ಪು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಸೆ.1ರಂದು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ 139 ಮಂದಿ ಸದಸ್ಯರಿಂದ ರೂ.31,450 ಪಾಲು ಬಂಡವಾಳ ಹೊಂದಿದೆ. ವರದಿ ವರ್ಷದಲ್ಲಿ ಸಂಘು 1,69,414.8 ಲೀಟರ್ ಹಾಲು ಖರೀದಿಸಿ, 31,267 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ಇದರಿಂದ ಸಂಘಕ್ಕೆ ರೂ.13,93,067 ಆದಾಯ ಬಂದಿರುತ್ತದೆ. ಒಕ್ಕೂಟಕ್ಕೆ ನೀಡಿದ ಹಾಲಿನಿಂದ ರೂ.47,57,389.26 ಆದಾಯ ಬಂದಿದೆ. 1474 ಚೀಲ ಪಶು ಆಹಾರ ಹಾಗೂ 977 ಕೆ.ಜಿ ಲವಣ ಮಿಶ್ರಣ ಮಾರಾಟ ಮಾಡಲಾಗಿದೆ. ಒಟ್ಟು ರೂ.2,63,95,848ಗಳ ವ್ಯವಹಾರ ನಡೆಸಿ ಸಂಘವು ರೂ.4,42,676.97 ನಿವ್ವಳ ಲಾಭ ಗಳಿಸಿದೆ. ಸಂಘವು ಗಳಿಸಿದ ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ದ.ಕ ಹಾಲೂ ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ, ಹೈನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳು, ಅವುಗಳ ಪ್ರಯೋಜನ, ಹಸುಗಳ ಪಾಲನೆ, ಪೋಷಣೆಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಒಕ್ಕೂಟದಿಂದ ಹೈನುಗಾರರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ವೆಂಕಪ್ಪ ಗೌಡ ಪಡ್ಡಾಯೂರು, ನಿರ್ದೇಶಕರಾದ ಲೂಯಿಸ್ ಲಸ್ರಾದೋ, ಶಶಿಧರ ರಾವ್ ಬಿರಾವು, ವೀಣಾ ಮತಾವು, ವಿನೋದ್ ಕುಂಜಾರು, ಕುಶಾಲಪ್ಪ ನೆಲಪ್ಪಾಲು, ಸತೀಶ್ ಪಿ.ಆರ್., ಪೆಲ್ಸಿ ಲಸ್ರಾದೋ, ಯಮುನ ಹಾಗೂ ತನಿಯಾರು ಗುರುಂಪುನಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಸಂಘದ ಹಿರಿಯ ಸದಸ್ಯ ರಾಮಣ್ಣ ಗೌಡ ನೆಲಪ್ಪಾಲು ಹಾಗೂ ಕಳೆದ 10 ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಕುಸುಮಾವತಿ ಕಲ್ಲೇಗರವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಾದ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮನ್ವಿತ್ ಬಿ.ಸಿ., ಲಿಶಾನ್ ಲಸ್ರಾದೋ, ದ್ವಿತೀಯ ಪಿಯುಸಿಯಲ್ಲಿ ತನಿಶ್ರೀ ಬಿ.ಸಿ., ಹಾಗೂ ಪದವಿಯಲ್ಲಿ ಲೈನಲ್ ಲಸ್ರಾದೋರವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಕುಶಾಲಪ್ಪ ಗೌಡ ನೆಲಪ್ಪಾಲು(ಪ್ರ), ಲೂಯಿಸ್ ಲಸ್ರಾದೋ(ದ್ವಿ) ಲೋಹಿತ್ ಎಸ್(ತೃ) ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಪ್ರಮೀಳಾ ಮುವಪ್ಪ ಪ್ರಾರ್ಥಿಸಿದರು. ಅಧ್ಯಕ್ಷ ಆನಂದ ಗೌಡ ಮುವಪ್ಪು ಸ್ವಾಗತಿಸಿದರು. ಕಾರ್ಯದರ್ಶಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡಿಸಿದರು. ಗಣೇಶ್ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿದರು. ಹಾಲು ಪರೀಕ್ಷಕಿ ರಾಜೀವಿ ಮುರ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.